ಶನಿವಾರ, ಜನವರಿ 18, 2020
18 °C
ಪತ್ರ ಚಳವಳಿ ನಡೆಸಿದ ಚಿತ್ರರಂಗದ ಅಭಿಮಾನಿಗಳು

ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಿತ್ರನಗರಿಯನ್ನು ಮೈಸೂರಿನಲ್ಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ವಿಷ್ಣುವರ್ಧನ್ ಅಭಿಮಾನಿಗಳ ಬಳಗ ಹಾಗೂ ಪಾತಿ ಫೌಂಡೇಷನ್‌ ವತಿಯಿಂದ ನಗರದಲ್ಲಿ ಗುರುವಾರ ಪತ್ರ ಚಳವಳಿ ನಡೆಯಿತು.

ಜಗನ್ಮೋಹನ ಅರಮನೆಯ ಮುಂಭಾಗ ಇರುವ ಅಂಚೆ ಪೆಟ್ಟಿಗೆ ಮುಂದೆ ಸೇರಿದ ಕಾರ್ಯಕರ್ತರು, ಚಿತ್ರನಗರಿ ಮೈಸೂರಿನಲ್ಲಿ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾತಿ ಫೌಂಡೇಷನ್‌ನ ಎಂ.ಡಿ.ಪಾರ್ಥಸಾರಥಿ, ‘ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗಿನ ಸರ್ಕಾರ ಅದನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಮೈಸೂರಿನ ಆಸುಪಾಸಿನಲ್ಲಿ 250ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳಿವೆ. ಇಲ್ಲಿಯೇ ಚಿತ್ರನಗರಿ ಸ್ಥಾಪನೆಯಾದರೆ ಚಲನಚಿತ್ರ ರಂಗಕ್ಕೆ ಅನುಕೂಲವಾಗುತ್ತದೆ. ಜತೆಗೆ, ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್, ಅಶ್ವತ್ಥ್, ದರ್ಶನ್, ಯಶ್ ಸೇರಿದಂತೆ ಅನೇಕ ಕಲಾವಿದರು ಮೈಸೂರಿನವರೇ ಆಗಿದ್ದಾರೆ. ಇದರಿಂದ ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಚಿತ್ರನಗರಿ ಇಲ್ಲಿಯೇ ಸ್ಥಾಪನೆಯಾಗುವುದರಿಂದ ಸ್ಥಳೀಯರಿಗೆ ಉದ್ಯೋಗವಕಾಶಗಳು ದೊರೆಯುತ್ತವೆ. ಪ್ರವಾಸೋದ್ಯಮ ಗರಿಗೆದರುತ್ತದೆ. ವ್ಯಾಪಾರ ವಹಿವಾಟು ಹೆಚ್ಚುತ್ತದೆ. ಜಿಲ್ಲೆಯ ಆರ್ಥಿಕ ಪ್ರಗತಿಯಾಗುತ್ತದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ.ರವಿ, ಮುಖಂಡರಾದ ವಿಕ್ರಂ ಅಯ್ಯಂಗಾರ್, ಜೆ.ರಘುಕಿರಣ್, ಕಡಕೊಳ ಜಗದೀಶ್, ಚಕ್ರಪಾಣಿ, ಸುಚೀಂದ್ರ, ಗಣೇಶ್ ಪ್ರಸಾದ್, ಮಂಜುನಾಥ್, ಧರ್ಮೇಂದ್ರ, ಮಹದೇವು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)