ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿ ಬಾಗಿಲು ದಿಢೀರ್‌ ಮುಚ್ಚಿಸಿದರು...

ದಿಕ್ಕುತೋಚದಂತಾದ ವರ್ತಕ ಸಮೂಹ
Last Updated 22 ಏಪ್ರಿಲ್ 2021, 12:51 IST
ಅಕ್ಷರ ಗಾತ್ರ

ಮೈಸೂರು: ಎಂದಿನಂತೆ ವಹಿವಾಟು ನಡೆಸಲಿಕ್ಕಾಗಿ ನಗರದ ವಿವಿಧೆಡೆ ತೆರೆದಿದ್ದ ಅಂಗಡಿಗಳ ಬಾಗಿಲನ್ನು, ಗುರುವಾರ ಏಕಾಏಕಿ ಯಾವೊಂದು ಮುನ್ಸೂಚನೆ ನೀಡದೆ ಪೊಲೀಸರು ಬಂದ್‌ ಮಾಡಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.

‘ಶನಿವಾರ, ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ರಾತ್ರಿ‌ 9ರಿಂದ ಬೆಳಿಗ್ಗೆ 6 ಗಂಟೆಯವರೆಗೂ ಮಾತ್ರ ಕರ್ಫ್ಯೂ ಇರಲಿದೆ. ಉಳಿದ ಅವಧಿಯಲ್ಲಿ ಕೋವಿಡ್–19 ಮಾರ್ಗಸೂಚಿ ಪಾಲಿಸಿಕೊಂಡು ವಹಿವಾಟು ನಡೆಸಬಹುದು ಎಂಬ ಆದೇಶ ಎಲ್ಲೆಡೆ ಹರಿದಾಡಿತ್ತು. ಅದರಂತೆ ನಾವು ವಹಿವಾಟು ನಡೆಸುತ್ತಿದ್ದೆವು.’

‘ಆದರೆ ಗುರುವಾರ ಪೊಲೀಸರು ಏಕಾಏಕಿ ನಮ್ಮ ಅಂಗಡಿಗಳ ಬಾಗಿಲು ಬಂದ್‌ ಮಾಡಿಸಿದರು. ಈಗಾಗಲೇ ವ್ಯಾಪಾರವಿಲ್ಲದೇ ಕಂಗಾಲಾಗಿದ್ದ ನಮಗೆ ಪೊಲೀಸರ ಈ ಕ್ರಮ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ನಮ್ಮ ಹೊಟ್ಟೆಪಾಡು ಹೇಗೆ ಅನ್ನೊದೇ ಚಿಂತೆ ಆಗಿದೆ. ನಮಗೂ ಅವಕಾಶ ಮಾಡಿಕೊಟ್ಟಿದ್ರೆ, ನಾಲ್ಕು ಕಾಸು ದುಡ್ಕೊತ್ತಿದ್ದೆವು. ಈಗ ಎಲ್ಲದಕ್ಕೂ ತೊಂದರೆಯಾಗಿದೆ. ದಿಕ್ಕೇ ತೋಚದಂತಾಗಿದೆ’ ಎಂದು ವ್ಯಾಪಾರಿಗಳು ‘ಪ್ರಜಾವಾಣಿ’ ಬಳಿ ಗೋಳು ತೋಡಿಕೊಂಡರು.

ಬಾಗಿಲು ಮುಚ್ಚಿಸಿದರು: ದಿನಸಿ ಅಂಗಡಿ, ಮೆಡಿಕಲ್‌ ಸ್ಟೋರ್‌, ಹೋಟೆಲ್‌, ಬೇಕರಿ ಸೇರಿದಂತೆ ದಿನಬಳಕೆಯ ವಸ್ತು, ಅವಶ್ಯ ವಸ್ತುಗಳಡಿ ಬರುವ ಅಂಗಡಿಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಅಂಗಡಿಗಳ ಬಾಗಿಲನ್ನು ಪೊಲೀಸರು ಮುಚ್ಚಿಸಿದರು.

ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಶಿವರಾಂಪೇಟೆ, ಧನ್ವಂತ್ರಿ ರಸ್ತೆ, ಅಶೋಕ ರಸ್ತೆ, ಅಗ್ರಹಾರ, ಚಾಮರಾಜ ಜೋಡಿರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಒಂಟಿಕೊಪ್ಪಲು, ಜಯನಗರ, ಕೆ.ಜಿ.ಕೊಪ್ಪಲು, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಶಾಂತಿನಗರ, ರಾಮಾನುಜ ರಸ್ತೆ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಎಲ್ಲ ರಸ್ತೆಗಳ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT