ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ತಣಿಸಿದ ಸರೋದ್‌ ವಾದನ

ಪಾರಂಪರಿಕ ಸಂಗೀತೋತ್ಸವದಲ್ಲಿ ಪಂಡಿತ್‌ ರಾಜೀವ್‌ ತಾರಾನಾಥ್
Last Updated 7 ಸೆಪ್ಟೆಂಬರ್ 2019, 7:27 IST
ಅಕ್ಷರ ಗಾತ್ರ

ಮೈಸೂರು: ಆರಂಭದಲ್ಲಿ ಕಾವ್ಯವಾಚನ, ನಂತರ ಮಕ್ಕಳ ತಬಲಾ ವಾದನ, ಕೊನೆಯಲ್ಲಿ ಪಂಡಿತ್‌ ರಾಜೀವ್‌ ತಾರಾನಾಥ್ ಅವರ ಸರೋದ್‌ ವಾದನ ಇವೆಲ್ಲವೂ ಮುಪ್ಪುರಿಗೊಂಡು ಪ್ರೇಕ್ಷಕರ ಮನ ತಣಿಸಿತು.

ಈ ದೃಶ್ಯಗಳು ಶ್ರೀ ಪ್ರಸನ್ನ ವಿದ್ಯಾ ಗಣಪತಿ ಮಂಡಲಿ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ) ವತಿಯಿಂದ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಇಲ್ಲಿನ ವಿ.ವಿ ಮೊಹಲ್ಲಾದ 8ನೇ ಅಡ್ಡರಸ್ತೆಯಲ್ಲಿ ನಡೆಯುತ್ತಿರುವ ‘58ನೇ ಪಾರಂಪರಿಕ ಸಂಗೀತೋತ್ಸವ’ದಲ್ಲಿ 5ನೇ ದಿನವಾದ ಶುಕ್ರವಾರ ಕಂಡು ಬಂತು.‌

ಬೆಂಗಳೂರಿನ ವಿದ್ವಾನ್‌ ಸುಮಾ ಪ್ರಸಾದ್ ಅವರು ‘ಸುಭಟರನ್ನು ಧರ್ಮರಾಯ ಒಲಿಸಿಕೊಂಡದ್ದು’ ಪ್ರಸಂಗವನ್ನು ವಾಚನ ಮಾಡುತ್ತಿದ್ದರೆ, ವಿದ್ವಾನ್ ಸುಧಾ ರತ್ನಾ ಅವರು ವ್ಯಾಖ್ಯಾನ ಮಾಡಿದರು.

ಇದಾದ ನಂತರ ಪ್ರದ್ಯುಮ್ ಉದಯ್ ಕರ್ಪೂರ್ ಅವರ ತಬಲಾ ವಾದನ ಮನಸೂರೆಗೊಂಡಿತು. ವಾದನ ಜತೆಗೆ ಅವರು ಹಾಡಿದ ‘ಗಣೇಶ ಭಜೆ’ ಹಾಡು ಸಹ ಮನಸೆಳೆಯಿತು. ಚಿಕ್ಕ ವಯಸ್ಸಿನಲ್ಲೇ ಅವರ ಅಗಾಧ ಪ್ರತಿಭೆ ಕಂಡು ಸಭಿಕರು ಮೂಕವಿಸ್ಮಿತರಾದರು.‌

ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಪಂಡಿತ್‌ ರಾಜೀವ್‌ ತಾರಾನಾಥ್ ಅವರು ವೇದಿಕೆ ಏರುತ್ತಿದ್ದಂತೆ ಜನರ ಗಮನವೆಲ್ಲ ಅವರ ಕಡೆಗೆ ನೆಟ್ಟಿತು. ಅವರ ಸರೋದ್‌ನಿಂದ ತೇಲಿ ಬಂದ ರಿಂಗಣದ ಅಲೆಗಳು ಗುಸುಗುಸು ಸದ್ದನ್ನು ಅಡಗಿಸಿದವು. ರಾಗದ ಹೆಸರಿನ ಗೊಡವೆ ಏಕೆ ಎಂಬಂತೆ ತದೇಕ ಚಿತ್ತದಿಂದ ಕೇಳಲು ಶುರುವಿಟ್ಟರು.

ಆರಂಭದಲ್ಲಿ ತಾರಾನಾಥ್ ಅವರು ನಿಧಾನವಾಗಿಯೇ ವಾದನ ಆರಂಭಿಸಿದರು. ಇದಕ್ಕೆ ಪಕ್ಕವಾದ್ಯದಲ್ಲಿ ಅರಣ್ಯಕುಮಾರ್ ಸಿತಾರ್‌ ವಾದನ ಸಹ ಜತೆಜತೆಯಾಗಿಯೇ ಕೇಳಿ ಬಂದಿದ್ದು ಕಿವಿಗೆ ಹಿತ ಎನಿಸಿತು.

ಆಲಾಪಜೋಡ್‌ನ್ನು ಯಮನಕಲ್ಯಾಣ ರಾಗದಲ್ಲಿ ನುಡಿಸಿದ್ದು, ಬೇಸ್‌ಮಲ್ಹಾರವನ್ನು ತೀನ್‌ತಾಳ್‌ನ 2 ಗತ್ತಿನಲ್ಲಿ ಕಾಫಿಯನ್ನು ರಾಗಮಾಲಾದಲ್ಲಿ ನುಡಿಸಿದ್ದನ್ನು ಕೇಳಿ ಪ್ರೇಕ್ಷಕ ವೃಂದ ಕರತಾಡನ ಮೊಳಗಿಸಿತು.

ಸಿಂಧುಭೈರವಿಯ ಮೂಲಕ ವಾದನವನ್ನು ಅಂತ್ಯಗೊಳಿಸಿದ್ದು, ಇಡೀ ಸಂಗೀತೋತ್ಸವಕ್ಕೆ ಅರ್ಥಪೂರ್ಣವಾದ ದಿನದ ಅಂತ್ಯವನ್ನು ಹಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT