ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಮುತ್ತಿಗೆ; ಆಕ್ರೋಶ

ಬಾರ್ ವಿರುದ್ಧ ಸಿಡಿದೆದ್ದ ರಮ್ಮನಹಳ್ಳಿ ಜನರು
Last Updated 13 ಫೆಬ್ರುವರಿ 2020, 15:44 IST
ಅಕ್ಷರ ಗಾತ್ರ

ಮೈಸೂರು: ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಪುನರಾರಂಭಿಸಿದ ಬಾರನ್ನು ಮತ್ತೆ ಮುಚ್ಚಿಸುವಲ್ಲಿ ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮಸ್ಥರು ಗುರುವಾರ ಯಶಸ್ವಿಯಾದರು. ಇದರ ಜತೆಯಲ್ಲೇ ಮದ್ಯ ಮುಕ್ತ ಗ್ರಾಮ ನಿರ್ಮಾಣ ಮಾಡುವ ಪಣ ತೊಟ್ಟರು.

ಕೆಲ ದಿನಗಳ ಹಿಂದಷ್ಟೇ ಗ್ರಾಮಸ್ಥರೆಲ್ಲ ಸೇರಿ ಈ ಬಾರನ್ನು ಮುಚ್ಚಿಸಿದ್ದರು. ಆದರೆ ಬಾರ್ ಮಾಲೀಕರು ಪೊಲೀಸರ ನೆರವಿನೊಂದಿಗೆ ಬುಧವಾರ ಪುನರಾರಂಭ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಾರ್‌ಗೆ ಮುತ್ತಿಗೆ ಹಾಕಿ ಬಾಗಿಲು ಬಂದ್‌ ಮಾಡಿಸುವಲ್ಲಿ ಯಶಸ್ವಿಯಾದರು.

ರಮ್ಮನಹಳ್ಳಿ ಗ್ರಾಮದಲ್ಲಿ 10 ವರ್ಷಗಳಿಂದ ಉಗ್ರನರಸಿಂಹ ವೈನ್ ಸ್ಟೋರ್ ಮದ್ಯ ಮಾರಾಟ ಮಾಡುತ್ತಿದೆ. ಗ್ರಾಮದ ಬಹುತೇಕ ಪುರುಷರು ಮದ್ಯವ್ಯಸನಿಗಳಾಗಿದ್ದಾರೆ. ಹಲವು ಸಂಸಾರ ಬೀದಿಗೆ ಬಿದ್ದಿವೆ. ಕಳಪೆ ಮದ್ಯ ಮಾರಾಟದ ಆರೋಪವೂ ಕೇಳಿ ಬಂದಿತ್ತು. ಗ್ರಾಮ ಪಂಚಾಯಿತಿಯೂ ದೂರು ದಾಖಲಿಸಿತ್ತು. ಸಂಬಂಧಿಸಿದ ಅಧಿಕಾರಿ ವರ್ಗದಿಂದ ಸ್ಪಂದನೆ ಸಿಗದಿದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಪ್ರತಿಭಟನಕಾರರನ್ನು ತೆರವುಗೊಳಿಸುವ ಪ್ರಯತ್ನ ನಡೆಸಿದರು. ರಮ್ಮನಹಳ್ಳಿ ಗ್ರಾಮಸ್ಥರು ವೈನ್ ಸ್ಟೋರ್ ಇಲ್ಲಿಂದ ಬೇರೆಡೆ ಸ್ಥಳಾಂತರ ಆಗಲೇಬೇಕು ಎಂದು ಪಟ್ಟು ಹಿಡಿದರು.

ಗ್ರಾಮಸ್ಥರ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಮಣಿದ ಬಾರ್ ಸಿಬ್ಬಂದಿ ವೈನ್ ಸ್ಟೋರ್‌ಗೆ ಬಾಗಿಲು ಹಾಕಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT