ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ವಿಶ್ವನಾಥ್‌ 8 ಪೈಸೆಯೂ ಬಿಡುಗಡೆ ಮಾಡಿಸಿಲ್ಲ: ಪ್ರತಾಪ ಸಿಂಹ

ಮೈಸೂರು–ಬೆಂಗಳೂರು ದಶಪ‍ಥ ಹೆದ್ದಾರಿ ನಿರ್ಮಾಣ–ತಾರಕಕ್ಕೇರಿದ ವಾಗ್ವಾದ
Last Updated 24 ಆಗಸ್ಟ್ 2021, 10:57 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಬೆಂಗಳೂರು ದಶಪ‍ಥ ಹೆದ್ದಾರಿ ನಿರ್ಮಾಣ ಕಾಮಗಾರಿ ₹ 8,066 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಸಂಸದರಾಗಿದ್ದ ಎಚ್‌.ವಿಶ್ವನಾಥ್‌ 8ಪೈಸೆಯನ್ನೂ ಬಿಡುಗಡೆ ಮಾಡಿಸಿಲ್ಲ ಎಂದು ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆದ್ದಾರಿ ಯೋಜನೆ ಘೋಷಿಸಿದ್ದು ಪ್ರಧಾನಿ ಮೋದಿ, ಭಾರತ್‌ ಮಾಲಾ ಯೋಜನೆಗೆ ಸೇರಿಸಿ ಅನುದಾನ ನೀಡಿರುವುದು ಮೋದಿ. ಇದರೊಳಗಡೆ ‘ನನ್ನದೂ ಇದೆ’ ಎಂದರೆ ಹೇಗೆ’ ಎಂದು ತಿರುಗೇಟು ನೀಡಿದರು.

‘ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭೇಟಿ ಮಾಡಿ ಯೋಜನೆ ಜಾರಿ ಮಾಡಲಾಯಿತು ಎಂಬುದಾಗಿ ಮಹದೇವಪ್ಪ ಹೇಳುತ್ತಾರೆ. ಗಡ್ಕರಿ ಯಾರು? ಅವರು ನಮ್ಮ ಮಂತ್ರಿ. 2014ರಲ್ಲಿ ಬಿಜೆಪಿಯ 282 ಸಂಸದರು ಆಯ್ಕೆಯಾಗಿದ್ದರಿಂದ ಮೋದಿ ಸರ್ಕಾರದಲ್ಲಿ ಅವರು ಸಚಿವರಾಗಲು ಸಾಧ್ಯವಾಯಿತು. 2019ರಲ್ಲಿ 303 ಸ್ಥಾನ ಗೆದ್ದಿದ್ದರಿಂದ ಮತ್ತೆ ಮಂತ್ರಿಯಾದರು. ಸಚಿವ ಅಥವಾ ಸಂಸದ ಏನೇ ಒಳ್ಳೆಯ ಕೆಲಸ ಮಾಡಿದರೂ ಅದು ಮೋದಿ ಸರ್ಕಾರದ ಯೋಜನೆ ಹಾಗೂ ಸಾಧನೆ’ ಎಂದರು.

‘ತೆರಿಗೆ ಪಾವತಿಸುತ್ತಿರುವುದಾಗಿ ಕೆಲವರು ಹೇಳುತ್ತಾರೆ. 2014ಕ್ಕಿಂತ ಮುಂಚೆ ತೆರಿಗೆ ಪಾವತಿಸುತ್ತಿರಲಿಲ್ಲವೇ? ಏಕೆ ಆಗ ಹೆದ್ದಾಗಿ ನಿರ್ಮಾಣವಾಗಲಿಲ್ಲ. ಯುಪಿಎ ಸರ್ಕಾರ 10 ವರ್ಷ ಇತ್ತು. ಆಗಲೇ ನಿರ್ಮಾಣ ಮಾಡಿ, ಲೋಕಾರ್ಪಣೆ ಮಾಡಿ ಚುನಾವಣೆ ಎದುರಿಸಬಹುದಿತ್ತಲ್ಲವೇ? 2014ರಲ್ಲಿ ವಿಶ್ವನಾಥ್‌ ಅವರು ನನ್ನ ಎದುರು ಸ್ಪರ್ಧಿಸಿದ್ದರು. ಆಗ ತಾವು ಈ ಯೋಜನೆ ತಂದಿರುವುದಾಗಿ ಏಕೆ ಹೇಳಲಿಲ್ಲ. 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ಮಹದೇವಪ್ಪ ಏಕೆ ಈ ವಿಚಾರ ಪ್ರಸ್ತಾಪಿಸಲಿಲ್ಲ’ ಎಂದು ಪ‍್ರಶ್ನಿಸಿದರು.

‘ಇದು ಭಾರತ ಮಾತೆಗೆ ಸೇರಿದ ಯೋಜನೆ’ ಎಂದಿರುವ ತಮ್ಮದೇ ಪಕ್ಷದ ಶಾಸಕ ಎಸ್‌.ಎ.ರಾಮದಾಸ್‌ ಅವರನ್ನೂ ತರಾಟೆಗೆ ತೆಗೆದುಕೊಂಡ ಪ್ರತಾಪಸಿಂಹ, ‘ಕೃಷ್ಣರಾಜ ಕ್ಷೇತ್ರದ ವಿದ್ಯಾರಣ್ಯಪುರದಲ್ಲಿ 25 ವರ್ಷಗಳಿಂದ ಬಿದ್ದಿರುವ ಕಸದ ರಾಶಿಯನ್ನು ತೆಗೆಯುವ ಕೆಲಸವನ್ನು ನಾನೇ ಮಾಡಿಸುತ್ತಿದ್ದೇನೆ. ವಿಲೇವಾರಿಗೆ ಟೆಂಡರ್‌ ಆಹ್ವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಕೂಡ ಭಾರತ ಮಾತೆ ಸುಪುತ್ರ ಮೋದಿ ಯೋಜನೆ. ಈ ಶ್ರೇಯಸ್ಸು ಕೂಡ ಭಾರತ ಮಾತೆಗೆ ಸೇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT