ಭಾನುವಾರ, ಆಗಸ್ಟ್ 1, 2021
23 °C
ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಕೋವಿಡ್‌ ಅಡ್ಡಿ

3 ಲಕ್ಷ ಸಸಿಗಳ ಮಾರಾಟ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌- ಲಾಕ್‌ಡೌನ್‌ ಮೈಸೂರು ಜಿಲ್ಲೆಯಲ್ಲಿ ಮಾತ್ರ ಜುಲೈ ಮೊದಲ ವಾರದವರೆಗೂ ಮುಂದುವರಿದಿದೆ. ಇದರಿಂದ ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಹಿನ್ನಡೆಯಾಗಿದೆ.

ಮುಂಗಾರು ಆರಂಭದ ಬೆನ್ನಿಗೆ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆ ಸಹ ತನ್ನ ನರ್ಸರಿಗಳಲ್ಲಿ ಬೆಳೆಸಿದ ಮಹಾಗನಿ, ತೇಗ, ಶ್ರೀಗಂಧ, ಸಿಲ್ವರ್ ಓಕ್, ಹೆಬ್ಬೇವು, ಹಲಸು, ನೇರಳೆ, ಬೇವು, ಹೊಂಗೆ, ಅತ್ತಿ, ಅರಳಿ, ಪೆಲ್ಟೋಪಾರ್ಮ್, ಬುಗುರಿ, ಜಕ ರಂಡ, ಗಾಳಿಚಂದ, ಆಕಾಶ ಮಲ್ಲಿಗೆ, ಹೊಳೆಮತ್ತಿ ಸೇರಿದಂತೆ ಇನ್ನಿತರೆ ಜಾತಿಯ ಸಸಿಗಳನ್ನು ₹ 1, ₹ 3ರ ದರದಲ್ಲಿ ರೈತರಿಗೆ ಮಾರಾಟ ಮಾಡಲು ಮುಂದಾಗಿದೆ.

‘ಜೂನ್‌ ಆರಂಭದಿಂದಲೂ ಅರಣ್ಯ ಇಲಾಖೆಯಲ್ಲಿ ಸಸಿಗಳ ಮಾರಾಟ ಶುರು ವಾಗಿದೆ. ಆದರೆ, ಊರಿನಿಂದ ನರ್ಸರಿಗಳಿಗೆ ಹೋಗಿ ಬರೋದೆ ಸಮಸ್ಯೆಯಾಗಿದೆ. ಲಾಕ್‌ಡೌನ್‌ನಿಂದ ವಾಹನಗಳ ಸಂಚಾರ ವಿಲ್ಲ. ಕೃಷಿ ಚಟುವಟಿಕೆಗೆ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರೂ; ವಾಹನ ಮಾಲೀಕರು ಮಾತ್ರ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಜೂನ್‌ನಲ್ಲೇ ಹೊಲದಲ್ಲಿ ಸಸಿ ನೆಡಲು ಆಗಿಲ್ಲ. ಲಾಕ್‌ಡೌನ್‌ ತೆರವಾದ ಬಳಿಕ ಸಸಿಗಳನ್ನು ಹೊಲದಲ್ಲಿ ನೆಡುವೆ ಎಂದು ರೈತ ಬಸವರಾಜು
ತಿಳಿಸಿದರು.

ಮಳೆಗಾಲ ಸೂಕ್ತ: ‘ಸಸಿ ನೆಡಲು ಮಳೆಗಾಲವೇ ಸೂಕ್ತ. ಆರಂಭದಲ್ಲೇ ಗಿಡ ನೆಟ್ಟರೆ, ಈ ಅವಧಿಯಲ್ಲಿ ಹೆಚ್ಚಿನ ನೀರು ಕೇಳಲ್ಲ. ಬೇರು ನೆಲಕ್ಕಿಳಿದು ಗಿಡದ ಬೆಳವಣಿಗೆಗೂ ಪೂರಕ ವಾಗಲಿದೆ’ ಎನ್ನುತ್ತಾರೆ ಸಾಮಾಜಿಕ ಅರಣ್ಯ ಇಲಾ ಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸಿ.ಪ್ರಶಾಂತ್‌ಕುಮಾರ್‌.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಜಿಲ್ಲೆಯ ರೈತರಿಗೆ 2021ರಲ್ಲಿ ವಿತರಿಸಲಿಕ್ಕಾಗಿಯೇ ಇಲಾಖೆಯ ನರ್ಸರಿಗಳಲ್ಲಿ ವಿವಿಧ ಜಾತಿಯ 10 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಒಂದು ಸಸಿ ಬೆಳೆಸಲು ಇಲಾಖೆಗೆ ₹ 20ರಿಂದ ₹ 30 ಖರ್ಚಾದರೂ ರೈತರಿಗೆ
₹ 1, ₹ 3ರ ದರದಲ್ಲಿ ಮಾರಾಟ ಮಾಡುತ್ತೇವೆ’ ಎಂದು ಅವರು ಹೇಳಿದರು.

‘ಕೋವಿಡ್‌ನ ಆತಂಕದಲ್ಲೂ ಈಗಾಗಲೇ 3 ಲಕ್ಷ ಸಸಿ ಮಾರಾಟವಾಗಿವೆ. ಇನ್ನೂ ಸಮಯವಿದೆ. ಎಲ್ಲ ಸಸಿಗಳನ್ನು ಮಾರಾಟ ಮಾಡುತ್ತೇವೆ. ಲಾಕ್‌ಡೌನ್‌ನಿಂದ ಸಸಿಗಳ ಮಾರಾಟಕ್ಕೆ ಕೊಂಚ ಹಿನ್ನಡೆಯಾಗಿದೆ’ ಎಂದು ಡಿಸಿಎಫ್‌ ತಿಳಿಸಿದರು.

1 ಲಕ್ಷ ಸಸಿ ನೆಡುವಿಕೆ: ಪ್ರಶಾಂತ್‌

ರೈತರಿಗೆ ವಿತರಿಸಲಿಕ್ಕಾಗಿಯೇ 10 ಲಕ್ಷ ಸಸಿಗಳನ್ನು ಬೆಳೆಸಿದ್ದರೆ; ಇಲಾಖೆಯಿಂದ ನೆಡಲಿಕ್ಕಾಗಿ 1 ಲಕ್ಷ ಸಸಿ ಬೆಳೆಸಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸಿ.ಪ್ರಶಾಂತ್‌ಕುಮಾರ್‌ ತಿಳಿಸಿದರು.

‘ಚಾಮುಂಡಿ ಬೆಟ್ಟ, ಮಲ್ಲೇಶ್ವರ ಗುಡ್ಡ, ಚಿಕ್ಕದೇವಮ್ಮ ಬೆಟ್ಟದಲ್ಲಿ ತಲಾ 20 ಸಾವಿರ ಸಸಿ ನೆಟ್ಟರೆ, ಮಾದಳ್ಳಿ ಅರಣ್ಯ ವಲಯದಲ್ಲಿ 30 ಸಾವಿರ ಹಾಗೂ ವಾಟಾಳು ಅರಣ್ಯ ವಲಯದಲ್ಲಿ 10 ಸಾವಿರ ಸಸಿ ನೆಡುವ ಕೆಲಸ ನಡೆದಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.