ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಸಖ್ಯಕ್ಕೆ ಬಂದ ಸಖಿಯರು

ಸಂಚಲನ ಮಹಿಳಾ ರಂಗ ತರಬೇತಿ ಶಿಬಿರ; ‘ರೂಪ ರೂಪಗಳನು ದಾಟಿ’ ನಾಟಕ ಪ್ರದರ್ಶನ ನಾಳೆ
Last Updated 15 ಫೆಬ್ರುವರಿ 2021, 4:30 IST
ಅಕ್ಷರ ಗಾತ್ರ

ಮೈಸೂರು: ರಂಗಭೂಮಿಯ ಸಖ್ಯವನ್ನು ಬಯಸಿ ಬಂದಿದ್ದ ವಿವಿಧ ವಯೋಮಾನದ ಮಹಿಳೆಯರಿಗೆ ಸಂಸಾರದ ಜಂಜಾಟ, ಕೆಲಸದ ಒತ್ತಡ, ಓದಿನ ಭಯ ಅದಾವುದೂ ಕಾಣಲಿಲ್ಲ. ಅವರ ಆಂತರ್ಯದಲ್ಲಿ ಗುಪ್ತಗಾಮಿನಿಯಂತಿದ್ದ ಪ್ರತಿಭೆ ಈಗ ಹೊರಜಗತ್ತಿಗೂ ತೆರೆದುಕೊಳ್ಳುವ ತವಕದಲ್ಲಿತ್ತು. 48 ದಿನಗಳಿಂದ ಕಲಿತ ಅಭಿನಯವನ್ನು ವೇದಿಕೆ ಮೇಲೆ ಸಾದರಪಡಿಸುವ ಉಮೇದು ಅವರಲ್ಲಿ ಕಂಡುಬಂತು.

ಇಂಥ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿದ್ದು, ಮೈಸೂರಿನ ‘ಸಂಚಲನ’ ಸಂಸ್ಥೆ. ಮಹಿಳೆಯರಿಗಾಗಿಯೇ ನಡೆದ ಈ ರಂಗ ತರಬೇತಿ ಶಿಬಿರದಲ್ಲಿ 25 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. 15 ವರ್ಷದಿಂದ ಹಿಡಿದು 60 ವರ್ಷದ ವಯಸ್ಸಿನ ಮಹಿಳೆಯರು ಭಾಗವಹಿಸಿದ್ದು, ಎಲ್ಲರೂ ಗೆಳತಿಯರಾಗಿ ನಟನೆ, ರಂಗಗೀತೆ, ಕಂಸಾಳೆ, ಮಾರ್ಷಲ್‌ ಆರ್ಟ್ಸ್‌ ಸೇರಿದಂತೆ ಅನೇಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದು, ಬೇಲೂರು ರಘುನಂದನ್‌ ರಚನೆಯ, ದೀಪಕ್‌ ಮೈಸೂರು ನಿರ್ದೇಶನದ ‘ರೂಪ ರೂಪಗಳನು ದಾಟಿ’ ನಾಟಕದ ತಾಲೀಮಿನಲ್ಲಿ ತೊಡಗಿದ್ದಾರೆ.

ಕಲಾಮಂದಿರ ಆವರಣದ ಕಿರುರಂಗಮಂದಿರದ ಬಳಿ ಇರುವ ತಾಲೀಮು ಕೊಠಡಿಯಲ್ಲಿ , ನಾಟಕ ಅಭ್ಯಾಸ ಮಾಡುತ್ತಿದ್ದ ಆ ಹೆಣ್ಣು ಮಕ್ಕಳಲ್ಲಿ ವೇದಿಕೆಯ ಭಯ ಕಾಣಲಿಲ್ಲ. ಪಾತ್ರವೇ ತಾವಾಗಿ ಅಭಿನಯಿಸುತ್ತಿದ್ದ ಅವರಿಗೆ, ನಿರ್ದೇಶಕ ದೀಪಕ್‌ ಕೂಡ ಅಷ್ಟೇ ಆಸ್ಥೆಯಿಂದ ತರಬೇತಿ ನೀಡುತ್ತಿದ್ದರು.

ವಿಜಯಶ್ರೀಪುರ ಕೋ–ಆಪರೇಟಿವ್‌ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕಿಯಾಗಿ ನಿವೃತ್ತಿಯಾಗಿರುವ ಉಮಾ ಚಂದ್ರಶೇಖರ್‌ ಅವರಿಗೆ 60 ವರ್ಷ ವಯಸ್ಸು. ಶಿಬಿರಾರ್ಥಿಗಳಲ್ಲೇ ಹಿರಿಯರು. ನಾಟಕದಲ್ಲಿ ಸುಂದ್ರಜ್ಜಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

‘ನಟನೆ ಬಗ್ಗೆ ಆಸಕ್ತಿ ಇತ್ತು. ಅದರೆ, ಕೆಲಸದ ಒತ್ತಡದಿಂದ ರಂಗಭೂಮಿ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ವಯಸ್ಸಿನ ಮಿತಿ ಇಲ್ಲದೆ ಅನೇಕ ಕಲೆಗಳನ್ನು ಕಲಿಯಲು ಈ ಶಿಬಿರ ಅವಕಾಶ ಒದಗಿಸಿದೆ. ಜೀವಮಾನದ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ತೃಪ್ತಿ ಇದೆ’ ಎಂದು ‘ಸುಂದ್ರಜ್ಜಿ’ ಪುಳಕಗೊಂಡರು.

ಮರಿಮಲ್ಲಪ್ಪ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯಶಾ ಹಾಗೂ ತಾಯಿ ವಿಜಯಲಕ್ಷ್ಮಿ ಇಬ್ಬರೂ ಶಿಬಿರಾರ್ಥಿಗಳು. ವೃತ್ತಿಯಲ್ಲಿ ಟೈಲರ್‌ ಆಗಿರುವ ವಿಜಯಲಕ್ಷ್ಮಿ ಅವರಿಗೆ ರಂಗಭೂಮಿ ಬಗ್ಗೆ ಸೆಳೆತ. ಈ ಶಿಬಿರಕ್ಕೆ ಬಂದ ಬಳಿಕ ಮಗಳನ್ನೂ ಕರೆತರುವ ಇರಾದೆ. ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ಊಟ ಮಾಡುವುದು, ಮಲಗುವುದು ಬಿಟ್ಟರೆ ಬೇರೇನೂ ಮಾಡದ ಮಗಳು ಆರಂಭದಲ್ಲಿ ಒಲ್ಲೆ ಎಂದಿದ್ದಳು. ಕೊನೆಗೂ ಶಿಬಿರಕ್ಕೆ ದಾಖಲಾದ ಬಳಿಕ ಆಕೆಯ ವ್ಯಕ್ತಿತ್ವದಲ್ಲೇ ಮಾರ್ಪಾಡು ಕಂಡುಬಂದಿದೆ ಎಂಬ ಹೆಮ್ಮೆ ತಾಯಿಗಾದರೆ; ‘ನಾನು ತುಂಬಾ ಸೋಂಬೇರಿ. ಬೆಳಿಗ್ಗೆ 8 ಗಂಟೆಗೆ ಏಳುತ್ತಿದ್ದೆ. ಈಗ ಶಿಸ್ತನ್ನು ಮೈಗೂಡಿಸಿಕೊಂಡಿದ್ದೇನೆ. ತರಗತಿಯಲ್ಲೂ ಧೈರ್ಯವಾಗಿ ಮಾತನಾಡುತ್ತಿದ್ದೇನೆ’ ಎಂದು ಮಗಳು ಯಶಾ ಬೀಗುತ್ತಾಳೆ.

ಕೋವಿಡ್‌ ನಂತರ ಬಿಡುವು ಪಡೆದಿರುವ ಉಪನ್ಯಾಸಕಿ ರಶ್ಮಿ, ‘ಕೊರೊನಾ ಸಂಕಷ್ಟದಿಂದ ಹೊರಬರಲು ಶಿಬಿರ ಸಹಕಾರಿಯಾಗಿದೆ. ಮನೋಬಲವನ್ನು ತುಂಬಿದೆ. ನಮ್ಮಲ್ಲಿನ ಶಕ್ತಿ–ಸಾಮರ್ಥ್ಯವನ್ನು ಒರೆಗೆ ಹಚ್ಚಲು ವೇದಿಕೆ ಒದಗಿಸಿದೆ’ ಎನ್ನುತ್ತಾರೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಎನ್‌.ಬೆಳ್ತೂರು ಗ್ರಾಮದ ಬಿ.ಸಿ.ಸುಚಿತ್ರಾ, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿ. 5ನೇ ತರಗತಿಯಿಂದಲೂ ಹಾಡುಗಾರಿಕೆ, ಅಭಿನಯದಲ್ಲಿ ಆಸಕ್ತಿ. ಶಿಬಿರಕ್ಕೆ ಸೇರಿದ ಅವರೀಗ ಉತ್ಸಾಹದ ಬುಗ್ಗೆ.

‘ಸ್ತ್ರೀ ಪುರುಷ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ವಿವಿಧ ಕಲೆಗಳನ್ನು ಹೇಳಿಕೊಟ್ಟಿದ್ದಾರೆ. ಕಂಸಾಳೆ, ಮಾರ್ಷಲ್‌ ಆರ್ಟ್ಸ್‌, ರಂಗಗೀತೆ, ಧ್ವನಿ ಏರಿಳಿತ, ದೇಹದ ಹಾವಭಾವಗಳ ಬಗ್ಗೆ ತರಬೇತಿ ನೀಡಿದ್ದಾರೆ’ ಎಂದುಎಂ.ಎಸ್‌.ಕಾವ್ಯಾ ತಿಳಿಸಿದರು.

‘ದೈನಂದಿನ ಬದುಕಿನಲ್ಲಿ ಕಲಿಯದೇ ಇರುವಂತಹ ಕಲೆಗಳನ್ನು ಈ ಶಿಬಿರದಿಂದ ಕಲಿತಿದ್ದಾಗಿ ಶಿಕ್ಷಕಿ ಜಿ.ಆರ್‌.ಬೃಂದಾ ಸಂತಸ ವ್ಯಕ್ತಪಡಿಸಿದರು.

ಸಂವೇದಿತಾ ಸುಭಾಷ್‌, ಶ್ರೀಮಂತಿನಿ, ರಾಧಾ ನಾರಾಯಣಗೌಡ, ಎನ್‌.ಶ್ರುತಿ, ಜಿ.ಆರ್‌.ಶಾಲಿನಿ, ಎನ್‌.ಪಿ.ಹರಿಣಿ, ಎಸ್‌.ಎಸ್‌.ಶ್ರಾವ್ಯಾ, ವಿಸ್ಮಿತಾ, ಗಾಯತ್ರಿ ಶರ್ಮಾ, ಸುನಂದಾ, ಮನಸ್ವಿನಿ, ಡಿ.ಎಸ್‌.ತನ್ಮಯಿ ಶಿಬಿರಾರ್ಥಿಗಳು. ಶಿಬಿರದ ಸಹ ನಿರ್ದೇಶಕ ಸುಮುಖ ರಾವ್‌, ಸಂಯೋಜಕ ಬಿ.ಆರ್‌.ಕಿರಣ್‌.

ನಾಳೆ, 17ಕ್ಕೆ ನಾಟಕ ಪ್ರದರ್ಶನ

ಮಹಿಳಾ ರಂಗ ತರಬೇತಿ ಶಿಬಿರವು ಫೆ. 16ರಂದು ಸಮಾರೋಪಗೊಳ್ಳಲಿದ್ದು, ಅಂದು ಸಂಜೆ 6 ಗಂಟೆಗೆ ಈ ಕಲಾವಿದೆಯರು,ಕಿರುರಂಗಮಂದಿರದಲ್ಲಿ ‘ರೂಪ ರೂಪಗಳನು ದಾಟಿ’ ನಾಟಕ ಪ್ರಸ್ತುತಪಡಿಸಲಿದ್ದಾರೆ. ಫೆ.17ರಂದು ಸಂಜೆ 6 ಗಂಟೆಗೆ ಮರು ಪ್ರದರ್ಶನವಿದೆ.

ಸಂಗೀತ ಪ್ರವೀಣ್‌ ಬೆಳ್ಳಿ, ರಂಗಸಜ್ಜಿಕೆ ಎಸ್‌.ಶ್ರೀಕಾಂತ್‌, ಬೆಳಕು ಎಸ್‌.ಎಚ್‌.ಶ್ರೀಧರ್‌, ಪ್ರಸಾಧನ ಡಿ.ಅಶ್ವಥ್‌ ಕದಂಬ ಅವರದ್ದು.

****

ಶಿಬಿರದಿಂದ ಸಮಯಪಾಲನೆ, ಶ್ರದ್ಧೆ, ಬದ್ಧತೆ ಹಾಗೂ ಎಲ್ಲರನ್ನೂ ಪ್ರೀತಿಸುವ ಗುಣಗಳನ್ನು ಬೆಳೆಸಿಕೊಂಡಿದ್ದೇನೆ.

–ಉಷಾಲೇಖಾ, ಶಿಬಿರಾರ್ಥಿ

****

ನಮ್ಮ ಆಸಕ್ತಿಗೆ ಅನುಗುಣವಾಗಿ ಕಲೆಗಳನ್ನು ಹೇಳಿಕೊಟ್ಟಿದ್ದಾರೆ. ಎಲ್ಲರೊಂದಿಗೂ ಬೆರೆಯುವುದನ್ನು ಕಲಿತೆ.

–ಎಚ್‌.ಎಚ್‌.ಸುನೀತಾ, ಶಿಕ್ಷಕಿ, ಜೆ.ಪಿ.ನಗರದ ನಿವಾಸಿ

****

ಯಾವುದೇ ವಿಷಯವನ್ನು ಕೇಳಿಸಿಕೊಂಡು ಅರ್ಥೈಸಿ ಮಾತನಾಡುವಂತಹ ಸಾಮರ್ಥ್ಯ ಈಗ ವೃದ್ಧಿಯಾಗಿದೆ. ತಂಡವನ್ನು ಮುನ್ನಡೆಸುವ ಕೌಶಲ ಸಿದ್ಧಿಸಿದೆ.

–ಮಾನಸಾ, ಬೋಗಾದಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT