ಸೋಮವಾರ, ಸೆಪ್ಟೆಂಬರ್ 20, 2021
20 °C

ಸಿ.ಎಂ ಸ್ಥಾನದಿಂದ ಬಿಎಸ್‌ವೈ ಇಳಿಸಲು ಕಾರಣವೇನು: ಎಂ.ಲಕ್ಷ್ಮಣ್‌ ಪ್ರಶ್ನೆ

ಪ್ರಜಾವಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಲಿಂಗಾಯತ ಸಮುದಾಯದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಕೆಳಗಿಳಿಸಿದ್ದೀರಿ? ಅದರ ಹಿಂದಿನ ಕಾರಣವನ್ನು ಬಿಜೆಪಿ ನಾಯಕರು ಜನತೆಗೆ ತಿಳಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆಗ್ರಹಿಸಿದರು.

‘ಯಡಿಯೂರಪ್ಪ ವಿರುದ್ಧ 8ರಿಂದ 10 ಪ್ರಕರಣಗಳು ಕೋರ್ಟ್‌ನಲ್ಲಿವೆ. ಅವರ ಈ ಭ್ರಷ್ಟಾಚಾರದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದೇ ನಾವು ಭಾವಿಸಿದ್ದೇವೆ. 75 ವರ್ಷ ವಯಸ್ಸಾದ ಕಾರಣ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ ಎಂಬ ಕಾರಣವನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ 76 ವರ್ಷ ವಯಸ್ಸಾಗಿದ್ದದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ಅವರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಅವರನ್ನೇ ಕೆಳಗಿಳಿಸಿದ್ದು ಎಷ್ಟರ ಮಟ್ಟಿಗೆ ಸರಿ’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಪ್ರಶ್ನಿಸಿದರು.

‘12ನೇ ಶತಮಾನದಲ್ಲಿ ಮನುವಾದಿಗಳು ಬಸವಣ್ಣನವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಅದೇ ಮಾದರಿಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಕೆಲಸವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿ ವಿಫಲರಾಗಿದ್ದರು. ಅವರ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಅವರು ಈಗ ಮುಖ್ಯಮಂತ್ರಿಯಾಗಿದ್ದು, ಅವರಿಂದ ಜನಪರ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದರು.

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ 2 ವರ್ಷಗಳಲ್ಲಿ ₹30 ಸಾವಿರ ಕೋಟಿ ಲೂಟಿ ಹೊಡೆದಿದೆ. ₹2.20 ಲಕ್ಷ ಕೋಟಿ ಸಾಲ ಮಾಡಿದೆ. ಶೇ 20ರಷ್ಟು ಕಮಿಷನ್‌ ಕೊಡದೆ ಯಾವುದೇ ಕಡತ ವಿಲೇವಾರಿ ಆಗುತ್ತಿಲ್ಲ. ಗುತ್ತಿಗೆದಾರರಿಗೆ ಟೆಂಡರ್‌ ನೀಡುತ್ತಿಲ್ಲ. ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಕಮಿಷನ್‌ ಪಡೆಯಲಾಗುತ್ತಿದೆ’ ಎಂದು ಆರೋಪಿಸಿದರು.

‘ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ 27ರಷ್ಟು ಮೀಸಲಾತಿ ನೀಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ಕಣ್ಣೊರೆಸುವ ತಂತ್ರವಷ್ಟೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಿಲ್ಲ’ ಎಂದರು.

‘ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಆದರೆ, ವಿಐಪಿಗಳಿಗೆ ಅವಕಾಶ ನೀಡಲಾಗುತ್ತಿದೆ. ಹರಕೆ ಹೊತ್ತ ಭಕ್ತರಿಗೆ ಇದರಿಂದ ತೊಂದರೆ ಆಗುತ್ತಿದೆ’ ಎಂದು ಹೇಳಿದರು.

***

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಶಾಡೋ ಸಿಎಂ. ಯಡಿಯೂರಪ್ಪ ಹೇಳಿದಂತೆ ಅವರು ಕೇಳುತ್ತಿದ್ದಾರೆ.
–ಎಂ.ಲಕ್ಷ್ಮಣ್‌, ಕೆಪಿಸಿಸಿ ವಕ್ತಾರ

***

ಬಿ.ಎಸ್‌.ಯಡಿಯೂರಪ್ಪ ಅವರ ಭ್ರಷ್ಟಾಚಾರದ ಮುಖವಾಣಿಯಾಗಿ ಬಸವರಾಜ ಬೊಮ್ಮಾಯಿ ಕೆಲಸ ಮಾಡುವ ಸಾಧ್ಯತೆ ಇದೆ.
–ಮಂಜುಳಾ ಮಾನಸ, ಕೆಪಿಸಿಸಿ ವಕ್ತಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು