ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಬಳಕೆ ನೀರಿನ ದರ ಏರಿಕೆ ಪ್ರಸ್ತಾವ ತಿರಸ್ಕಾರ

ನೀರಿನ ವಾಣಿಜ್ಯ ಬಳಕೆಯ ತೆರಿಗೆ ಏರಿಕೆಗೆ ಮಾತ್ರ ಮಹಾನಗರ ಪಾಲಿಕೆ ಕೌನ್ಸಿಲ್‌ ಸಭೆ ಅಸ್ತು
Last Updated 5 ಡಿಸೆಂಬರ್ 2020, 3:04 IST
ಅಕ್ಷರ ಗಾತ್ರ

ಮೈಸೂರು: ಇಡೀ ದಿನದ ಚರ್ಚೆಯ ನಂತರ ಶುಕ್ರವಾರ ನಡೆದ ಕೌನ್ಸಿಲ್ ಸಭೆಯು ಗೃಹಬಳಕೆಯ ನೀರಿನ ತೆರಿಗೆ ಏರಿಕೆಯ ಪ್ರಸ್ತಾವವನ್ನು ತಿರಸ್ಕರಿಸಿತು. ಆದರೆ, ವಾಣಿಜ್ಯ ಬಳಕೆಯ ಮೇಲಿನ ತೆರಿಗೆಯನ್ನು ಶೇ 20ರಷ್ಟು ಹೆಚ್ಚಿಸಲು ಹಾಗೂ ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿರುವ ನೀರಿನ ದರವನ್ನು ಪರಿಷ್ಕರಿಸಲು ಸಮ್ಮತಿ ನೀಡಿತು.

ಇನ್ನು ಮುಂದೆ ಗ್ರಾಮ ಪಂಚಾಯಿತಿ ಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಏರಿಕೆ ಮಾಡಬೇಕಾದರೆ ಕೌನ್ಸಿಲ್ ಸಭೆಯ ಅನುಮತಿ ಕಡ್ಡಾಯ. ಜತೆಗೆ, ‘ಫ್ಲೋ’ ಮತ್ತು ‘ಬಲ್ಕ್’ ಮೀಟರ್‌ ಅಳವಡಿಸಿ ನೀರಿಗೆ ದರ ವಿಧಿಸಬೇಕು ಎಂದು ನಿರ್ಣಯಿಸಲಾಯಿತು.

ನೀರಿನ ಸಂಪರ್ಕ ಪಡೆಯದೇ ಇರುವ ಕೊಳವೆಬಾವಿ ಹೊಂದಿರುವವರ ಮೇಲೆ ಬೆಂಗಳೂರಿನಲ್ಲಿರುವಂತೆ ಒಳ ಚರಂಡಿ ಶುಲ್ಕ ವಿಧಿಸಲೂ ಸಭೆ ಒಪ್ಪಿತು.

ಮಾತನಾಡಿದ ಬಹುತೇಕ ಸದಸ್ಯರು ದರ ಏರಿಕೆಯನ್ನು ಆರಂಭದಲ್ಲಿ ವಿರೋಧಿಸಿದರು. ದರ ಏರಿಕೆಗೆ ಇದು ಸೂಕ್ತ ಸಮಯ ಅಲ್ಲ ಎಂದು ಹೇಳಿದರು.

ಸೋರಿಕೆ ತಡೆಗಟ್ಟಿ; ನಂತರ ದರ ಏರಿಸಿ: ಸದಸ್ಯ ಕೆ.ವಿ.ಶ್ರೀಧರ್ ಮಾತನಾಡಿ, ‘ನಿತ್ಯ 4.35 ಕೋಟಿ ಲೀಟರ್‌ ನೀರು ಸೋರಿಕೆಯಾಗುತ್ತಿದೆ. ಒಂದು ತಿಂಗಳಿಗೆ ₹5 ಕೋಟಿಯಷ್ಟು ನಷ್ಟವಾಗುತ್ತಿದೆ. ಈ ನಷ್ಟವನ್ನು ದರ ಏರಿಸುವ ಮೂಲಕ ಸಾಮಾನ್ಯ ಜನರ ಮೇಲೆ ಹಾಕುತ್ತಿದ್ದೀರಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

2012ರಿಂದ ಇಲ್ಲಿಯವರೆಗೆ ಶೇ 35ರಷ್ಟು ಮಾತ್ರವೇ ವಿದ್ಯುಚ್ಛಕ್ತಿ ದರ ಏರಿಕೆಯಾಗಿದೆ. ಆದರೆ, ನೀರಿನ ದರವನ್ನು ಶೇ 64ರಷ್ಟು ಹೆಚ್ಚಿಸುವುದು ಯಾವ ನ್ಯಾಯ? ದೆಹಲಿಯಲ್ಲಿ ಉಚಿತ ನೀರು ನೀಡಲಾಗುತ್ತಿದೆ ಎಂಬುದು ಗಮನದಲ್ಲಿರಲಿ. ಮೊದಲು ನ್ಯೂನತೆಗಳನ್ನು ಬಗೆಹರಿಸಿ, ನಂತರ ದರ ಏರಿಕೆ ಮಾಡಿ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ದರ ಏರಿಕೆ ಬೇಡ: ಸದಸ್ಯ ಎಸ್‌ಬಿಎಂ ಮಂಜು, ‘ಕೋವಿಡ್‌ ಸಂಕಷ್ಟದ ಮಧ್ಯೆ ದರ ಏರಿಕೆ ಬೇಡ’ ಎಂದು ಆಗ್ರಹಿಸಿದರು.

ಕೋವಿಡ್ ಸಂಕಷ್ಟದಲ್ಲಿ ಜನರು ₹49 ಕೋಟಿಯಷ್ಟು ತೆರಿಗೆ ಪಾವತಿಸಿದ್ದಾರೆ. ಇವರ ಮೇಲೆ ಮತ್ತೆ ಹೆಚ್ಚುವರಿ ದರ ಬೇಡ. ಎಲ್ಲೆಲ್ಲಿ ಮೀಟರ್ ಇಲ್ಲವೋ ಅಲ್ಲಲ್ಲಿ ಅಳವಡಿಸಿ ಎಂದು ಸಲಹೆ ನೀಡಿದರು.

ಗ್ರಾಮಗಳಿಂದ ತೆರಿಗೆ ಬಾಕಿ: ಕಬಿನಿ ನೀರು ಸರಬರಾಜು ಯೋಜನೆಯಡಿ 52 ಹಳ್ಳಿಗಳಿಗೆ ನಿತ್ಯ 60 ಲಕ್ಷ ಲೀಟರ್‌ ಹಾಗೂ ಮೇಳಾಪುರ ಯೋಜನೆಯಿಂದ 5 ಹಳ್ಳಿಗಳಿಗೆ ನಿತ್ಯ 30 ಲಕ್ಷ ಲೀಟರ್‌ ನೀರು ಸರಬರಾಜಾಗುತ್ತಿದೆ. ಈ ಹಳ್ಳಿಗಳಿಂದ ₹33 ಕೋಟಿ ತೆರಿಗೆ ಬಾಕಿ ಉಳಿದಿದೆ. ಸದ್ಯ ಮನೆಗಳಿಗೆ ನೀಡುವ ದರವನ್ನು ವಿಧಿಸಲಾಗುತ್ತಿದೆ. ಇದನ್ನು ಪರಿಷ್ಕರಿಸಿ ಸಗಟು ದರ ನಿಗದಿಪಡಿಸಿದರೆ ಪಾವತಿಸುವುದಾಗಿ ಜಿಲ್ಲಾ ಪಂಚಾಯಿತಿ ತಿಳಿಸಿದೆ. ಹೀಗಾಗಿ, ಪ್ರತಿ ಲೀಟರ್‌ಗೆ ₹8 ದರ ನಿಗದಿಪಡಿಸಲು ಅನುಮತಿ ನೀಡು ವಂತೆ ಅಧಿಕಾರಿಗಳು ಕೋರಿದರು.

‘ಇಷ್ಟು ದಿನ ಸುಮ್ಮನಿದ್ದದ್ದು ಏಕೆ’ ಎಂದು ಸದಸ್ಯರಾದ ಪ್ರೇಮಾ ಪ್ರಶ್ನಿಸಿದರು. ‘ನಮಗೆ ನೀರು ಸಾಲದಿರು ವಾಗ ಗ್ರಾಮಗಳಿಗೆ ಏಕೆ ಕುಡಿಯುವ ನೀರು’ ಎಂದು ಅಯೂಬ್‌ಖಾನ್ ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ದರ ವಿಧಿಸಲು ಸಭೆ ಒಪ್ಪಿಗೆ ಸೂಚಿಸಿತು.

ಆಯುಕ್ತರು ಬಿಟ್ಟ ಬಾಣಕ್ಕೆ ತಣ್ಣಗಾದ ಸದಸ್ಯರು!

ಚರ್ಚೆಯ ನಂತರ ಮೇಯರ್ ತಸ್ನೀಂ ಗೃಹಬಳಕೆಯ ನೀರಿನ ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸುವಂತೆ ರೂಲಿಂಗ್ ನೀಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಆಯುಕ್ತ ಗುರುದತ್ತ ಹೆಗಡೆ ಅವರ ಮಾತುಗಳು ಪಾಲಿಕೆ ಸದಸ್ಯರನ್ನು ತಣ್ಣಗಾಗಿಸಿದವು.

‘ನೀರಿನ ದರ ವಸೂಲಾತಿಯಲ್ಲಿ ಪಾಲಿಕೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಪೂರೈಕೆಯಾಗುತ್ತಿರುವ 186 ಎಂಎಲ್‌ಡಿ ನೀರಿನಲ್ಲಿ 130 ಎಂಎಲ್‌ಡಿಗೆ ಮಾತ್ರ ದರ ಪಡೆಯಲಾಗುತ್ತಿತ್ತು. ಈ ವರ್ಷ ಇದರ ಪ್ರಮಾಣ 152 ಎಂಎಲ್‌ಡಿಗೆ ಹೆಚ್ಚಿದೆ. ಮಾರ್ಗಸೂಚಿಯಂತೆ ಶೇ 30ರಷ್ಟು ಇರಬೇಕಾದ ಸೋರಿಕೆ ಪ್ರಮಾಣ ಶೇ 15ರಷ್ಟು ಮಾತ್ರವೇ ಇದೆ. 10 ವರ್ಷಗಳಿಂದ ದರ ಹೆಚ್ಚಿಸಿಲ್ಲ. ಕನಿಷ್ಠ ಶೇ 30ರಷ್ಟು ದರ ಏರಿಕೆ ಮಾಡಿದರೆ ನಿರ್ವಹಣೆ ಸಾಧ್ಯ. ಇಲ್ಲದಿದ್ದರೆ ಪಾಲಿಕೆ ಸದಸ್ಯರಿಗೆ ನೀಡಲಾಗುತ್ತಿರುವ ಒಳಚರಂಡಿ ನಿರ್ವಹಣೆಯ ವೆಚ್ಚಕ್ಕೂ ಹಣ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಹೇಳಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಸದಸ್ಯ ಆರೀಫ್ ಹುಸೇನ್‌ ಪಾಲಿಕೆ ಆಯುಕ್ತರ ಮಾತಿಗೆ ಸದಸ್ಯರು ಗೌರವ ಕೊಡುತ್ತಿಲ್ಲ ಎಂದು ಆರೋಪಿಸಿದರು. ಇದು ಸಾಕಷ್ಟು ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿತು. ಮೇಯರ್ ತಸ್ನೀಂ ಎದ್ದುನಿಂತು ಆರಿಫ್ ಹುಸೇನ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನೊಮ್ಮೆ ಈ ರೀತಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

ನಂತರ ಒಬ್ಬೊಬ್ಬರೇ ಸದಸ್ಯರು ದರವನ್ನು ಶೇ 20ರಷ್ಟು ಹೆಚ್ಚಿಸಬಹುದು ಎಂದು ಹೇಳತೊಡಗಿದರೂ ಮೇಯರ್ ತಮ್ಮ ರೂಲಿಂಗ್‌ನಿಂದ ಹಿಂದೆ ಸರಿಯಲಿಲ್ಲ.

₹ 112 ಕೋಟಿ ಸಾಲ ₹ 348 ಕೋಟಿಯಾಗಿದ್ದು!

ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್‌ನಿಂದ ಮೇಳಾಪುರ ಯೋಜನೆಗೆ 2002ರಲ್ಲಿ ₹ 112 ಕೋಟಿ ಸಾಲ ಪಡೆಯಲಾಗಿತ್ತು. ಈಗ ಬಡ್ಡಿ ಸೇರಿ ₹ 348 ಕೋಟಿಯಷ್ಟಾಗಿದೆ. ಜೂನ್ 30ಕ್ಕೆ ಇದರ ಗಡುವು ಮುಗಿದಿದ್ದು, ನಂತರ ಪ್ರತಿ ವರ್ಷ ಶೇ 2.5ರಷ್ಟು ದಂಡ ವಿಧಿಸಲಾಗುತ್ತದೆ ಎಂಬ ಮಾಹಿತಿಯನ್ನು ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಸಭೆಗೆ ನೀಡಿದರು.

ಗಾಳಿಯಿಂದ ಹಣ ಮಾಡುತ್ತಿರುವ ಪಾಲಿಕೆ!

‘ಬಹಳಷ್ಟು ಮೀಟರ್‌ಗಳು ನೀರು ಬರುವ ಮೊದಲು ಬರುವ ಗಾಳಿಗೆ ಓಡುತ್ತಿವೆ. ಇದರಿಂದ ಜನರು ನೀರಿಗೆ ಮಾತ್ರವಲ್ಲ ಪೈಪ್‌ನಲ್ಲಿ ಬರುವ ಗಾಳಿಗೂ ಹಣ ಪಾವತಿಸಬೇಕಿದೆ’ ಎಂದು ಸದಸ್ಯ ಕೆ.ವಿ.ಶ್ರೀಧರ್ ಹೇಳುವ ಮೂಲಕ ಸಭೆಯ ಗಮನ ಸೆಳೆದರು.

ಇಂತಹ ಮೀಟರ್‌ಗಳನ್ನು ದುರಸ್ತಿ ಮಾಡಿ ಗಾಳಿಯಿಂದ ಹಣ ಮಾಡುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT