ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ, ರಾಮಾನುಜ ಜಯಂತಿ ಆಚರಣೆ

ಆಧ್ಯಾತ್ಮಿಕ ಜಗತ್ತು ಕಾರ್ಯಕ್ರಮಕ್ಕೆ ಚಾಲನೆ
Last Updated 9 ಮೇ 2019, 20:07 IST
ಅಕ್ಷರ ಗಾತ್ರ

ಮೈಸೂರು: ನಗರದ ವಿವಿಧೆಡೆ ಶಂಕರಾಚಾರ್ಯರ 1,231ನೇ ಜಯಂತಿ ಹಾಗೂ ರಾಮಾನುಜಾಚಾರ್ಯರ 1,002ನೇ ಜಯಂತಿಯನ್ನು ಗುರುವಾರ ವೈಶಿಷ್ಟ್ಯಪೂರ್ಣವಾಗಿ ಆಚರಣೆ ಮಾಡಲಾಯಿತು.

ರಾಮಾನುಜ ಸಹಸ್ರಮಾನೋತ್ಸವ ಸಮಿತಿಯ ವತಿಯಿಂದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಜಯಂತಿ ಅಂಗವಾಗಿ ‘ಆಧ್ಯಾತ್ಮಿಕ ಜಗತ್ತು’ ಕಾರ್ಯಕ್ರಮಕ್ಕೆ ಶಾಸಕ ಎಲ್‌.ನಾಗೇಂದ್ರ ಚಾಲನೆ ನೀಡಿದರು.

‘ಶಂಕರಾಚಾರ್ಯರ ಕೊಡುಗೆ ಅಪಾರ. 32 ವರ್ಷವಷ್ಟೇ ಬದುಕಿದ್ದರೂ ಅವರು ಮಾಡಿದ ಕೆಲಸ ಸ್ಮರಣೀಯ. ಹಿಂದೂ ಧರ್ಮದ ಜಾಗೃತಿ ಕೆಲಸವನ್ನು ಯಾವುದೇ ಮಾಧ್ಯಮ ಸಂಪರ್ಕವಿಲ್ಲದೆ ಮಾಡಿರುವುದು ಇವತ್ತಿನ ಹಿಂದೂಪರ ಸಂಘಟನೆಗಳಿಗೆ ಮಾದರಿಯಾಗಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಮಾತನಾಡಿ, ‘ಜನರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇವರಲ್ಲಿ ಭಕ್ತಿ ಭಾವ ಬೆಳೆಸಿಕೊಳ್ಳಬೇಕು. ಆಗ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಮೂಡುತ್ತದೆ’ ಎಂದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ‘ರಾಜ್ಯ ಸರ್ಕಾರ ಶಂಕರ ಜಯಂತಿಯನ್ನು ಆಚರಿಸುತ್ತಿರುವುದು ಮತ್ತು ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿರುವುದು ಶ್ಲಾಘನೀಯ. ಹಾಗೆಯೇ, ಮುಂದಿನ ದಿನಗಳಲ್ಲಿ ಶಂಕರ ಜಯಂತಿ ಜೊತೆಯಲ್ಲೇ ರಾಮಾನುಜರ– ಮಧ್ವರ ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಮುಖಂಡರಾದ ಆರ್.ಜೆ.ನರಸಿಂಹ ಅಯ್ಯಂಗಾರ್,ಎಂ.ಡಿ.ಪಾರ್ಥಸಾರಥಿ,ಸೌಭಾಗ್ಯಮೂರ್ತಿ, ಪುಟ್ಟಸ್ವಾಮಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ರಾಜಗೋಪಾಲ್ ಕಡಕೊಳ ಜಗದೀಶ್, ರಂಗನಾಥ್, ಸುಚೀಂದ್ರ, ಪ್ರಶಾಂತ್, ಅರುಣ್, ಚಕ್ರಪಾಣಿ ಭಾಗವಹಿಸಿದ್ದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಮೃತಿ ಇಲಾಖೆ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶಂಕರಾಚಾರ್ಯರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಪುಷ್ಪಾರ್ಚನೆ ಮಾಡಿದರು.‌

ಶಂಕರಾಚಾರ್ಯರ ಮೂರ್ತಿ, ಭಾವಚಿತ್ರಗಳನ್ನು ನಗರದ ‌ಬೀದಿಗಳಲ್ಲಿ ಮಂಗಳವಾದ್ಯ, ಭಜನೆ, ವೇದ ಘೋಷಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಅಭಿನವ ಶಂಕರಾಲಯ ವತಿಯಿಂದ ಖಿಲ್ಲೆ ಮೊಹಲ್ಲಾದ ಶೃಂಗೇರಿ ಶಂಕರಮಠದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಸಂಜೆ ಶಂಕರಾಚಾರ್ಯರ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಎಸ್‌.ಎ.ರಾಮದಾಸ್‌, ಕಾಂಗ್ರೆಸ್‌ ಮುಖಂಡ ಸಿ.ಎಚ್‌.ವಿಜಯಶಂಕರ್‌, ಡಿ.ಟಿ.ಪ್ರಕಾಶ್‌, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್‌ ಪಾಲ್ಗೊಂಡಿದ್ದರು.

ವಿಪ್ರ ಜಾಗೃತಿ ವೇದಿಕೆ ವತಿಯಿಂದ ವಿದ್ಯಾರಣ್ಯಪುರಂನಲ್ಲಿರುವ ಅವನಿ ಶೃಂಗೇರಿ ಶಂಕರಮಠದಲ್ಲಿ ಸಂಜೆ ಆದಿಶಂಕರಾಚಾರ್ಯರ ಭವ್ಯ ಮೆರವಣಿಗೆ ನಡೆಯಿತು. ವಿಪ್ರ ಮುಖಂಡರು ಭಾಗವಹಿಸಿದ್ದರು. ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯ, ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.

ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ ವತಿಯಿಂದ ಬೋಗಾದಿ 2ನೇ ಹಂತದ ಆಯಿಷ್‌ ಕಾಲೊನಿಯಲ್ಲಿ ಶಂಕರ ಜಯಂತಿ ಆಚರಿಸಲಾಯಿತು.

ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿಪೂರ್ವ ಕಾಲೇಜು ವತಿಯಿಂದ ಜಯಂತಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿದ್ವಾನ್ ರಾಘವೇಂದ್ರ ಭಟ್ ಅವರು ಶಂಕರರ ಜೀವನ ಚರಿತ್ರೆ ತಿಳಿಸಿದರು. ಪ್ರಾಂಶುಪಾಲ ಟಿ.ಎಸ್‌.ಶ್ರೀಕಂಠಶರ್ಮ, ಜಂಟಿ ಕಾರ್ಯದರ್ಶಿ ಟಿ.ಎಸ್‌.ಸತ್ಯನಾರಾಯಣರಾವ್‌ ಇದ್ದರು.

ಶಂಕರ ಜಯಂತಿ ಸಭಾದ ವತಿಯಿಂದ ಸರಸ್ವತಿಪುರಂನ ಸಮುದಾಯ ಭವನದಲ್ಲಿ ಶಂಕರ ಭಜನಾ ಮಂಡಳಿಯ ಸದಸ್ಯರು ಭಕ್ತಿಗೀತೆಗಳ ಗಾಯನವನ್ನು ಪ್ರಸ್ತುತಪಡಿಸಿದರು. ಸಂಜೆ ವಿದ್ವಾನ್ ಹರೀಶ್ ಪಾಂಡವ್ ಅವರು ಸ್ಯಾಕ್ಸೋಫೋನ್ ವಾದನ ನುಡಿಸಿದರು.

ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾವು ಶಂಕರ ಜಯಂತಿ, ರಾಮಾನುಜಾಚಾರ್ಯರ ಜಯಂತಿ ಆಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT