ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರರ ಬಗ್ಗೆ ತಪ‍್ಪು ಮಾಹಿತಿ: ಶ್ರೀಗಳ ಖಂಡನೆ

Last Updated 2 ಜೂನ್ 2022, 11:29 IST
ಅಕ್ಷರ ಗಾತ್ರ

ಮೈಸೂರು: ’ಬಸವಣ್ಣನವರ ಖ್ಯಾತಿ ಸಾಗರದಿಂದಾಚೆಗೂ ವ್ಯಾಪಿಸುತ್ತಿರುವುದನ್ನು ಸಹಿಸದೆ ಅವರ ಚರಿತ್ರೆಗೆ ಚ್ಯುತಿ ತರಲಾಗುತ್ತಿದೆ. ಇದರ ಭಾಗವಾಗಿಯೇ ಪರಿಷ್ಕೃತ ಪಠ್ಯದಲ್ಲಿ ಅವರ ಬಗ್ಗೆ ತಪ್ಪು ಮಾಹಿತಿ ಅಳವಡಿಸಲಾಗಿದೆ. ಇದು ಖಂಡನೀಯವಾದುದು’ ಎಂದು ಹೊಸಮಠದ ಚಿದಾನಂದ ಸ್ವಾಮೀಜಿ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಬಸವಣ್ಣನವರ ತತ್ವ-ಆದರ್ಶ, ಚಿಂತನೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಬೆಳವಣಿಗೆ ತಡೆಯುವ ಹುನ್ನಾರ ನಡೆಸಿ ಪಠ್ಯಕ್ರಮದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಬ್ರಾಹ್ಮಣೀಕರಣವು ಎಲ್ಲೆಡೆಯೂ ಮುನ್ನಲೆಗೆ ಬರುತ್ತಿದೆ. ಇದು ವ್ಯಾಪಕವಾಗಲು ರಾಜಕೀಯ ಪಕ್ಷಗಳ ಕೊಡುಗೆಯೂ ಇದೆ. ಇದನ್ನು ವಿರೋಧಿಸಿದಾಗ ಗಲಾಟೆಗಳೂ ನಡೆದಿವೆ’ ಹೇಳಿದರು.

‘ಪಠ್ಯದಲ್ಲಿ ಬಸವಣ್ಣನವರ ಮೂಲ ವಿಷಯವನ್ನು ಹಾಗೆಯೇ ಉಳಿಸಬೇಕು. ಈಗಿರುವ ಪಠ್ಯ ಕೈಬಿಡಬೇಕು. ಸರ್ಕಾರ ಈ ಕೆಲಸವನ್ನು ತ್ವರಿತವಾಗಿ ಮಾಡಬೇಕು’ ಎಂದು ಆಗ್ರಹಿಸಿದರು.

‌‘ಬಸವಣ್ಣನವರ ಕುರಿತು ತಿರುಚಿ ಬರೆದಿರುವುದನ್ನು ನೋಡಿದರೆ ಸರ್ಕಾರ ರಚಿಸಿದ ಪಠ್ಯ ಪರಿಷ್ಕರಣಾ ಸಮಿತಿ ದುರುದ್ದೇಶದಿಂದ ಈ ಕೆಲಸ ಮಾಡಿದೆ ಎನ್ನುವುದು ಗೊತ್ತಾಗುತ್ತದೆ. 9ನೇ ತರಗತಿಯ ಸಮಾಜವಿಜ್ಞಾನ ಪುಸ್ತಕದಲ್ಲಿ ಕಿರು ಬರಹವನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ. ಇದು ನೀಚತನ ಮತ್ತು ಕೀಳುಮಟ್ಟದ ರಾಜಕಾರಣವಾಗಿದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ಎನ್ನುವ ದೋಷಪೂರಿತ ವಿಚಾರ ಪಠ್ಯದಲ್ಲಿ ಸೇರಿದೆ. ಬಸವಣ್ಣನವರ ಇತಿಹಾಸದ ಸತ್ಯ ಸಂಗತಿಗೆ ಬದಲಾಗಿ ತಿರುಚಿದ ವಿಚಾರಗಳನ್ನು ಸೇರಿಸಲಾಗಿದೆ. ಅವರ ಆಶಯಕ್ಕೆ ಅಪಚಾರ ಎಸಗಿ ಸತ್ಯ ಮರೆಮಾಚಲಾಗಿದೆ. ಆ ಪಠ್ಯವನ್ನು ವಿದ್ಯಾರ್ಥಿಗಳು ಓದಿದರೆ ಅವರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯದ ಬೀಜ ಬಿತ್ತಿದಂತಾಗುತ್ತದೆ. ಸರ್ಕಾರವು ದೋಷಪೂರಿತ ಪಠ್ಯವನ್ನು ತಜ್ಞರಿಂದ ತಿದ್ದುಪಡಿ ಮಾಡಿಸಿ, ಪಠ್ಯಪುಸ್ತಕದಲ್ಲಿ ಅಳವಡಿಸಬೇಕು’ ಎಂದು ಒತ್ತಾಯಿಸಿದರು.

‘ತಪ್ಪು ಸರಿಪಡಿಸದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.‌‌

ಕುದೇರು ಮಠದ ಗುರುಶಾಂತ ಸ್ವಾಮೀಜಿ, ರಾಘವೇಂದ್ರನಗರದ ಬಸವೇಶ್ವರ ಮಠದ ಶಿವಪ್ರಭು ಸ್ವಾಮೀಜಿ, ದೇವಾಲಪುರ ಮಠದ ಜಡೇಸ್ವಾಮೀಜಿ, ಮಹಾಸಭಾದ ಕಾರ್ಯದರ್ಶಿ ಎಂ. ಮರಪ್ಪ, ಪದಾಧಿಕಾರಿಗಳಾದ ಸಿದ್ದಲಿಂಗಸ್ವಾಮಿ, ಎಲ್. ಶಿವಲಿಂಗಪ್ಪ, ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೊ.ಗಂಗಾಧರ ಸ್ವಾಮಿ, ಮುಖಂಡರಾದ ಕೇಬಲ್ ಮಹೇಶ್, ಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT