ಬುಧವಾರ, ಮಾರ್ಚ್ 29, 2023
30 °C
ಲಾಕ್‌ಡೌನ್‌ ತೆರವು; ಪ್ರವಾಸಿ ಸ್ಥಳಗಳಿಗೆ ಪ್ರವೇಶಾವಕಾಶ

ಇಂದಿನಿಂದ ಎಲ್ಲವೂ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಸೋಮವಾರ ದಿಂದ ಲಾಕ್‌ಡೌನ್‌ ತೆರವಾಗಲಿದ್ದು, ಎಲ್ಲ ಬಗೆಯ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಕಳೆದ ಎರಡು ತಿಂಗಳಿಂದ ಬಾಗಿಲು ತೆರೆಯದೇ ಇದ್ದ ಜವಳಿ ಅಂಗಡಿ, ಆಭರಣ ಅಂಗಡಿಗಳು ವ್ಯಾಪಾರ ವಹಿವಾಟುಗಳನ್ನು ಇಂದು ಆರಂಭಿಸಲಿವೆ. ಜತೆಗೆ, ಅರಮನೆ ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿಬೆಟ್ಟ, ನಂಜನಗೂಡು ದೇವಸ್ಥಾನಗಳಿಗೂ ಪ್ರವೇಶ ಲಭಿಸಲಿದೆ.

ಇದುವರೆಗೂ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರವೇ ವಹಿವಾಟು ನಡೆಸಲು ಅನುಮತಿ ನೀಡಲಾಗಿದ್ದ ದಿನಸಿ ಅಂಗಡಿಗಳೂ ಸಹ ರಾತ್ರಿ 9ರವರೆಗೆ ತೆರೆದಿರಲಿವೆ. ಇದರಿಂದ ಸಹಜವಾಗಿಯೇ ನಗರದಲ್ಲಿ ವ್ಯಾಪಾರ ವಹಿವಾಟು ಕಳೆಗಟ್ಟುವ ನಿರೀಕ್ಷೆ ಇದೆ.

ಮುಖ್ಯವಾಗಿ ಇದುವರೆಗೂ ಬಿಕೋ ಎನ್ನುತ್ತಿದ್ದ ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಸಯ್ಯಾಜಿರಾವ್‌ ರಸ್ತೆಗಳಲ್ಲಿ ಮತ್ತೆ ವ್ಯಾಪಾರ ವಹಿವಾಟು ಗರಿಗೆದರಲಿದೆ. ಇದಕ್ಕಾಗಿ ಅಂಗಡಿ ಮಾಲೀಕರು ಭಾನುವಾರವೇ ಭರದ ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು.

ಹೋಟೆಲ್‌ನಲ್ಲಿ ಕುಳಿತು ತಿನ್ನುವುದಕ್ಕೆ ಅವಕಾಶ ದೊರೆತಿರುವುದು ಹೋಟೆಲ್ ಮಾಲೀಕರ ಹಾಗೂ ಭೋಜನಪ್ರಿಯರಿಗೆ ಖುಷಿ ತರಿಸಿದೆ. ಹೋಟೆಲ್‌ನಲ್ಲಿರುವ ಕುರ್ಚಿ, ಟೇಬಲ್‌, ಗಾಜುಗಳನ್ನು ಹಲವು ಮಾಲೀಕರು ಸ್ವಚ್ಛಗೊಳಿಸಿ, ರುಚಿಕರ ತಿನಿಸುಗಳನ್ನು ನೀಡಲು ಅಣಿಯಾಗಿದ್ದಾರೆ.

ವಹಿವಾಟು ಆರಂಭಿಸಲಿರುವ ಮಾಲ್‌ಗಳು: ನಗರದ ಮಾಲ್‌ಗಳೂ ತಮ್ಮ ವಹಿವಾಟು ಆರಂಭಿಸಲಿವೆ. ಇಲ್ಲಿನ ಫೋರಂ ಮಾಲ್, ಗರುಡಾ ಮಾಲ್, ಸೆಂಟ್ರಲ್ ಮಾಲ್, ಮಾಲ್‌ ಆಫ್‌ ಮೈಸೂರು ಸೇರಿದಂತೆ ಇನ್ನಿತರ ಬೃಹತ್ ಬಜಾರ್‌ಗಳಲ್ಲಿ ಭರದ ಸಿದ್ಧತೆಗಳು ನಡೆದಿವೆ.

300ಕ್ಕೂ ಅಧಿಕ ಬಸ್‌ ಸಂಚಾರಕ್ಕೆ ಸಿದ್ಧತೆ: ಇಲ್ಲಿನ ಕೆಎಸ್‌ಆರ್‌ಟಿಸಿ ನಗರ ಘಟಕವು 300 ಬಸ್‌ಗಳ ಸಂಚಾರಕ್ಕೆ ಸಿದ್ಧತೆ ಕೈಗೊಂಡಿದೆ. ಇದುವರೆಗೂ ಕೇವಲ 100ರಿಂದ 120 ಬಸ್‌ಗಳಷ್ಟೇ ಸಂಚರಿಸುತ್ತಿದ್ದವು.

‘ಲಾಕ್‌ಡೌನ್‌ ತೆರವಾಗಿರುವುದ ರಿಂದ ಸಹಜವಾಗಿಯೇ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆಯಲ್ಲೂ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ, ಹೆಚ್ಚುವರಿಯಾಗಿ 300 ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸಲಾಗುವುದು’ ಎಂದು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ಲಾಕ್‌ಡೌನ್‌ ಮುಂಚೆ ನಿತ್ಯ 375 ಬಸ್‌ಗಳು ಸಂಚರಿಸುತ್ತಿದ್ದವು.

ಕೆಎಸ್‌ಆರ್‌ಟಿಸಿ ಗ್ರಾಮಾಂತರ ಘಟಕದ ವತಿಯಿಂದಲೂ 300ಕ್ಕೂ ಅಧಿಕ ಬಸ್‌ಗಳ ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ.

‘ಇದುವರೆಗೂ 200 ಬಸ್‌ಗಳಷ್ಟೇ ಹೊರಡುತ್ತಿದ್ದವು. ಲಾಕ್‌ಡೌನ್ ಸಡಿಲಿಕೆ ಯಾಗಿರುವುದರಿಂದ ಹೆಚ್ಚುವರಿಯಾಗಿ 300ಕ್ಕೂ ಅಧಿಕ ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸಲಾಗುವುದು. ಮಡಿಕೇರಿಯಲ್ಲಿ ನಿರ್ಬಂಧ ಮುಂದುವ ರಿದಿರುವುದರಿಂದ ಲಾಕ್‌ಡೌನ್‌ಗೂ ಮುಂಚಿತವಾಗಿ ನಿತ್ಯ ಸಂಚರಿಸುತ್ತಿದ್ದ 530ರ ಗುರಿ ತಲುಪುವುದು ಸ್ವಲ್ಪ ಕಷ್ಟವಾಗುತ್ತದೆ’ ಎಂದು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ‘ಪ‍್ರಜಾವಾಣಿ’ಗೆ ತಿಳಿಸಿದರು.

ಗ್ರಂಥಾಲಯಗಳು ಆರಂಭ ನಾಳೆ

ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ವ್ಯಾಪ‍್ತಿಯ ಎಲ್ಲ ಗ್ರಂಥಾಲಯಗಳಿಗೆ ಜುಲೈ 6ರಂದು ಓದುಗರಿಗೆ ಪ್ರವೇಶ ದೊರಕಿಸಿಕೊಡಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು