ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಚರಿ ಬದಲಿಸುವ ರಂಜಾನ್‌ ಮಾಸ

ಉಪವಾಸ ಆಚರಣೆಯಲ್ಲಿ ತೊಡಗಿರುವ ಮುಸ್ಲಿಮರು
Last Updated 24 ಮೇ 2019, 20:08 IST
ಅಕ್ಷರ ಗಾತ್ರ

ಮೈಸೂರು: ಬೆಳಗಿನ ಜಾವ 3.30ಕ್ಕೆ ಎದ್ದು ‘ಸಹ್ರಿ’ಗೆ ಆಹಾರ ಸಿದ್ಧಪಡಿಸುವ ಕೆಲಸ. ಆಹಾರ ತಯಾರಾದ ಬಳಿಕ ಮನೆಯ ಇತರ ಸದಸ್ಯರನ್ನು ಎಬ್ಬಿಸಿ ಎಲ್ಲರಿಗೂ ಬಡಿಸಿ ತಾವೂ ಜತೆಗೆ ಕುಳಿತು ತಿನ್ನುವರು. ಸಹ್ರಿ ಬಳಿಕ ಪಾತ್ರೆಗಳನ್ನು ತೊಳೆದು, ಅಡುಗೆ ಮನೆ ಸ್ವಚ್ಛಗೊಳಿಸುವ ಕೆಲಸ...

ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಬಿಡುವಿಲ್ಲದ ಕೆಲಸ. ಬೆಳ್ಳಂಬೆಳಗ್ಗೆ ಆರಂಭವಾಗುವ ದಿನಚರಿ ತಡ ರಾತ್ರಿಯವರೆಗೂ ಮುಂದುವರಿಯುತ್ತದೆ. ಮನೆಗೆಲಸದ ನಡುವೆ ಬಿಡುವು ಮಾಡಿಕೊಂಡು ಕುರಾನ್‌ ಪಾರಾಯಣ, ನಮಾಜ್‌, ಪ್ರಾರ್ಥನೆ ಮಾಡಬೇಕು. ಇದರ ನಡುವೆ ವಿಶ್ರಾಂತಿಗೆ ಅವಕಾಶ ಸಿಕ್ಕರೆ ಅದೃಷ್ಟ ಎನ್ನಬೇಕು.

ರಂಜಾನ್‌ ತಿಂಗಳಲ್ಲಿ ಮುಸ್ಲಿಮರ ದಿನಚರಿಯೇ ಬದಲಾಗಿಬಿಡುತ್ತದೆ. ಅರುಣೋದಯಕ್ಕೆ ಮುನ್ನ ಎದ್ದು ಮಾಡುವ ಊಟ, ಉಪಹಾರದೊಂದಿಗೆ (ಸಹ್ರಿ) ಆರಂಭವಾಗುವ ಉಪವಾಸವು ಸೂರ್ಯಾಸ್ತದೊಂದಿಗೆ (ಇಫ್ತಾರ್‌) ಕೊನೆಗೊಳ್ಳುತ್ತದೆ.

ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವಾಗ ಅದು ಹೊಟ್ಟೆಗೆ ಸೇರದು. ಆದ್ದರಿಂದ ಮೊದಲ ಎರಡು ಮೂರು ಉಪವಾಸಗಳಲ್ಲಿ ಸಹ್ರಿಗೆ ತಿನ್ನುವುದು ಕಷ್ಟಕರವೆನಿಸುತ್ತದೆ. ಆ ಬಳಿಕ ಅಭ್ಯಾಸವಾಗಿಬಿಡುತ್ತದೆ. ಉಪವಾಸ ಆಚರಿಸುವ ವಯಸ್ಸಾಗಿರುವ ಮಕ್ಕಳನ್ನು ಸಹ್ರಿಗೆ ಎಬ್ಬಿಸುವುದು ಅಮ್ಮಂದಿರಿಗೆ ಸವಾಲಿನ ಕೆಲಸ ಆಗಿದೆ.

ಸಹ್ರಿ ಅವಧಿ ಕೊನೆಗೊಂಡ ಕೆಲವೇ ನಿಮಿಷಗಳಲ್ಲಿ ಬೆಳಗ್ಗಿನ ನಮಾಜ್‌ಗೆ ಮಸೀದಿಯಿಂದ ಕರೆ (ಆಜಾನ್‌) ಮೊಳಗುತ್ತದೆ. ಪುರುಷರು ನಮಾಜ್‌ಗೆ ಮಸೀದಿಗೆ ತೆರಳಿದರೆ, ಮಹಿಳೆಯರು ಮನೆಯಲ್ಲೇ ನಮಾಜ್ ನಿರ್ವಹಿಸುವರು. ಆ ಬಳಿಕ ಕುರಾನ್‌ ಓದಿ ಅಲ್ಪ ಹೊತ್ತು ನಿದ್ದೆಗೆ ಜಾರುವರು.

ಸಹ್ರಿಯ ಬಳಿಕ ಕೊಂಚ ನಿದ್ರಿಸುವ ಪುರುಷರು ಬಳಿಕ ಎದ್ದು ತಮ್ಮ ದೈನಂದಿನ ಕೆಲಸಗಳಿಗೆ ತೆರಳುವರು. ಮಹಿಳೆಯರಿಗೆ ಮಧ್ಯಾಹ್ನದ ಊಟ ಸಿದ್ಧಪಡಿಸುವ ಕೆಲಸ ಇಲ್ಲದಿದ್ದರೂ, ‘ಇಫ್ತಾರ್‌’ಗೆ ವಿವಿಧ ಭಕ್ಷ್ಯಗಳನ್ನು ತಯಾರಿಸುವ ಕೆಲಸವನ್ನು ಮಧ್ಯಾಹ್ನವೇ ಶುರುಮಾಡಬೇಕಾಗುತ್ತದೆ. ಆದ್ದರಿಂದ ಬಿಡುವು ಎಂಬುದಿರುವುದಿಲ್ಲ.

ಖರ್ಜೂರ ಮತ್ತು ಹಣ್ಣುಗಳ ಜತೆ ಮಾಂಸಾಹಾರದ ಖಾದ್ಯಗಳು ಇಫ್ತಾರ್‌ನಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ. ಸಮೋಸಾ, ಹಲೀಮ್, ಖೀರು, ಪಾಯಸ, ಫಲೂದಾ ಒಳಗೊಂಡಂತೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸುವರು. ಅದರ ನಡುವೆ ಬಿಡುವು ಮಾಡಿಕೊಂಡು ಮಧ್ಯಾಹ್ನ ಹಾಗೂ ಸಂಜೆಯ ನಮಾಜ್‌ ನಿರ್ವಹಿಸಬೇಕು, ಕುರಾನ್‌ ಪಾರಾಯಣ ಮಾಡಬೇಕು.

ಇಫ್ತಾರ್‌ಗೆ ಒಂದೊಂದು ದಿನ ಭಿನ್ನ ರೀತಿಯ ಖಾದ್ಯ ತಯಾರಿಸುವ ಸವಾಲು ಮಹಿಳೆಯರ ಮುಂದಿರುತ್ತದೆ. ಇಫ್ತಾರ್‌ಗೆ ಗೆಳೆಯರು, ಸಂಬಂಧಿಕರನ್ನು ಆಹ್ವಾನಿಸುವುದು ವಾಡಿಕೆ. ಇಫ್ತಾರ್‌ ಬಳಿಕ ಎಲ್ಲರೂ ‘ಮಗ್ರಿಬ್‌’ ನಮಾಜ್‌ ನಿರ್ವಹಿಸುವರು. ಮಸೀದಿಗಳಲ್ಲಿ ಆಯೋಜಿಸುವ ಸಾಮೂಹಿಕ ಇಫ್ತಾರ್‌ ಕೂಟಗಳಲ್ಲಿ ನೂರಾರು ಮಂದಿ ಪಾಲ್ಗೊಂಡು ಹಂಚಿಕೊಂಡು ತಿನ್ನುವರು.

‘ಮಗ್ರಿಬ್‌’ ನಮಾಜ್‌ ನಿರ್ವಹಿಸಿ ಮನೆಮಂದಿಯೆಲ್ಲಾ ಕೆಲಹೊತ್ತು ಕುರಾನ್‌ ಪಾರಾಯಣ ಮಾಡುವರು. ಆ ಬಳಿಕ ಪುರುಷರು ವಿಶೇಷ ನಮಾಜ್‌ ‘ತರಾವೀಹ್‌’ ನಿರ್ವಹಿಸಲು ಮಸೀದಿಗೆ ತೆರಳುವರು. ಮಹಿಳೆಯರು ರಾತ್ರಿಯ ಆಹಾರ ಸಿದ್ಧಪಡಿಸಲು ಮತ್ತೆ ಅಡುಗೆ ಮನೆಯತ್ತ ಮುಖ ಮಾಡುವರು.

ಪುರುಷರು ಮತ್ತು ಮಕ್ಕಳು ತರಾವೀಹ್‌ ನಮಾಜ್‌ ಮುಗಿಸಿ ಬರುವಷ್ಟರಲ್ಲಿ ರಾತ್ರಿಯ ಆಹಾರ ಸಿದ್ಧವಾಗಿರುತ್ತದೆ. ಆ ಬಳಿಕ ಎಲ್ಲರೂ ಜತೆಯಾಗಿ ಉಣ್ಣುವರು. ಪಾತ್ರೆಗಳನ್ನು ತೊಳೆದು, ಅಡುಗೆ ಮನೆ ಸ್ವಚ್ಛಗೊಳಿಸಿ ಅನಂತರ ನಮಾಜ್‌ ನಿರ್ವಹಿಸುವ ಮನೆಯ ಮಹಿಳೆಯರು ಮಲಗುವಾಗ ತಡರಾತ್ರಿ ಆಗಿರುತ್ತದೆ.

‘ರಂಜಾನ್‌ ತಿಂಗಳಲ್ಲಿ ಮುಸ್ಲಿಮರ, ಅದರಲ್ಲೂ ಮುಖ್ಯವಾಗಿ ಮಹಿಳೆಯರ ದಿನಚರಿಯೇ ಬದಲಾಗುತ್ತದೆ. ಬೆಳ್ಳಂ ಬೆಳಗ್ಗೆ ಎದ್ದೇಳಬೇಕು. ಮಲಗುವಾಗ ತಡರಾತ್ರಿ ಆಗುತ್ತದೆ. ಈ ಒಂದು ತಿಂಗಳಲ್ಲಿ ನಿದ್ದೆ ಕಡಿಮೆ. ಪ್ರಾರ್ಥನೆ, ಅಡುಗೆ ಕೆಲಸಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತೇವೆ’ ಎಂದು ಬನ್ನಿಮಂಟಪದ ನಿವಾಸಿ ಆಯೆಷಾ ಹೇಳುತ್ತಾರೆ.

ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ನೆಲೆಸಿರುವ ಅವರು ರಂಜಾನ್‌ ಉಪವಾಸವನ್ನು ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬಂದಿದ್ದಾರೆ. ‘ಅಲ್ಲಾಹನ ಪ್ರೀತಿ ಗಳಿಸಲು ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗುತ್ತದೆ. ರಂಜಾನ್‌ ತಿಂಗಳು ಪುಣ್ಯ ಸಂಪಾದಿಸುವ ಮಾಸ. ಕೆಲಸಗಳ ನಡುವೆ ಪ್ರಾರ್ಥನೆಗೂ ಸಮಯ ಕಂಡುಕೊಳ್ಳುವ ಸವಾಲು ನಮ್ಮ ಮುಂದಿರುತ್ತದೆ’ ಎನ್ನುವರು.

ರಂಜಾನ್‌ ತಿಂಗಳಲ್ಲಿ ಮಕ್ಕಳಲ್ಲೂ ಸಂಭ್ರಮ ಮನೆ ಮಾಡಿರುತ್ತದೆ. ಮಕ್ಕಳಿಗೆ ಉಪವಾಸ ಕಡ್ಡಾಯವಲ್ಲ. ಆದರೆ 8–10 ವರ್ಷ ವಯಸ್ಸಿನ ಮಕ್ಕಳು ತಾವೂ ಉತ್ಸಾಹದಿಂದ ಒಂದೆರಡು ಉಪವಾಸ ಹಿಡಿಯುವರು. ಅಭ್ಯಾಸವಾಗಲಿ ಎಂದು ಹೆತ್ತವರು ಅದಕ್ಕೆ ಅವಕಾಶ ನೀಡುವರು.

ಈಗಾಗಲೇ 19 ಉಪವಾಸಗಳು ಕೊನೆಗೊಂಡಿವೆ. ಇನ್ನುಳಿದ 11 ದಿನಗಳಲ್ಲಿ ಇನ್ನಷ್ಟು ನಮಾಜ್‌, ಪ್ರಾರ್ಥನೆ, ದಾನಧರ್ಮಗಳನ್ನು ಮಾಡಿ ಪುಣ್ಯ ಗಳಿಸುವತ್ತ ಮುಸ್ಲಿಮರು ಚಿತ್ತ ನೆಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT