ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ತಡೆಗೆ ತೂಗು ಸೌರಬೇಲಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನ
Last Updated 10 ಜುಲೈ 2021, 3:57 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ರೈಲ್ವೆ ಹಳಿ ತಡೆಗೋಡೆ ಜೊತೆಗೆ ಸೌರಬೇಲಿ ಹಾಗೂ ತೂಗು ಸೌರಬೇಲಿ ಅಳವಡಿಸಲಾಗುತ್ತಿದೆ.

848 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನಲ್ಲಿ 150 ಗ್ರಾಮಗಳಿವೆ. ನಿತ್ಯ ವನ್ಯಜೀವಿಗಳ ಉಪಟಳ, ಬೆಳೆ ನಾಶ ಹಾಗೂ ಜೀವಹಾನಿಯಿಂದ ನಲುಗಿದ್ದು, ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.

ರೈಲ್ವೆ ಹಳಿ ತಡೆಗೋಡೆ: ’ವನ್ಯಜೀವಿಗಳು ಗ್ರಾಮಗಳಿಗೆ ಬರದಂತೆ ತಡೆಯಲು ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲು 2015–16ರಲ್ಲಿ ಯೋಜನೆ ರೂಪಿಸಲಾಗಿತ್ತು. ಅರಣ್ಯದಂಚಿನ 152 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಕಿ.ಮೀ.ಗೆ ₹1.20 ಕೋಟಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈವರೆಗೆ 54 ಕಿ.ಮೀ ರೈಲ್ವೆ ಹಳಿ ತಡೆಗೋಡೆ ನಿರ್ಮಾಣಗೊಂಡಿದ್ದು, 3 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. 7 ಕಿ.ಮೀ ತಡೆಗೋಡೆ ಕಾಮಗಾರಿ ಟೆಂಡರ್‌ ಹಂತದಲ್ಲಿದೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತೂಗು ಸೌರಬೇಲಿ: ‘ಕೆಲ ಪುಂಡಾನೆಗಳು, ಪ್ರಾಣಿಗಳು ರೈಲ್ವೆ ಹಳಿ ತಡೆಗೋಡೆಗಳನ್ನೂ ದಾಟಿ ಬರುತ್ತಿದ್ದವು. ಅದಕ್ಕೆ ಕಡಿವಾಣ ಹಾಕಲು ಈ ತಡೆಗೋಡೆಗಳ ನಡುವೆ ಸೌರಬೇಲಿಗಳನ್ನು ಅಳವಡಿಸಲಾಗಿದೆ. ಜೊತೆಗೆ, ‘ಡಬಲ್ ಟೆಂಟಿಕಲ್ ಸೋಲಾರ್ ಲೈನ್’ (ತೂಗು ಸೌರಬೇಲಿ) ನಿರ್ಮಾಣವೂ ನಡೆದಿದೆ. ಈವರೆಗೆ 24 ಕಿ.ಮೀ ತೂಗು ಸೌರಬೇಲಿ ಹಾಕಲಾಗಿದೆ. 22 ಕಿ.ಮೀ ತೂಗು ಸೌರಬೇಲಿ ಅಳವಡಿಸಲು ಟೆಂಡರ್ ಕರೆಯಬೇಕಿದೆ’ ಎಂದರು.

ಪರಿಹಾರ: ಕಾಡಾನೆ ಹಾವಳಿಗೆ 2020–21ನೇ ಸಾಲಿನಲ್ಲಿ 1,011 ರೈತರು ಫಸಲು ಕಳೆದುಕೊಂಡಿದ್ದರು. ಪ್ರಸಕ್ತ ಸಾಲಿನಲ್ಲಿ 594 ಪ್ರಕರಣಗಳು ದಾಖಲಾಗಿವೆ. ಕಾಡುಪ್ರಾಣಿಗಳ ದಾಳಿಗೆ 57 ಸಾಕುಪ್ರಾಣಿಗಳು ಮೃತಪಟ್ಟಿವೆ. ಮಾನವ– ಪ್ರಾಣಿ ಸಂಘರ್ಷದ 10 ಪ್ರಕರಣಗಳಲ್ಲಿ 6 ಮಂದಿ ಜೀವ ಕಳೆದುಕೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. 31 ಪ್ರಕರಣಗಳಲ್ಲಿ ಆಸ್ತಿ ನಷ್ಟವಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯು ಪರಿಹಾರದ ರೂಪದಲ್ಲಿ ಒಟ್ಟು ₹71.54 ಲಕ್ಷ ಪಾವತಿಸಿದೆ.

***

ರೈಲ್ವೆ ಹಳಿ ತಡೆಗೋಡೆ ಜೊತೆಗೆ ಸೌರಬೇಲಿ ಅಳವಡಿಕೆ ಒಳ್ಳೆಯ ಪ್ರಯತ್ನ. ಆದರೆ ಈ ಹಿಂದೆ ಅಳವಡಿಸಿದ್ದ ಸೌರಬೇಲಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ.

–ಹೊಸೂರು ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT