ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಜಾನ್‌ಗೆ ಪ್ರತಿರೋಧ: ಮೈಸೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಮೊಳಗಿದ ಸುಪ್ರಭಾತ!

ಆಜಾನ್‌ಗೆ ಪ್ರತಿರೋಧ–ಮುತಾಲಿಕ್‌ ನೇತೃತ್ವದಲ್ಲಿ ಶ್ರೀರಾಮಸೇನೆ ಅಭಿಯಾನ
Last Updated 9 ಮೇ 2022, 6:56 IST
ಅಕ್ಷರ ಗಾತ್ರ

ಮೈಸೂರು: ಆಜಾನ್‌ಗೆ ಪ್ರತಿರೋಧವಾಗಿ ನಗರದ ಶಿವರಾಂಪೇಟೆಯ ಆಂಜನೇಯ ಸ್ವಾಮಿ ದೇಗುಲದಲ್ಲಿ ಸೋಮವಾರ ನಸುಕಿನ 5 ಗಂಟೆಗೆ ಸುಪ್ರಭಾತ, ಓಂಕಾರ ಮೊಳಗಿದೆ.

ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸುಮಾರು ಒಂದು ಗಂಟೆ ಶ್ರೀರಾಮ, ಶಿವನ ಭಜನೆ ಮಾಡಿದರು. ಹನುಮಾನ್‌ ಚಾಲೀಸಾ ಪಠಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ನೀಡಿದ್ದರು.

‘ಸಾವಿರಕ್ಕೂ ಹೆಚ್ಚು ದೇಗುಲಗಳಲ್ಲಿ ಸುಪ್ರಭಾತ ಮೊಳಗಿಸುವುದಾಗಿ ಹೇಳಿದ್ದೆವು. ಮೈಸೂರಲ್ಲಿ ಆಂದೋಲನ ಆರಂಭವಾಗಿದ್ದು, ರಾಜ್ಯ ಸರ್ಕಾರ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡುವಲ್ಲಿ 100ರಷ್ಟು ಯಶಸ್ವಿಯಾಗಿದ್ದೇವೆ’ ಎಂದು ಪ್ರಮೋದ್‌ ಮುತಾಲಿಕ್‌ ಸುದ್ದಿಗಾರರಿಗೆ ತಿಳಿಸಿದರು.

‘ಮಸೀದಿಗಳ ಮೇಲೆ ಲೌಡ್‌ ಸ್ಪೀಕರ್‌ ಹಾಕಿ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಮುಸ್ಲಿಂ ಸಮುದಾಯ ಶಬ್ದಮಾಲಿನ್ಯ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

‘ಉಲ್ಲಂಘನೆ ಮಾಡುತ್ತಿರುವ ಮುಸ್ಲಿಮರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ, ದೇಗುಲಗಳಿಗೆ ನೋಟಿಸ್‌ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದೆಯೇ? ನಮ್ಮ ಮೇಲೇಕೆ ನಿಮ್ಮ ಆಕ್ರೋಶ? ದೇಗುಲಗಳಲ್ಲಿ ಭಕ್ತಿಗೀತೆ ಹಾಕುವ, ಪೂಜೆ ಮಾಡುವವರನ್ನು ಬಂಧಿಸುತ್ತೀರಾ? ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. ಹಿಂದೂ ಸಂಸ್ಕೃತಿ, ಹಿಂದೂ ವಿಚಾರಧಾರೆಯಲ್ಲಿ ಸರ್ಕಾರ ರಚಿಸಿ ಈಗ ನಮಗೇ ನೋಟಿಸ್‌ ನೀಡುತ್ತೀರಾ’ ಎಂದು ಪ್ರಶ್ನಿಸಿದರು.

‘ಇದು ತಾಲಿಬಾನ್‌, ಪಾಕಿಸ್ತಾನ ಅಲ್ಲ. ಮುಸ್ಲಿಂ ಸಮುದಾಯದ ಆಜಾನ್‌ನಿಂದ ಹಲವರಿಗೆ ತೊಂದರೆ ಆಗಿದೆ. ಈ ರೀತಿ ಹಟ ಬಿಡಬೇಕು. ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ಇಲ್ಲದಿದ್ದರೆ ನಾವೇ ಕ್ರಮ ಕೈಗೊಳ್ಳುತ್ತೇವೆ’‌ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT