ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕೇಂದ್ರಗಳ ಖಾಸಗೀಕರಣಕ್ಕೆ ವಿರೋಧ

ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಾರ್ಯಕರ್ತರ ಪ್ರತಿಭಟನೆ
Last Updated 11 ಸೆಪ್ಟೆಂಬರ್ 2020, 16:35 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್ ಇಂಡಿಯಾ (ಕಮ್ಯುನಿಸ್ಟ್) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಆರೋಗ್ಯ ಬಂಧು’ ಯೋಜನೆಯಡಿ ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡಲು ಮುಂದಾಗಿರುವುದು ಆಘಾತಕಾರಿ ವಿಚಾರ. ಖಾಸಗಿಯವರಿಗೆ ಸೇವೆಗಿಂತ ಲಾಭವೇ ಮುಖ್ಯವಾಗಿರುವಾಗ ಬಡ ಜನರಿಗೆ ಉತ್ತಮವಾದ ಸೇವೆ ದೊರಕಲು ಹೇಗೆ ಸಾಧ್ಯ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ಕೋವಿಡ್ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಸುಲಿಗೆಕೋರತನ, ನಿಷ್ಕಾಳಜಿಯನ್ನು ರಾಜ್ಯದ ಜನರು ಕಣ್ಣಾರೆ ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಖಾಸಗಿಯವರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳ ನಿರ್ವಹಣೆ ವಹಿಸುವುದು ‘ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವಂತೆ’ ಎಂಬ ಗಾದೆ ಮಾತನ್ನು ನೆನಪಿಸುವಂತಿದೆ ಎಂದು ವ್ಯಂಗ್ಯವಾಡಿದರು.

ಕೊರೊನಾದಂತಹ ಬಿಕ್ಕಟ್ಟಿನ ಸನ್ನಿವೇಶವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಸರ್ಕಾರ ರೈಲ್ವೆ, ವಿದ್ಯುತ್, ಬ್ಯಾಂಕ್, ವಿಮೆ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ. ಇದೀಗ ಸಾರ್ವಜನಿಕ ವಲಯದಲ್ಲಿರುವ ಆರೋಗ್ಯ ಕೇಂದ್ರಗಳನ್ನೂ ಖಾಸಗಿಯವರಿಗೆ ವಹಿಸಲು ಮುಂದಾಗಿರುವುದು ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ ಎಂಬುದಕ್ಕೆ ದ್ಯೋತಕ ಎಂದು ಕಿಡಿಕಾರಿದರು.

ಯಾವುದೇ ಕಾರಣಕ್ಕೆ ಸರ್ಕಾರದ ಸುಪರ್ದಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಲಿ ಅಥವಾ ಇನ್ಯಾವುದೇ ಆಸ್ಪತ್ರೆಗಳನ್ನಾಗಲಿ ಖಾಸಗಿಯವರಿಗೆ ವಹಿಸಬಾರದು. ಈಗ ಇರುವ ಪ್ರಸ್ತಾವವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಮೈಸೂರಿನ ಕೋವಿಡ್ ಆಸ್ಪತ್ರೆ ಹಾಗೂ ಕಾಳಜಿ ಕೇಂದ್ರಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡಬೇಕು. ಅಗತ್ಯ ಸಂಖ್ಯೆಯ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ರವಿ, ಜಿಲ್ಲಾ ಸೆಕ್ರೆಟರಿಯೇಟ್ ಸಮಿತಿ ಸದಸ್ಯರಾದ ಎಂ.ಉಮಾದೇವಿ, ಚಂದ್ರಶೇಖರ್ ಮೇಟಿ, ಸದಸ್ಯರಾದ ಸೀಮಾ, ಸಂಧ್ಯಾ, ಹರೀಶ್, ಸುನಿಲ್, ಚಂದ್ರಕಲಾ, ಆಸಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT