ಶುಕ್ರವಾರ, ಆಗಸ್ಟ್ 12, 2022
25 °C
ಹುಣಸೂರು ನಗರದ ಕುಶಲಕರ್ಮಿಗಳಿಗೂ ತಟ್ಟಿದ ಲಾಕ್‌ಡೌನ್‌ ಬಿಸಿ

ಹುಣಸೂರು: ಮರಗೆಲಸದವರ ಬದುಕು ಅತಂತ್ರ

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಮರದ ಪೀಠೋಪಕರಣಗಳನ್ನು ಮಾಡುವ ಕುಶಲಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಪೀಠೋಪಕರಣ ಸಿದ್ಧಪಡಿಸುವ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿ ಕೆಲಸ ಇಲ್ಲದೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ.

ಕೊರೊನಾ ಲಾಕ್‌ಡೌನ್ ಇವರ ಬದುಕನ್ನೇ ಹೈರಾಣು ಮಾಡಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಲಾಕ್‌ಡೌನ್‌ ಆಗಿ ತೊಂದರೆ ಅನುಭವಿಸಿದ್ದರು.

‘ಹುಣಸೂರು ನಗರದಲ್ಲಿ 100 ರಿಂದ 150 ಪೀಠೋಪಕರಣ ಸಿದ್ಧಪಡಿಸುವ ಮಳಿಗೆಗಳಿದ್ದು, ಇವುಗಳಲ್ಲಿ 250 ರಿಂದ 300 ಕುಶಲಕರ್ಮಿಗಳು ಜೀವನ ಕಟ್ಟಿಕೊಂಡಿದ್ದಾರೆ. ಕೋವಿಡ್‌ ಎರಡನೇ ಅಲೆ ತಡೆಗೆ ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಮಳಿಗೆಗಳು ಬಾಗಿಲು ಮುಚ್ಚಿ ವೃತ್ತಿ ನಂಬಿದವರ ಬದುಕು ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ’ ಎಂದು ಕೃಷ್ಣ ಫರ್ನಿಚರ್ಸ್ ಮಾಲೀಕ ಪುರುಷೋತ್ತಮ್ ಅಳಲು ತೋಡಿಕೊಂಡರು.

‘ನಮ್ಮ ಅಂಗಡಿಯಲ್ಲಿ ಎಂಟು ಮಂದಿ ಕಾಯಂ ನೌಕರರಿದ್ದು, ಈಗ ಅವರಿಗೆ ಕೆಲಸವಿಲ್ಲದಾಗಿದೆ. ಇವರ ಜೀವನ ನಿರ್ವಹಣೆ ಜವಾಬ್ದಾರಿ ನಮ್ಮ ಮೇಲಿದೆ. ತಿಂಗಳಿಗೆ ₹ 5 ರಿಂದ ₹ 6 ಸಾವಿರವನ್ನು ಯಾವುದೇ ವ್ಯವಹಾರ ಇಲ್ಲದಿದ್ದರೂ ಭರಿಸಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

‘ಲಾಕ್‌ಡೌನ್‌ಗೂ ಮುಂಚೆ ನಮಗೆ ತಿಂಗಳಿಗೆ ₹ 40 ರಿಂದ ₹ 50 ಸಾವಿರ ಆದಾಯವಿತ್ತು. ಮರದ ಪೀಠೋಪ
ಕರಣ ಮಾರಾಟವಾಗದೆ ದೂಳು ಹಿಡಿದು ಅಂಗಡಿಯಲ್ಲೇ ಉಳಿದಿದೆ. ಈ ನಷ್ಟ ಭರಿಸುವವರಾರು ಯಾರು’ ಎಂದು ಅವರು
ಪ್ರಶ್ನಿಸುತ್ತಾರೆ.

ನಗರದ ವಿಶ್ವಕರ್ಮ ಸಮುದಾಯದ ಶೇ 65 ರಷ್ಟು ಹಾಗೂ ಮುಸ್ಲಿಂ ಸಮುದಾಯದ ಶೇ 35 ರಷ್ಟು ಜನರಿಗೆ ಈ ವೃತ್ತಿಯೇ ಜೀವನಕ್ಕೆ
ಆಧಾರ.

‘ಮರದ ಕುಸುರಿ ಕೆಲಸದಲ್ಲಿ ನೈಪುಣ್ಯತೆ ಹೊಂದಿದ್ದು, ಐಷಾರಾಮಿ ಆಸನಗಳಿಗೆ ಆರ್ಟ್ ವರ್ಕ್ ಮಾಡಿ ನಿತ್ಯ ₹ 1 ಸಾವಿರ ದುಡಿಯುತ್ತಿದ್ದೆ. ಕಳೆದ ಒಂದು ತಿಂಗಳಿಂದ ಯಾವುದೇ ದುಡಿಮೆ ಇಲ್ಲವಾಗಿದೆ’ ಎಂದು ನಗರದ ರಿಯಾಜ್ ಫರ್ನಿಚರ್ ಅಂಗಡಿಯ ಇರ್ಫಾನ್‌ ಬೇಸರ ವ್ಯಕ್ತ‍ಪಡಿಸುತ್ತಾರೆ.

‘ಕೊರೊನಾ ಲಾಕ್‌ಡೌನ್‌ಗೂ ಮುನ್ನ ತಿಂಗಳಿಗೆ ₹ 20 ರಿಂದ ₹25 ಸಾವಿರ ಸಂಪಾದನೆ ಮಾಡುತ್ತಿದೆ. ಪೀಸ್ ವರ್ಕ್ ಕೆಲಸ ಮಾಡಿ ಹಣ ಗಳಿಸುತ್ತಿದ್ದೆ. ಈಗ ಕೆಲಸವೂ ಇಲ್ಲ, ಸಂಸಾರ ಸಾಗಿಸುವುದು ಕಷ್ಟವಾಗಿದೆ. ಸರ್ಕಾರ ಈಗಲಾದರೂ ವೃತ್ತಿಪರರಿಗೆ ಸಮರ್ಪ‍ಕ ಪರಿಹಾರ ಯೋಜನೆ ಘೋಷಿಸಲಿ’ ಎಂದು ಕುಶಲಕರ್ಮಿ ಅತೀಖ್ ಆಗ್ರಹಿಸುತ್ತಾರೆ.

‘ಮರಗೆಲಸದವರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು ಎಂದು ಸೂಚನೆ ಇದ್ದರೂ ಬಹಳಷ್ಟು ವೃತ್ತಿಪರರಿಗೆ ಕಾರ್ಡ್ ಇಲ್ಲದೆ ಸರ್ಕಾರದ ಯಾವುದೇ ಸೌಲಭ್ಯ ಕೈಸೇರುತ್ತಿಲ್ಲ. ಕೆಲವರಿಗೆ ಮಾತ್ರ ಉಪಯೋಗವಾಗಿದೆ’ ಎಂದು ರಿಯಾಜ್ ಫರ್ನಿಚರ್ಸ್‌ನ ಇರ್ಫಾನ್ ದೂರುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು