ಬುಧವಾರ, ಫೆಬ್ರವರಿ 8, 2023
18 °C

ಪುಣ್ಯ ಸಂಪಾದಿಸುವ ಮಾಸ ‘ರಂಜಾನ್‌’

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

Prajavani

ವಿಶ್ವದ ವಿವಿಧೆಡೆ ನೆಲೆಸಿರುವ ಮುಸ್ಲಿಮರು ರಂಜಾನ್‌ ತಿಂಗಳ ಉಪವಾಸ ಆಚರಿಸುತ್ತಿದ್ದಾರೆ. ಇಸ್ಲಾಮಿನ ಐದು ಕಡ್ಡಾಯ ಕರ್ಮಗಳಲ್ಲಿ ರಂಜಾನ್‌ ಉಪವಾಸ ಕೂಡಾ ಒಂದು. ಇಸ್ಲಾಮಿಕ್‌ ಕ್ಯಾಲೆಂಡರಿಗೆ ಒಂಬತ್ತನೇ ತಿಂಗಳು ‘ರಂಜಾನ್‌’ ಆಗಿದ್ದು, ಪುಣ್ಯ ಸಂಪಾದಿಸುವ ಮಾಸ ಎನಿಸಿಕೊಂಡಿದೆ.

ಮುಸ್ಲಿಮರು ಈ ತಿಂಗಳ 30 ದಿನ ಉಪವಾಸ ಆಚರಿಸುವ ಜತೆಗೆ ದಾನ ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆತ್ಮನಿಯಂತ್ರಣದ ಜತೆಗೆ ಸಂಯಮ ರೂಢಿಸಿಕೊಳ್ಳುವುದನ್ನೂ ಉಪವಾಸ ಕಲಿಸಿಕೊಡುತ್ತದೆ.

ಉಪವಾಸವು ಒಂದು ಆರಾಧನೆಯಾಗಿದೆ, ಅಲ್ಲಾಹನ ಪ್ರೀತಿಯನ್ನು ಗಳಿಸುವ ಇಚ್ಛೆಯೊಂದಿಗೆ ಆಹಾರ ಪಾನೀಯ ಸೇವನೆ ತ್ಯಜಿಸುವುದಲ್ಲದೆ ಕಾಮಾಸಕ್ತಿ, ಎಲ್ಲ ರೀತಿಯ ಮನರಂಜನೆ ಮತ್ತು ಕೆಟ್ಟಚಟಗಳಿಂದ ದೂರವಿರುವುದು ಉಪವಾಸದ ಉದ್ದೇಶ.

ಉಪವಾಸ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. ಹೊಟ್ಟೆ ತುಂಬಿದ್ದರೆ ಇತರರ ಕಷ್ಟವನ್ನು ಅರಿಯಲು ಸಾಧ್ಯವಿಲ್ಲ. ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವವರ ಜೀವನ ಹೇಗಿರಬಹುದು ಎಂಬ ಪಾಠವನ್ನು ಉಪವಾಸ ಕಲಿಸಿಕೊಡುತ್ತದೆ.

14 ಗಂಟೆ ಉಪವಾಸ

ರಂಜಾನ್ ಉಪವಾಸ ‘ಸಹ್ರಿ’ ಯಿಂದ ಆರಂಭವಾಗಿ ‘ಇಫ್ತಾರ್’ ನೊಂದಿಗೆ ಕೊನೆಗೊಳ್ಳುತ್ತದೆ. ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮುನ್ನ ಸೇವಿಸುವ ಆಹಾರಕ್ಕೆ ‘ಸಹ್ರಿ’ ಎನ್ನುವರು. ಮೈಸೂರಿನಲ್ಲಿ ಈಗ ‘ಸಹ್ರಿ’ ಸಮಯ ನಸುಕಿನ 4.39 ಆಗಿದೆ. ಈ ಸಮಯ ಕಳೆದ ಬಳಿಕ ಆಹಾರ ಸೇವಿಸಿದರೆ ಉಪವಾಸ ಭಂಗವಾಗುತ್ತದೆ. ‘ಇಫ್ತಾರ್‌’ ಸಮಯ ಸಂಜೆ 6.42 ಆಗಿದೆ. ಅಂದರೆ ಅರಮನೆ ನಗರಿಯಲ್ಲಿ ಉಪವಾಸದ ಅವಧಿ 14 ಗಂಟೆಗಳು ಆಗಿವೆ.

ಭಾರತದಂತಹ ದೊಡ್ಡ ದೇಶದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ‘ಸಹ್ರಿ’ ಹಾಗೂ ‘ಇಫ್ತಾರ್‌’ ನಡುವಿನ ಅವಧಿಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ನವದೆಹಲಿಯಲ್ಲಿ ಈಗ ‘ಸಹ್ರಿ’ಯ ಸಮಯ 4.02 ಆಗಿದ್ದರೆ, ಇಫ್ತಾರ್‌ ಸಂಜೆ 7.05 ಕ್ಕೆ ಆಗಿದೆ. ಅಂದರೆ ನವದೆಹಲಿಯಲ್ಲಿ ಉಪವಾಸದ ಅವಧಿ 15 ಗಂಟೆಗಳು ಆಗಿವೆ.

ಕೋಲ್ಕತ್ತದಲ್ಲಿ ಸೂರ್ಯೋದಯ ಬೇಗ ಆಗುವುದರಿಂದ ‘ಸಹ್ರಿ’ಯನ್ನು ಬೆಳಗಿನ ಜಾವ 3.35ರೊಳಗೆ ಮಾಡಬೇಕು. ಇಫ್ತಾರ್‌ ಸಮಯ ಸಂಜೆ 6.10 ಆಗಿದೆ. ಉಪವಾಸದ ಅವಧಿ ಹದಿನಾಲ್ಕೂವರೆ ಗಂಟೆಗಳು ಆಗಿವೆ.

ಇಫ್ತಾರ್‌: ಉಪವಾಸವು ಇಫ್ತಾರ್‌ನೊಂದಿಗೆ ಕೊನೆಗೊಳ್ಳುತ್ತದೆ. ಮನೆಗಳಲ್ಲಿ ಇಫ್ತಾರ್‌ಗೆ ವಿವಿಧ ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಮಸೀದಿಗಳಲ್ಲೂ ಸಾಮೂಹಿಕ ಇಫ್ತಾರ್‌ ಆಯೋಜಿಸಲಾಗುತ್ತದೆ. ಖರ್ಜೂರ, ಹಣ್ಣುಗಳು ಮತ್ತು ಹಣ್ಣಿನ ರಸಗಳನ್ನು ಮುಖ್ಯವಾಗಿ ಇಫ್ತಾರ್‌ ವೇಳೆ ತಿನ್ನುವರು. ಈ ತಿಂಗಳಲ್ಲಿ ಅಲ್ಲಲ್ಲಿ ಸೌಹಾರ್ದ ಇಫ್ತಾರ್‌ ಕೂಟಗಳು ಆಯೋಜನೆಯಾಗುತ್ತವೆ.

ತರಾವೀಹ್: ರಂಜಾನ್‌ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್‌ ‘ತರಾವೀಹ್‌’ ನಿರ್ವಹಿಸಲಾಗುತ್ತದೆ. ವಿಶೇಷ ನಮಾಜ್‌ಗಳಲ್ಲಿ ಪವಿತ್ರ ಕುರಾನ್‌ನನ್ನು ಸಂಪೂರ್ಣವಾಗಿ ಪಠಿಸಲಾಗುತ್ತದೆ. ಕುರಾನ್‌ನನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡಿರುವವರು ಈ ನಮಾಜ್‌ಗೆ ನೇತೃತ್ವ ವಹಿಸುವರು.

ರಂಜಾನ್‌ ತಿಂಗಳಲ್ಲಿ ದಾನ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ತಿಂಗಳಲ್ಲಿ ದಾನ ಮಾಡಿದರೆ ಹೆಚ್ಚಿನ ಪುಣ್ಯ ಲಭಿಸುತ್ತದೆ. ಶ್ರೀಮಂತರು ಮತ್ತು ಉಳ್ಳವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್‌ (ದಾನ) ರೂಪದಲ್ಲಿ ಬಡವರಿಗೆ ನೀಡುವುದನ್ನು ಇಸ್ಲಾಂ
ಕಡ್ಡಾಯಗೊಳಿಸಿದೆ.

ಹಸಿದಾಗ ಬಡವರ ಕಷ್ಟ ಅನುಭವಕ್ಕೆ ಬರುತ್ತದೆ. ಇದರಿಂದ ಬಡವರಿಗೆ ಹೆಚ್ಚೆಚ್ಚು ದಾನ ಮಾಡಬೇಕು ಎಂಬ ಪ್ರೇರಣೆ ದೊರೆಯುತ್ತದೆ. ಮನುಷ್ಯನನ್ನು ಕೆಡುಕಿನತ್ತ ಕೊಂಡೊಯ್ಯುವ ಎಲ್ಲ ಬಾಗಿಲುಗಳನ್ನು ಮುಚ್ಚಿ, ಒಳಿತಿನ ಬಗ್ಗೆ ಮಾತ್ರ ಚಿಂತಿಸುವಂತೆ ಮಾಡುವುದು ರಂಜಾನ್‌ ತಿಂಗಳ ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು