ಸೋಮವಾರ, ಜನವರಿ 18, 2021
20 °C
‘ಒಡಲ ದನಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಹೇಶ್ಚಂದ್ರಗುರು ಹೇಳಿಕೆ

ಋಷಿ ಸಂಸ್ಕೃತಿ ಬೇಡ; ಕೃಷಿ ಸಂಸ್ಕೃತಿ ಇರಲಿ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಶಭಕ್ತರು, ಶ್ರಮಿಕರು ಅರಳಿರುವುದು ಕೃಷಿ ಸಂಸ್ಕೃತಿಯಲ್ಲಿ. ಈ ಸಂಸ್ಕೃತಿಯೇ ಶ್ರೇಷ್ಠ. ಇದರಿಂದಲೇ ಮಹಾನಾಯಕರು, ಚಿಂತಕರು ಸೃಷ್ಟಿಯಾಗಿದ್ದಾರೆ. ಆದರೆ, ಋಷಿ ಸಂಸ್ಕೃತಿಯಲ್ಲಿ ತಮ್ಮ ಲಾಭಕ್ಕಾಗಿ ವೇದ, ಪುರಾಣ, ಮೌಢ್ಯಗಳನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಂಕುಬೂದಿ ಎರಚಲಾ ಗುತ್ತಿದೆ, ಸಮಾಜ, ದೇಶ ವಿಭಜನೆ ಮಾಡಲಾಗುತ್ತಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಿ.ಪಿ.ಮಹೇಶ್ಚಂದ್ರ ಗುರು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಂದು ಸಾಹೇಬ ಬರೆದಿರುವ ‘ಒಡಲ ದನಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಮ್ಮಲ್ಲಿ ಬಹಳಷ್ಟು ಮಂದಿಗೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದಿದ್ದರೆ, ಬುದ್ಧ, ಬಸವ, ಅಂಬೇಡ್ಕರ್‌, ಲೋಹಿಯಾ ಪ್ರಜ್ಞೆ ಇದ್ದಿದ್ದರೆ ಮನು ವಾದಿಗಳಿಗೆ ನಮ್ಮ ದೇಶ ಆಳುವ ಅವಕಾಶ ಕೊಡುತ್ತಿರಲಿಲ್ಲ’ ಎಂದು ಹೇಳಿದರು.

ದೇವರಾಟ ನಡೆಯಲ್ಲ: ‘ಕೋವಿಡ್‌–19 ಬಂದಾಗ ಜನರನ್ನು ಬದುಕಿಸಿದ್ದು ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು. ಇವರೇ 33 ಕೋಟಿ ದೇವಾನುದೇವತೆಗಳು. ತಾವು ನಂಬಿರುವ ಸುಳ್ಳು ದೇವರು ಅಲ್ಲ. ದೇವರಾಟ ಭೂಮಿ ಮೇಲೆ ಇಲ್ಲವೇಇಲ್ಲ ಎಂಬುದನ್ನು ಈ ವೈರಾಣು ತೋರಿಸಿಕೊಟ್ಟಿತು. ದೇಗುಲಗಳು ಬಂದ್‌ ಆಗಿ, ಪೂಜಾರಿಗಳ ಆಟ ನಿಂತು ಹೋಯಿತು. ಸುಲಿಗೆ, ಶೋಷಣೆಗೆ ತಡೆ‌ ಬಿತ್ತು. ಮೆರೆದವರ ಆಟ ನಡೆಯಲ್ಲ ಎಂಬುದನ್ನು ಪ್ರಕೃತಿ ತೋರಿಸಿಕೊಟ್ಟಿದೆ’ ಎಂದರು.

ಮೋದಿ ಯುಗಾಂತ್ಯ ಆರಂಭ: ‘ಬಿಹಾರ ಚುನಾವಣೆಯಲ್ಲಿ ಮಹಾಘಟ ಬಂಧನ್‌ ಸೋತು ಹೋಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ನನ್ನ ಪ್ರಕಾರ ಮೋದಿ ಯುಗಾಂತ್ಯದ ಆರಂಭವಾಗಿದೆ ಎಂಬುದು ಈ ಚುನಾವಣೆ ಮೂಲಕ ಸಾಬೀತಾಗಿದೆ. ಬೇರೆ ಬೇರೆ ಕಾರಣಗಳಿಂದ ಅವರು ಈಗ ಗೆದ್ದಿರಬಹುದು. ಅದಕ್ಕೆ ಓವೈಸಿ ಅವರಂಥ ಬಿಜೆಪಿ ಚೇಲಾ, ಚಿರಾಗ್‌ ಪಾಸ್ವಾನ್‌ ಅವರಂಥ ಅಂಬೇಡ್ಕರ್‌ ದ್ರೋಹಿ ಕಾರಣ. ಇಲ್ಲದಿದ್ದರೆ 30 ಸೀಟು ಹೆಚ್ಚು ಗೆದ್ದು ಮಹಾಘಟಬಂಧನ್‌ ಅಧಿಕಾರಕ್ಕೆ ಬರುತ್ತಿತ್ತು. ಈಗ ಎಲ್ಲಿದ್ದಾರೆ ಪಾಸ್ವಾನ್‌? ಉತ್ತರದ ಪಾಸ್ವಾನ್‌ ಆಟವೂ ಇಲ್ಲ; ದಕ್ಷಿಣದ ಇವರಾಟವೂ ಇಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಪತ್ರಕರ್ತ ಕೆ.ದೀಪಕ್‌ ಮಾತನಾಡಿ, ‘ದೇಶದಲ್ಲಿ ಈಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದಂತಾಗಿದೆ. ಆದರೆ, ಪ್ರತಿಭಟಿಸುವ ಹಕ್ಕನ್ನು ಕಳೆದು ಕೊಳ್ಳಬಾರದು. ದನಿ ಎತ್ತಿದಾಗ ಮಾತ್ರ ಬದುಕಿದ್ದೇವೆ ಎಂದರ್ಥ’ ಎಂದರು.

ಲೇಖಕ ಚಂದು ಸಾಹೇಬ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಸಂಶೋಧಕರ ಸಂಘದ ಅಧ್ಯಕ್ಷ ಎಸ್‌.ಮರಿದೇವಯ್ಯ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು