ಗುರುವಾರ , ಮೇ 19, 2022
23 °C
ಪೊಲೀಸ್ ತರಬೇತಿ ಶಾಲೆಯ 3ನೇ ತಂಡದಲ್ಲಿ ಪದವೀಧರರದ್ದೇ ಸಿಂಹಪಾಲು

ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚಬೇಕಿದೆ– ಪ್ರವೀಣ್‌ಸೂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಾಜ್ಯದಲ್ಲಿ ಕನಿಷ್ಠ ಎಂದರೂ ಶೇ 20ರಷ್ಟು ಮಹಿಳಾ ಪೊಲೀಸರು ಇರಬೇಕಿತ್ತು. ಆದರೆ, ಈಗ ಶೇ 6ರಷ್ಟು ಮಾತ್ರ ಇದ್ದಾರೆ. ಮಹಿಳೆಯರು ಪೊಲೀಸ್ ಸೇವೆಗೆ ಸೇರಲು ಗಮನಹರಿಸಬೇಕು ಎಂದು ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್ ತಿಳಿಸಿದರು.

ಇಲ್ಲಿನ ಪೊಲೀಸ್ ತರಬೇತಿ ಶಾಲೆಯ 3ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ ಮನೆಯಲ್ಲೂ ಕೆಲಸ ನಿರ್ವಹಿಸಿ ಹೊರಗೂ ಕೆಲಸ ಮಾಡುವುದು ದೊಡ್ಡ ಕಷ್ಟದ ಕೆಲಸ. ಪುರುಷರಿಗೆ ಹೋಲಿಸಿದರೆ ಅವರಿಗೆ ದುಪ್ಪಟ್ಟು ಹೊಣೆಗಾರಿಕೆಗಳು ಇವೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಅವರದು ತೀವ್ರ ಕಷ್ಟದಾಯಕವಾದ ಕೆಲಸ ಎಂದು ಅವರು ಹೇಳಿದರು.

ಕಾನ್‌ಸ್ಟೆಬಲ್‌ಗಳಾದ ಸ್ನಾತಕೋತ್ತರ ಪದವೀಧರರು!

ಇಲ್ಲಿನ ಪೊಲೀಸ್ ತರಬೇತಿ ಶಾಲೆಯ 3ನೇ ತಂಡದಲ್ಲಿದ್ದ 41 ಮಂದಿ ಸ್ನಾತಕೋತ್ತರ ಪದವೀಧರರು, 151 ಮಂದಿ ಪದವೀಧರರು ಸೇರಿದಂತೆ ಒಟ್ಟು 217 ಮಂದಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಶುಕ್ರವಾರ ತರಬೇತಿಯನ್ನು ಪೂರ್ಣಗೊಳಿಸಿದರು.

ಇವರಲ್ಲಿ, ಎಂಜಿನಿಯರಿಂಗ್‌ (ಸಿವಿಲ್‌) ಪದವೀಧರೆಯೊಬ್ಬರು ಸೇರಿದಂತೆ ಹಲವು ಮಂದಿ ಉನ್ನತ ವಿದ್ಯಾಭ್ಯಾಸ ಮಾಡಿದವರೇ ‌ಆಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಂ.ಪೂಜಾಶ್ರೀ ಅವರ ಕುಟುಂಬದಲ್ಲಿ ಈಗಾಗಲೇ ಮೂವರು ಪೊಲೀಸ್‌ ಇಲಾಖೆಯಲ್ಲಿ ಸೇ‌ವೆ ಸಲ್ಲಿಸುತ್ತಿರುವುದು ವಿಶೇಷ. 

ಇವರಲ್ಲಿ 192 ಮಂದಿ ಗ್ರಾಮೀಣ ಪ್ರದೇಶಕ್ಕೆ ಸೇರಿದವರು. ಕೊಪ್ಪಳ ಜಿಲ್ಲೆಗೆ ಸೇರಿದವರ ಸಂಖ್ಯೆ (46) ಹೆಚ್ಚು ಇದ್ದು, ನಂತರದ ಸ್ಥಾನದಲ್ಲಿ ಉತ್ತರ ಕನ್ನಡ (27), ಮೈಸೂರು (26),  ದಕ್ಷಿಣ ಕನ್ನಡ (21) ಜಿಲ್ಲೆಯವರ ಸಂಖ್ಯೆ ಹೆಚ್ಚಿದೆ.  ರಾಮನಗರ ಮತ್ತು ಚಿಕ್ಕಬಳ್ಳಾಪುರದಿಂದ ತಲಾ 19, ಬೆಳಗಾವಿಯ 14, ವಿಜಯಪುರದ 10, ಧಾರವಾಡದ 8, ಚಿತ್ರದುರ್ಗದ ಮೂವರು, ಕಲಬುರ್ಗಿ ಮತ್ತು ಕೋಲಾರದ ತಲಾ ಇಬ್ಬರು ಮತ್ತು ಬಳ್ಳಾರಿ, ಬೆಂಗಳೂರು, ದಾವಣಗೆರೆ, ಹಾವೇರಿ, ಮಂಡ್ಯ, ತುಮಕೂರು, ಉಡುಪಿಯ ತಲಾ ಒಬ್ಬರು ಈ ತಂಡದಲ್ಲಿದ್ದಾರೆ.

ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಶಿವಮೊಗ್ಗ ಜಿಲ್ಲೆಯ ಎ.ತಾರಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಒಳಾಂಗಣ ವಿಭಾಗದಲ್ಲಿ ತುಮಕೂರಿನ ಎಚ್.ಎನ್.ಗೀತಾ, ಉತ್ತರ ಕನ್ನಡದ ಸಕ್ಕಿ ಪಾಟೀಲ, ಬೆಳಗಾವಿಯ ಪ್ರಭಾವತಿ ರಾಮಪ್ಪ ಸುಳ್ಳನವರ ಅವರು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.

ಹೊರಾಂಗಣ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಎ.ತಾರಾ, ರಾಮನಗರದ ಎಂ.ಇ.ರಶ್ಮಿ ಹಾಗೂ ಮಂಗಳೂರಿನ ಶಹಜಾನ, ಕೊಪ್ಪಳದ ವಿಜಯಲಕ್ಷ್ಮಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.

ಫೈರಿಂಗ್‍ನಲ್ಲಿ ಮೈಸೂರಿನ ಎಚ್.ಜಿ.ಶಿಲ್ಪಾ, ಉತ್ತರ ಕನ್ನಡದ ಎಂ.ಪೂಜಶ್ರೀ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರೆ, ಮಂಗಳೂರಿನ ಎಂ.ಜಯಶೀಲಾ ಹಾಗೂ ಉತ್ತರ ಕನ್ನಡದ ಎನ್.ಶೈಲಶ್ರೀ ತೃತೀಯ ಬಹುಮಾನವನ್ನು ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು