ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸೌಲಭ್ಯ ನಿರಾಕರಿಸಿದ ತಾಲ್ಲೂಕು ಆಡಳಿತ

2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಾಡಿಗೆ ಮನೆಯಲ್ಲಿದ್ದವರಿಗೆ ನೆರವಿನ ಪರಿಹಾರವಿಲ್ಲ
Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ವಾಸವಿದ್ದ ಬಾಡಿಗೆ ಮನೆಯ ಜೊತೆ, ಮನೆಯಲ್ಲಿನ ವಸ್ತುಗಳೆಲ್ಲವನ್ನೂ ಪ್ರವಾಹದಲ್ಲಿ ಕಳೆದುಕೊಂಡು ಅಕ್ಷರಶಃ ಬೀದಿ ಪಾಲಾದ ಬಾಡಿಗೆದಾರರಿಗೆ ಸೌಲಭ್ಯ ನೀಡಲು ಎಚ್‌.ಡಿ.ಕೋಟೆ ತಾಲ್ಲೂಕು ಆಡಳಿತ ನಿರಾಕರಿಸಿದೆ.

ಪ್ರವಾಹದಲ್ಲಿ ಬೀದಿಪಾಲಾದ ಎಚ್‌.ಡಿ.ಕೋಟೆಯ ಬಸವರಾಜು ಎಂಬುವವರು ಮನೆ ಬಾಡಿಗೆ ಹಾಗೂ ನಿವೇಶನ ನೀಡುವಂತೆ ಕೋರಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್, ‘ಬಾಡಿಗೆ ಮನೆಯಲ್ಲಿದ್ದವರಿಗೆ ಸೌಲಭ್ಯ ಕೊಡಲು ಸಾಧ್ಯವಿಲ್ಲ’ ಎಂಬ ಒಕ್ಕಣೆಯ ಹಿಂಬರಹ ನೀಡಿದ್ದಾರೆ.

‘ಪ್ರವಾಹಕ್ಕೆ ತುತ್ತಾಗಿದ್ದ ನಿಮ್ಮ ಕುಟುಂಬ, ವಾಸವಿದ್ದ ಬಾಡಿಗೆ ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿದ್ದಾಗಲೇ, ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ₹ 10 ಸಾವಿರ ಪರಿಹಾರ ನೀಡಲಾಗಿದೆ. ನೀವು ವಾಸ ಮಾಡುತ್ತಿದ್ದುದು ಬಾಡಿಗೆ ಮನೆಯಾಗಿದ್ದರಿಂದ ಹಾಗೂ ಸರ್ಕಾರದ ಆದೇಶದಂತೆ ಈಗಾಗಲೇ ಪರಿಹಾರ ಕೊಟ್ಟಿರುವುದರಿಂದ ಮತ್ತೊಮ್ಮೆ ಕೊಡಲು ಸಾಧ್ಯವಿಲ್ಲ’ ಎಂದಿದ್ದಾರೆ.

ಅಸಹಾಯಕತೆ

ನೆರವಿನ ಮೊರೆಗೆ ತಹಶೀಲ್ದಾರ್ ಲಿಖಿತವಾಗಿ ನೀಡಿದ ಹಿಂಬರಹ ಕೈ ಸೇರುತ್ತಿದ್ದಂತೆ, ಭವಿಷ್ಯ ನೆನೆದ ಬಸವರಾಜ್‌ಗೆ ದಿಕ್ಕೇ ತೋಚದಂತಾಗಿದ್ದಾರೆ.

‘ಬಾಡಿಗೆ ಮನೆಯಲ್ಲಿದ್ದರೂ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೆ. ನಿತ್ಯವೂ ದುಡಿದು ತಿನ್ನುತ್ತಿದ್ದೆ. ಕೈಯಲ್ಲೊಂದಿಷ್ಟು ಕಾಸು ಇತ್ತು. ಬದುಕು ಸಾಗಿತ್ತು. ಕಪಿಲೆಯ ಆರ್ಭಟಕ್ಕೆ ನಾವಿದ್ದ ಬಾಡಿಗೆ ಮನೆಯೂ ಕೊಚ್ಚಿಹೋಯ್ತು. ಮನೆಯೊಳಗಿದ್ದ ಸಾಮಗ್ರಿ, ಹಣ ಎಲ್ಲವೂ ಹೊಳೆಯ ಪಾಲಾಯ್ತು. ದಿಕ್ಕು ತೋಚದ ಸ್ಥಿತಿಯಲ್ಲಿ ಪರಿಹಾರ ಕೇಂದ್ರ ಸೇರಿದ್ದೆವು’ ಎಂದು ಬಸವರಾಜ್ ಪ್ರವಾಹದ ದಿನಗಳನ್ನು ನೆನಪಿಸಿಕೊಂಡರು.

‘ಪ್ರವಾಹ ಸಂತ್ರಸ್ತರ ನೆರವಿಗೆ ಸರ್ಕಾರವಿದೆ ಎಂದು ಮುಖ್ಯಮಂತ್ರಿಯೇ ಘೋಷಿಸಿದರು. ಬಾಡಿಗೆ ಮನೆ ಕಳೆದುಕೊಂಡವರಿಗೂ ಮನೆ ಬಾಡಿಗೆ, ಮನೆ ಕಟ್ಟಿಕೊಳ್ಳಲು ಅನುದಾನ, ನಿವೇಶನ ಕೊಡುವುದಾಗಿಯೂ ಹೇಳಿದ್ದರು. ಆದರೆ ನಾವು ಸಂಕಷ್ಟಕ್ಕೆ ಸಿಲುಕಿ ಏಳು ತಿಂಗಳು ಗತಿಸಿದರೂ ನೆರವು ಸಿಕ್ಕಿಲ್ಲ. ಖುದ್ದಾಗಿ ಎರಡು ಬಾರಿ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT