ಸೋಮವಾರ, ಆಗಸ್ಟ್ 10, 2020
22 °C
ಸೌಲಭ್ಯ ನಿರಾಕರಣೆ ಆರೋಪ; ಗುತ್ತಿಗೆ ಸಿಬ್ಬಂದಿಯಾಗಿ ಪರಿಗಣಿಸಲು ಆಗ್ರಹ

ಪ್ರತಿಭಟನೆ: ಈಗ ಟ್ರೈನಿ ಸ್ಟಾಫ್‌ ನರ್ಸ್‌ ಸರದಿ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಗುತ್ತಿಗೆ ಸಿಬ್ಬಂದಿಯನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಕೆ.ಆರ್. ಆಸ್ಪತ್ರೆಯ ಟ್ರೈನಿ ಸ್ಟಾಫ್‌ ನರ್ಸ್‌ಗಳು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

150 ಮಂದಿ ಟ್ರೈನಿ ಸ್ಟಾಫ್‌ ನರ್ಸ್‌ಗಳು 2009ರಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಿನಿಂದಲೂ ಅವರಿಗೆ ಶಿಷ್ಯವೇತನವಾಗಿ ₹10 ಸಾವಿರವಷ್ಟೇ ಸಿಗುತ್ತಿದೆ. ಇದರೊಂದಿಗೆ, ಸಿಗಬೇಕಾದ ಹಲವು ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂಬುದು ಅವರ ದೂರು.

‘ಶಂಕಿತ ಕೋವಿಡ್‌ ಸೋಂಕಿತರ ಆರೈಕೆಯ ನಂತರ ನಮಗೆ ಕ್ವಾರಂಟೈನ್‌ ಸೌಲಭ್ಯವನ್ನೂ ನೀಡುತ್ತಿಲ್ಲ. ಕಾಯಂ ಶುಶ್ರೂಷಕರಿಗಿಂತ ಹೆಚ್ಚಾಗಿ ನಮ್ಮನ್ನೇ ಈ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಶಂಕಿತರ ಪೈಕಿ 10ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು, ನಾವೆಲ್ಲ ಆತಂಕದಲ್ಲೇ ಕೆಲಸ ನಿರ್ವಹಿಸುತ್ತಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಟ್ರೈನಿ ಸ್ಟಾಫ್‌ ನರ್ಸ್‌ವೊಬ್ಬರು ತಿಳಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ, ಸಾರಿಗೆ ವ್ಯವಸ್ಥೆಯಾಗದೇ ಕರ್ತವ್ಯಕ್ಕೆ ಗೈರಾದವರಿಗೆ ಆ ದಿನದ ವೇತನ ನೀಡಿಲ್ಲ. ವಿಮೆ ಸೇರಿದಂತೆ ಯಾವುದೇ ಬಗೆಯ ಸೌಲಭ್ಯಗಳನ್ನೂ ನೀಡಿಲ್ಲ ಎಂದು ದೂರಿದರು.

‘ಶಿಷ್ಯವೇತನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು ಗುತ್ತಿಗೆ ಸಿಬ್ಬಂದಿಯಾಗಿ ಪರಿವರ್ತನೆ ಮಾಡಿ, ಸರ್ಕಾರದ ಆದೇಶದಂತೆ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದೇವೆ. ಆದರೆ, ಆಸ್ಪತ್ರೆಯ ಡೀನ್‌ ಸ್ಪಂದಿಸುತ್ತಿಲ್ಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಆದೇಶ ಜಾರಿಗೊಳಿಸಿ ₹33 ಸಾವಿರ ವೇತನ ನೀಡುತ್ತಿದ್ದಾರೆ’ ಎಂದು ಮತ್ತೊಬ್ಬ ಶುಶ್ರೂಷಕರು ತಿಳಿಸಿದರು.

‘ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರನ್ನು ಕೆಲಸದಿಂದ ವಜಾ ಮಾಡುತ್ತಾರೆ. ನರ್ಸಿಂಗ್ ಶಿಕ್ಷಣ ಮುಗಿಸಿ 7 ವರ್ಷ ಕಳೆದರೂ ₹10 ಸಾವಿರಕ್ಕೆ ನಾವು ಕೆಲಸ ಮಾಡಬೇಕಾಗಿದೆ’ ಎಂದು ಮತ್ತೊಬ್ಬರು ಅಲವತ್ತುಕೊಂಡರು.

ಈ ಆರೋಪವನ್ನು ಅಲ್ಲಗಳೆದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡೀನ್‌ ನಂಜರಾಜ್‌, ‘ಶಿಷ್ಯವೇತನ ಆಧಾರದ ಮೇಲೆ ದುಡಿಯುತ್ತಿರುವವರನ್ನು ಗುತ್ತಿಗೆ ಆಧಾರದ ಶುಶ್ರೂಷಕರನ್ನಾಗಿ ಪರಿಗಣಿಸಲು ಸರ್ಕಾರ ನಮಗೆ ಅನುಮತಿ ನೀಡಿಲ್ಲ. ಇವರಿಗೆ ಕೋವಿಡ್ ಕರ್ತವ್ಯ ಕಡ್ಡಾಯ ಎಂದೂ ಹೇಳಿಲ್ಲ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.