ಗುರುವಾರ , ಆಗಸ್ಟ್ 5, 2021
26 °C
ರಾಜ್ಯ ಸರ್ಕಾರಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದಲೂ ವರದಿ ಸಲ್ಲಿಕೆ

ಎಸ್ಸೆಸ್ಸೆಲ್ಸಿಯವರೆಗೂ ಆನ್‌ಲೈನ್ ಪಾಠ ಬೇಡ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವರದಿ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಮೈಸೂರು: ಆನ್‌ಲೈನ್‌ ತರಗತಿ ಬಗ್ಗೆ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿ ನೀಡುವ ಮುನ್ನವೇ, ‘ಎಸ್ಸೆಸ್ಸೆಲ್ಸಿಯವರೆಗೂ ಆನ್‌ಲೈನ್‌ ಶಿಕ್ಷಣ ಬೇಡ’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಸಲ್ಲಿಸಿರುವುದು ಗೊತ್ತಾಗಿದೆ.

ಆಯೋಗದ ಸದಸ್ಯರು ರಾಜ್ಯದ ವಿವಿಧೆಡೆ ಪ್ರವಾಸ ನಡೆಸಿ, ವಿದ್ಯಾರ್ಥಿಗಳು–ಪೋಷಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭ ಆನ್‌ಲೈನ್‌ ಶಿಕ್ಷಣಕ್ಕೆ ಅಡ್ಡಿಯಾಗುವ ಅಂಶಗಳನ್ನು ಗುರುತಿಸಿದ್ದು, ಅವುಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಅಂತರ್ಜಾಲ ಶಿಕ್ಷಣವು ಮಕ್ಕಳನ್ನು ಬೆಸೆಯುವ ಬದಲು, ಅವರಲ್ಲಿ ಅಗಾಧವಾದ ಕಂದಕ ಸೃಷ್ಟಿಸುತ್ತದೆ. ಮಕ್ಕಳ ದೈಹಿಕ ಆರೋಗ್ಯವಲ್ಲದೇ, ಮಾನಸಿಕ ಆರೋಗ್ಯವೂ ಕುಸಿಯುತ್ತದೆ’ ಎಂಬ ಅಂಶ ವರದಿಯಲ್ಲಿದೆ.

‘ಮಕ್ಕಳು ನಿರಂತರವಾಗಿ ಕಂಪ್ಯೂಟರ್‌ ಹಾಗೂ ಮೊಬೈಲ್ ಬಳಸಿದರೆ, ತೀವ್ರ ರೀತಿಯ ಕಣ್ಣಿನನೋವು, ತಲೆನೋವು, ದೃಷ್ಟಿ ಮಂಜಾಗುವುದು, ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುತ್ತಾರೆ. ನೆನಪಿನ ಶಕ್ತಿ ಕ್ಷೀಣಿಸುವುದು, ನಿದ್ರಾಹೀನತೆ, ಹಸಿವಿಲ್ಲದೇ ಇರುವುದು, ತೂಕದಲ್ಲಿ ಇಳಿಕೆ, ಉದ್ವೇಗತನ, ಮಿದುಳಿನ ಬೆಳವಣಿಗೆಗೆ ತೊಡಕು, ಸಿಟ್ಟಿಗೇಳುವುದು ಹೆಚ್ಚಾಗಲಿದೆ’ ಎಂಬ ತಜ್ಞರ ಅಭಿಮತವನ್ನು ಉಲ್ಲೇಖಿಸಿದ್ದಾರೆ.

ಕೊಡಗು, ಮೈಸೂರು ಜಿಲ್ಲೆಯ ಹಳ್ಳಿಗಳು ಹಾಗೂ ಹಾಡಿಗಳಲ್ಲಿ ಸಂಚರಿಸಿರುವ ಆಯೋಗದ ಸದಸ್ಯರು, ವಿದ್ಯುತ್ತೇ ಇಲ್ಲದಿರುವ, ಸ್ಮಾರ್ಟ್‌ಫೋನ್‌ ಕೊಳ್ಳಲು ಆರ್ಥಿಕ ಸಾಮರ್ಥ್ಯವಿಲ್ಲದ, ಅದರಲ್ಲೂ ಮೂರು ತಿಂಗಳಿನಿಂದ ಪೌಷ್ಟಿಕ ಆಹಾರದ ಕಿಟ್‌ ಕೂಡ ಸಿಗದ ಹಾಡಿಗಳಲ್ಲಿ ಫೋನ್‌, ಕಂಪ್ಯೂಟರ್‌ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತದೆ ಎಂಬುದು ದೂರದ ಮಾತು. ಪೋಷಕರ ಆರ್ಥಿಕ ಮುಗ್ಗಟ್ಟು, ಅಸಹಾಯಕತೆಯು ಮಕ್ಕಳ ಮನೋವ್ಯಾಕುಲತೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಗ್ರಾಮೀಣ ಪ್ರದೇಶದ 3 ಲಕ್ಷಕ್ಕೂ ಹೆಚ್ಚಿನ ಮಕ್ಕಳು, ಆದಿವಾಸಿ ಹಾಡಿಗಳ 14 ಸಾವಿರ ವಿದ್ಯಾರ್ಥಿಗಳ ಬಳಿ ಆನ್‌ಲೈನ್‌ ಶಿಕ್ಷಣಕ್ಕೆ ಪೂರಕವಾಗಿ ಬೇಕಿರುವ ಸ್ಮಾರ್ಟ್‌ಫೋನ್‌ ಇಲ್ಲ. ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ನೆಟ್‌ವರ್ಕ್‌ ಸಿಗುವುದಿಲ್ಲ. ಇದು ಆನ್‌ಲೈನ್‌ ಶಿಕ್ಷಣಕ್ಕೆ ಪ್ರಮುಖ ಅಡ್ಡಿಯಾಗಲಿದೆ’ ಎಂದು ಆಯೋಗದ ಸದಸ್ಯ ಎಂ.ಎಲ್.ಪರಶುರಾಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು