ಶನಿವಾರ, ನವೆಂಬರ್ 28, 2020
25 °C

ನಗರದ ವಿವಿಧ ಪ್ರದೇಶಗಳು ನಿಶಬ್ಧ ವಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಕೆಲವು ಪ್ರದೇಶಗಳನ್ನು ನ. 16ರವರೆಗೆ ನಿಶ್ಯಬ್ಧ ವಲಯ ಎಂದು ಘೋಷಿಸಿ, ಪಟಾಕಿ ಸಿಡಿಸಬಾರದು ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಚಾಮರಾಜೇಂದ್ರ ಮೃಗಾಲಯ, ಕುಕ್ಕರಳ್ಳಿ ಕೆರೆ, ಕಾರಂಜಿ ಕೆರೆ, ಲಿಂಗಾಬುದಿ ಕೆರೆ ಪ್ರದೇಶ, ಸಾರ್ವಜನಿಕ ಉದ್ಯಾನಗಳು, ಆಸ್ಪತ್ರೆ, ನರ್ಸಿಂಗ್ ಹೋಮ್, ಶೈಕ್ಷಣಿಕ ಸಂಸ್ಥೆಗಳು ಹಾಗೂ ಧಾರ್ಮಿಕ ಸ್ಥಳಗಳ 100 ಮೀಟರ್ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರದಿಂದ ನ.16 ಮಧ್ಯರಾತ್ರಿ 12  ಗಂಟೆಯವರೆಗೂ ನಿಶಬ್ಧ ವಲಯ ಎಂದು ಘೋಷಿಸಿ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.

ಹಿರಿಯ ನಾಗರಿಕರು, ಅಸಹಾಯಕರು, ಅಸ್ವಸ್ಥರು ಹಾಗೂ ಪ್ರಾಣಿಪಕ್ಷಿಗಳ ಅರೋಗ್ಯ ಮತ್ತು ರಕ್ಷಣೆ ದೃಷ್ಟಿಯಿಂದ ದೀಪಾವಳಿ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಪಟಾಕಿ ಮಾರಾಟಕ್ಕೆ ತಡೆ; ಆಕ್ರೋಶ‌

ಇಲ್ಲಿನ ಜೆ.ಕೆ.ಮೈದಾನದಲ್ಲಿ ಪಟಾಕಿ ಅಂಗಡಿ ಇಡಲು ಶುಕ್ರವಾರ ಬಂದ ವರ್ತಕರಿಗೆ ಪೊಲೀಸರು ತಡೆ ಒಡ್ಡಿದರು. ಮೈದಾನದ ಗೇಟ್‌ನ್ನು ಬಂದ್ ಮಾಡಿ ಕಮಿಷನರ್‌ ಅವರಿಂದ ಅನುಮತಿ ಪತ್ರ ತರುವಂತೆ ತಿಳಿಸಿದರು. ಇದರಿಂದ ಕೆಲವು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟಾಕಿ ವರ್ತಕರ ಸಂಘದ ಆನಂದ್, ‘ಸಾಕಷ್ಟು ಬಂಡವಾಳ ಹೂಡಿ ಪಟಾಕಿ ಖರೀದಿಸಿದ್ದೇವೆ. ಎಲ್ಲವೂ ಹಸಿರು ಪಟಾಕಿಗಳೇ ಆಗಿವೆ. ಹಿಂದಿನ ವರ್ಷ ಒಂದು ವಾರದಿಂದಲೇ ಮಾರಾಟ ಪ್ರಕ್ರಿಯೆ ಆರಂಭವಾಗುತ್ತಿತ್ತು. ಆದರೆ, ಈಗ ಶುಕ್ರವಾರವೂ ನಮಗೆ ಅನುಮತಿ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‌

ಜೆ.ಕೆ.ಮೈದಾನದಲ್ಲಿ ಪಟಾಕಿ ಅಂಗಡಿ ಇಡಲು ಒಟ್ಟು 12 ಮಂದಿ ಪೊಲೀಸರನ್ನು ಅನುಮತಿ ಕೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.