ಸೋಮವಾರ, ಆಗಸ್ಟ್ 8, 2022
22 °C
ಚಿಕಿತ್ಸೆಗೆ ಸ್ಪಂದಿಸದೇ ಮಗು ಸಾವು

ಮೈಸೂರು: ಮಗು ಆಸ್ಪತ್ರೆಯಲ್ಲಿದ್ದರೂ ಆಂಬುಲೆನ್ಸ್ ಓಡಿಸಿದ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡು ಗಂಭೀರವಾಗಿ ಮಗು ಗಾಯಗೊಂಡರೂ, ರೋಗಿಯೊಬ್ಬರನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವ ಮೂಲಕ ಚಾಲಕ ಮುಬಾರಕ್ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

ಇಲ್ಲಿನ ಗೌಸಿಯಾನಗರದ ನಿವಾಸಿಯಾದ ಮುಬಾರಕ್ (25) ಅವರು ಮೊದಲಿಗೆ ಟೆಂಪೊ ಟ್ರಾವಲರ್‌ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಲಾಕ್‌ಡೌನ್‌ ನಂತರ ಇವರು ಬಿಜೆಪಿ ವತಿಯಿಂದ ನೀಡಲಾದ ಉಚಿತ ಆಂಬುಲೆನ್ಸ್‌ ಚಾಲಕರಾಗಿ ಸೇವೆ ಸಲ್ಲಿಸತೊಡಗಿದರು. ಈ ವೇಳೆ ಜೂನ್ 11ರಂದು ಇವರ ಮಗು ಸೈಯದ್ ಇಬ್ರಾಹಿಂ (2) ಆಟವಾಡುತ್ತಿರುವಾಗ  ಸ್ನಾನಕ್ಕಾಗಿ ಆಗ ತಾನೆ ಹಂಡೆಯಿಂದ ಬಕೀಟ್‌ಗೆ ತೆಗೆದಿರಿಸಿದ್ದ ಬಿಸಿ ನೀರನ್ನು ತನ್ನ ಮೇಲೆ ಚೆಲ್ಲಿಕೊಂಡು ಗಂಭೀರವಾಗಿ ಗಾಯಗೊಂಡಿತು. ಕೂಡಲೇ ಮಗುವನ್ನು ಇವರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರು.

‘ಜೀವನ್ಮರಣದ ನಡುವೆ ಮಗು ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಕರೆ ಬಂದ ತಕ್ಷಣ ಇಲ್ಲಿನ ಸಿಗ್ಮಾ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರನ್ನು ಚಾಮರಾಜನಗರಕ್ಕೆ ತನ್ನ ಆಂಬುಲೆನ್ಸ್‌ನಲ್ಲಿ ಸೋಮವಾರ ರಾತ್ರಿ 9.30ಕ್ಕೆ ಕರೆದುಕೊಂಡು ಹೋಗುವ ಮೂಲಕ ಮುಬಾರಕ್ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಇವರು ಮಂಗಳವಾರ ನಸುಕಿನ ಹೊತ್ತಿಗೆ ವಾಪಸ್ ಬರುವಷ್ಟರಲ್ಲಿ ಇವರ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತ್ತು’ ಎಂದು ಬಿಜೆಪಿಯ ಕೋವಿಡ್‌ ನೆರವಿನ ತಂಡದ ಸಂಚಾಲಕ ಜಯಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಬಾರಕ್, ‘ನನಗೆ ರೋಗಿ ಮುಖ್ಯ. 2 ತಿಂಗಳಿನಿಂದ ಉಚಿತವಾಗಿ ಚಾಲನೆ ಮಾಡುತ್ತಿದ್ದೇನೆ. ಇದರಲ್ಲೇ ತೃಪ್ತಿ ಕಾಣುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು. ಮಗು ಮೃತಪಟ್ಟಿರುವ ಕುರಿತು ಇಲ್ಲಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.