ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಾರ್ಕ್ ವೆಬ್' ಭೇದಿಸುವಲ್ಲಿ ಯಶಸ್ವಿ: ಬಸವರಾಜ ಬೊಮ್ಮಾಯಿ ಶ್ಲಾಘನೆ

ಪೊಲೀಸ್‌ ಇಲಾಖೆ ಸಾಧನೆಗೆ ಮೆಚ್ಚುಗೆ
Last Updated 6 ಸೆಪ್ಟೆಂಬರ್ 2022, 15:36 IST
ಅಕ್ಷರ ಗಾತ್ರ

ಮೈಸೂರು: ‘ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಪೊಲೀಸ್‌ ಇಲಾಖೆಯು ಗಮನಾರ್ಹ ಸಾಧನೆ ಮಾಡಿದ್ದು, ‘ಡಾರ್ಕ್ ವೆಬ್’ ಅನ್ನು ಭೇದಿಸಲು ಯಶಸ್ವಿಯಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ‘ಸೈಬರ್‌ವರ್ಸ್ ಫೌಂಡೇಶನ್’ ಸ್ಥಾಪಿಸಿರುವ ‘ಸೈಬರ್‌ವರ್ಸ್ ಲ್ಯಾಬ್’, ‘ಕಾಪ್ ಕನೆಕ್ಟ್’ ಆ್ಯಪ್ ಅನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೊಂಡಿದ್ದು, ರಾಜ್ಯದಲ್ಲಿಯೇ ಡಿಜಿಟಲ್ ವಹಿವಾಟು ಹೆಚ್ಚು ನಡೆಯುತ್ತಿದೆ. ಹೀಗಾಗಿ ಸೈಬರ್ ಭದ್ರತೆಯನ್ನು ನೀಡಲು, ‘ಸೈಬರ್‌ ಭದ್ರತಾ ನೀತಿ’ಯನ್ನು ಸರ್ಕಾರವು ರೂಪಿಸಿದೆ’ ಎಂದು ತಿಳಿಸಿದರು.

‘ಸೆಮಿ ಕಂಡಕ್ಟರ್ ನೀತಿ, ಬಾಹ್ಯಾಕಾಶ ನೀತಿ, ಸಂಶೋಧನ ಹಾಗೂ ಅಭಿವೃದ್ಧಿ ನೀತಿ, ಉದ್ಯೋಗ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯವಾಗಿದ್ದು, ಇದೀಗ ಸೈಬರ್‌ ನೀತಿಯನ್ನು ಜಾರಿಗೊಳಿಸುತ್ತೇವೆ’ ಎಂದರು.

‘ಸೈಬರ್ ದಾಳಿಗಳಿಂದ ನಾಡನ್ನು ರಕ್ಷಿಸಲು, ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮೈಸೂರಿನ ರಾಜವಂಶಸ್ಥರು ಮುಂದಾಗಿರುವುದು ಶ್ಲಾಘನೀಯ. ಇದು ಉತ್ತಮ ಪ್ರಯತ್ನವಷ್ಟೇ ಅಲ್ಲ ಸಾಹಸವಾಗಿದೆ’ ಎಂದು ಪ್ರಶಂಸಿಸಿದರು.

‘ಸೂಪರ್-30 ಕಾರ್ಯಕ್ರಮದಡಿ2025ರ ವೇಳೆಗೆ ರಾಜ್ಯದ 30 ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಸೈಬರ್ ಲ್ಯಾಬ್ ಸ್ಥಾಪಿಸಿ 1 ಲಕ್ಷ ಮಂದಿ ತಂತ್ರಜ್ಞರನ್ನು ರೂಪಿಸಲಾಗುವುದು’‍ ಎಂದು ಮಾಹಿತಿ ನೀಡಿದರು.

ಐ.ಟಿ. ಮತ್ತು ಬಿ.ಟಿ. ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ‘ಬಿಯಾಂಡ್ ಬೆಂಗಳೂರು ಅಭಿಯಾನದ ಮೂಲಕ ಎರಡನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸುವುದು ಸರ್ಕಾರದ ಗುರಿಯಾಗಿದ್ದು, ಮೈಸೂರಿನಲ್ಲಿ ಹತ್ತಾರು ಉದ್ಯಮಗಳು ನೆಲೆಯೂರುತ್ತಿವೆ’ ಎಂದು ತಿಳಿಸಿದರು.

‘ನಗರದ ಐಟಿ ಕ್ಷೇತ್ರವು ₹3 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದು, ಅದನ್ನು ₹ 15 ಸಾವಿರ ಕೋಟಿಗೆ ಹೆಚ್ಚಿಸಲಾಗುವುದು.ಲಕ್ಷಾಂತರ ವಹಿವಾಟು ನಡೆಸುವ ಮೂಲಕ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ವೈಭವದ ದಿನಗಳು ಮರಳಿಸುವುದೇ ಗುರಿಯಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ (ಗ್ಲೋಬಲ್ ಟೆಕ್ನಾಲಜಿ ಸೆಂಟರ್) ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸೆಮಿಕಂಡಕ್ಟರ್ ಹಬ್ ಸ್ಥಾಪಿಸಲಾಗುತ್ತಿದೆ. ₹ 22 ಸಾವಿರ ಕೋಟಿ ಹೂಡಿಕೆಯಾಗಿದ್ದು, ಅದರಲ್ಲಿ ಸರ್ಕಾರವೇ ₹ 6 ಸಾವಿರ ಕೋಟಿ ನೀಡುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸೈಬರ್ ವರ್ಸ್ ಫೌಂಡೇಶನ್ ಅಧ್ಯಕ್ಷೆ ತ್ರಿಷಿಕಾ ಕುಮಾರಿ ಒಡೆಯರ್, ಸಲಹಾ ಮಂಡಳಿ ಅಧ್ಯಕ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ ಸಿಂಹ ಇದ್ದರು.

‘ಸೈಬರ್‌ ಭದ್ರತೆ; ರಾಜವಂಶಸ್ಥರ ದೂರದೃಷ್ಟಿ’:‘ಮೈಸೂರು ಸಂಸ್ಥಾನದ ಅರಸರು ಶತಮಾನಗಳಿಂದಲೂಪ್ರಗತಿಪರ, ಜನಪರವಾಗಿ ಯೋಜನೆಗಳನ್ನು ಜಾರಿಗೊಳಿಸಿ ನಾಡನ್ನು ಕಟ್ಟಿದ್ದಾರೆ. ಸೈಬರ್ ಭದ್ರತೆ ಹಾಗೂ ರಕ್ಷಣೆಯಲ್ಲೂ ಹೊಸ ಹೆಜ್ಜೆ ಇಟ್ಟಿರುವುದು ಅವರ ದೂರದೃಷ್ಟಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

‘ಸ್ವಾತಂತ್ರ್ಯ‍ಪೂರ್ವದಲ್ಲಿಯೇ ಕಬ್ಬಿಣ ಮತ್ತು ಉಕ್ಕು ತಯಾರಿಸುವ ಕಾರ್ಖಾನೆಯಿಂದ ಹಿಡಿದು ಶಾಹಿ ತಯಾರಿಸುವ ಕಿರು ಕೈಗಾರಿಕೆ ಸ್ಥಾಪಿಸಿದ್ದರು. ಸಿಮೆಂಟ್, ಸಕ್ಕರೆ, ಸಾಬೂನು, ಬ್ಯಾಂಕಿಂಗ್ ಸೇರಿದಂತೆ ಕಲ್ಯಾಣ ರಾಜ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅರಸರು ಕಲ್ಪಿಸಿದ್ದರು’ ಎಂದು ಸ್ಮರಿಸಿದರು.

‘ನೀರು ಉಳಿಸಲು ಬಂದರೆ, ರಾಜೀನಾಮೆ ಕೇಳಿದ್ದರು’:‘ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್‌ ಅಣೆಕಟ್ಟೆಯ 75 ವರ್ಷ ಹಳೆಯದಾದ ಗೇಟ್‌ಗಳಿಂದ 300 ಕ್ಯುಸೆಕ್‌ ನೀರು ಸೋರಿಕೆಯಾಗುತ್ತಿತ್ತು. ಬದಲಾಯಿಸಿದರೆ ಶಾಪ ತಟ್ಟುತ್ತದೆ. ಆಮೇಲೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಂಜಿನಿಯರ್ ಒಬ್ಬರು ಹೇಳಿದ್ದರು’ ಎಂದು ಬೊಮ್ಮಾಯಿ ಹೇಳುತ್ತಿದ್ದಂತೆ ನಗೆಗಡಲಲ್ಲಿ ತೇಲಿದರು.

‘ನೀರು ಉಳಿಸಲು ಬಂದರೆ ಅಧಿಕಾರಿ ರಾಜೀನಾಮೆ ಕೇಳುತ್ತಾರಲ್ಲ ಎಂದು ವಾಪಸಾದೆ. ರಾತ್ರಿ ನಿದ್ದೆ ಬರಲಿಲ್ಲ. ರಾಜರ ಕಾರ್ಯಗಳು ಕಣ್ಮುಂದೆ ಬಂದವು. ಮುಖ್ಯ ಎಂಜಿನಿಯರ್‌ಗೆ ಕರೆ ಮಾಡಿ ಯೋಜನೆ ರೂಪಿಸಿ 16 ಗೇಟ್‌ಗಳನ್ನು ದುರಸ್ತಿ ಮಾಡಲಾಯಿತು. ರಾಜರು ಕಟ್ಟಿದ ಅಣೆಕಟ್ಟೆಗೆ ಅಳಿಲು ಸೇವೆ ಮಾಡಿದ್ದೇನೆಂಬ ತೃಪ್ತಿಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT