ಶನಿವಾರ, ಸೆಪ್ಟೆಂಬರ್ 25, 2021
22 °C

ಶಿವಮೊಗ್ಗ, ಹಾಸನ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ತೋರಿದ ಆಸಕ್ತಿ ಮೈಸೂರಿಗಿಲ್ಲ!

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರಮುಖ ಪ್ರವಾಸೋದ್ಯಮ ತಾಣ ಎನಿಸಿರುವ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ ಯೋಜನೆ ನನೆಗುದಿಗೆ ಬಿದ್ದಿದ್ದು, ಭೂಸ್ವಾಧೀನ ಸಂಬಂಧ ರೈತರಿಗೆ ಪರಿಹಾರ ನೀಡುವ ಆಸಕ್ತಿಯನ್ನೇ ರಾಜ್ಯ ಸರ್ಕಾರ ತೋರುತ್ತಿಲ್ಲ.

ಇದೇ ಸಮಯದಲ್ಲಿ ಶಿವಮೊಗ್ಗ ಹಾಗೂ ಹಾಸನ ನಿಲ್ದಾಣಗಳ ನಿರ್ಮಾಣ ಯೋಜನೆಯತ್ತ ಗಮನ ಹರಿಸಿದ್ದು, ಹೆಚ್ಚಿನ ಅನುದಾನವನ್ನೂ ಬಿಡುಗಡೆ ಮಾಡಲಾಗುತ್ತಿದೆ.

ವಿಮಾನ ನಿಲ್ದಾಣದ ಮುಂದೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ (ಮೈಸೂರು–ನಂಜನಗೂಡು) ಅಂಡರ್‌ಪಾಸ್‌ ನಿರ್ಮಿಸಿ ಅದರ ಮೇಲೆ ರನ್‌ವೇ ಅಭಿವೃದ್ಧಿಪಡಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಒಪ್ಪಿಗೆ ಸೂಚಿಸಿ, ₹ 700 ಕೋಟಿ ಅನುದಾನವನ್ನೂ ಮೀಸಲಿಟ್ಟಿದೆ. ತಾಂತ್ರಿಕ ಅಧಿಕಾರಿಗಳು ಮಣ್ಣಿನ ಸಾಮರ್ಥ್ಯ ಪರೀಕ್ಷಿಸಿ, ಹಸಿರು ನಿಶಾನೆ ಕೂಡ ತೋರಿದ್ದಾರೆ. ಭದ್ರತಾ ಒಪ್ಪಿಗೆಯೂ ಲಭಿಸಿದೆ.

ಮೈಸೂರು ಬೆಳವಣಿಗೆಗೆ ಪೂರಕವಾಗಿ ನಿಲ್ದಾಣದ ರನ್‌ವೇ ವಿಸ್ತರಣೆ ಅಗತ್ಯವಿರುವುದಾಗಿ ಉದ್ಯಮಿಗಳು, ಹೋಟೆಲ್‌, ಶಿಕ್ಷಣ ಕ್ಷೇತ್ರದವರು ಹಾಗೂ ಪ್ರವಾಸಿ ಪ್ರವೃತ್ತಕರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ದೇಶ–ವಿದೇಶದಲ್ಲಿ ನೆಲೆಸಿರುವ ಮೈಸೂರಿಗರು ಸಾಮಾಜಿಕ ಜಾಲತಾಣದಲ್ಲೂ ಮನವಿ ಮಾಡುತ್ತಿದ್ದಾರೆ.

ಸದ್ಯ 1,740 ಮೀಟರ್‌ ಉದ್ದದ ರನ್‌ವೇ ಇದೆ. ಅದನ್ನು ಮತ್ತೆ 1,010 ಮೀಟರ್‌ ವಿಸ್ತರಿಸುವ ಅಗತ್ಯವಿದೆ. ವಿಸ್ತರಣೆಯಾದಲ್ಲಿ ದೊಡ್ಡ ವಿಮಾನಗಳು (ಏರ್‌ ಬಸ್‌, ಬೋಯಿಂಗ್‌ ಜೆಟ್‌) ಬಂದಿಳಿಯಲು ಸಾಧ್ಯವಾಗಲಿದ್ದು, ವಿದೇಶಕ್ಕೂ ಸಂಪರ್ಕ ಕಲ್ಪಿಸಬಹುದು.

ಈ ಉದ್ದೇಶಕ್ಕೆ ಒಟ್ಟು 280 ಎಕರೆ ಜಮೀನು ಬೇಕಿದೆ. ಭೂಮಿ ನೀಡಲು ಮುಂದಾಗಿರುವ ರೈತರಿಗೆ ಆರಂಭಿಕವಾಗಿ 114 ಎಕರೆಗೆ ತಲಾ ₹ 1.5 ಕೋಟಿ ನೀಡಲು ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ, ಹಣ ಬಿಡುಗಡೆ ಮಾಡಿಲ್ಲ.

ಯೋಜನೆಗೆ ಒಪ್ಪಿಗೆ ಲಭಿಸಿ ಮೂರೂವರೆ ವರ್ಷಗಳಾಗಿದ್ದು, ಮತ್ತಷ್ಟು ವಿಳಂಬವಾದರೆ ಅನುದಾನವನ್ನು ಪ್ರಾಧಿಕಾರವು ಬೇರೆಡೆಗೆ ವರ್ಗಾಯಿಸುವ ಆತಂಕ ನಿಲ್ದಾಣದ ಅಧಿಕಾರಿಗಳಿಗೆ ಎದುರಾಗಿದೆ.

‘ಭೂಮಿಯು ನಮ್ಮ ಸುಪರ್ದಿಗೆ ಬರಲೆಂದು ಕಾಯುತ್ತಿದ್ದೇವೆ. ರಾಜ್ಯ ಸರ್ಕಾರವು ಜಮೀನು ನೀಡುತ್ತಿದ್ದಂತೆ ಕಾರ್ಯಪ್ರವೃತ್ತರಾಗುತ್ತೇವೆ’ ಎಂದು  ನಿಲ್ದಾಣದ ನಿರ್ದೇಶಕ ಆರ್‌.ಮಂಜುನಾಥ್‌ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ನಿಟ್ಟಿನಲ್ಲಿ ಸಂಸದ ಪ್ರತಾಪಸಿಂಹ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಕೂಡ ರಾಜ್ಯ ಸರ್ಕಾದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.

ಅಭಿವೃದ್ಧಿಗೆ ವಿಮಾನ ನಿಲ್ದಾಣದ ನೆರವು: ಯಾವುದೇ ನಗರದ ಬೆಳವಣಿಗೆ ಅಲ್ಲಿನ ಮೂಲಸೌಲಭ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣ, ಪ್ರವಾಸೋದ್ಯಮ, ರಿಯಲ್‌ ಎಸ್ಟೇಟ್‌, ಬಂಡವಾಳ ಹೂಡಿಕೆ, ಕೈಗಾರಿಕೆ, ಉದ್ಯೋಗಕ್ಕೆ ಮಹತ್ವ ಸಿಕ್ಕಂತೆ ಆ ನಗರಿಗೊಂದು ಅಸ್ಮಿತೆ ಸಿಗುತ್ತದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳು ಕೂಡ ಮಹತ್ವದ ಪಾತ್ರ ವಹಿಸುತ್ತವೆ.

ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆ ಬಳಿಕ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಎಟಿಆರ್‌ ವಿಮಾನಗಳು ಹಾರಾಟ ನಡೆಸುತ್ತಿವೆ.

‘ರನ್‌ವೇ ವಿಸ್ತರಣೆ ಜೊತೆಗೆ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಸಾಧ್ಯವಾದರೆ ಪ್ರವಾಸೋದ್ಯಮ, ಕೈಗಾರಿಗೆ ಉತ್ತೇಜನ ದೊರೆಯಲಿದೆ. ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಸಾಫ್ಟ್‌ವೇರ್‌ ಕಂಪನಿಗಳು ಬರಲಿದ್ದು, ಐಟಿ ಉದ್ಯಮವೂ ಬೆಳೆಯುತ್ತದೆ’ ಎಂಬ ಆಶಾವಾದ
ಉದ್ಯಮಿಗಳದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು