ಭಾನುವಾರ, ಸೆಪ್ಟೆಂಬರ್ 26, 2021
27 °C
ನಿಯಂತ್ರಣಕ್ಕೆ ಜಿಲ್ಲೆಯ ಅರಣ್ಯ ಇಲಾಖೆಯ ನಿರಂತರ ಪ್ರಯತ್ನ

ವಿಶ್ವ ಆನೆ ದಿನ: ನಿಲ್ಲದೇ ಆನೆ– ಮಾನವ ಸಂಘರ್ಷ?

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಆನೆ–ಮಾನವ ಸಂಘರ್ಷ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಸಂಪೂರ್ಣ ನಿಂತಿಲ್ಲ. ಪ್ರತಿ ತಿಂಗಳೂ ಆನೆಗಳು ಜಿಲ್ಲೆಯ ಹಲವು ಕಾಡಂಚಿನ ಗ್ರಾಮಗಳಿಗೆ ನುಗ್ಗಿ, ರೈತರ ಫಸಲನ್ನು ನಾಶ ಮಾಡುವ ಘಟನೆಗಳು ನಡೆಯುತ್ತಲೇ ಇವೆ.

ಹಿಂದಿನ ವರ್ಷ 2020–21ನೇ ಸಾಲಿನಲ್ಲಿ ಒಟ್ಟು 13 ಆನೆಗಳು ಜೀವ ಕಳೆದುಕೊಂಡಿದ್ದವು. ಪ್ರಸಕ್ತ ಸಾಲಿನಲ್ಲಿ 3 ಆನೆಗಳು ಮೃತಪಟ್ಟಿವೆ. ಮಾನವನಿಂದ ಆನೆಗಳ ಸಾವು ಸಂಭವಿಸುತ್ತಿರುವ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಅರಣ್ಯ ಇಲಾಖೆ ಅಂಕಿಅಂಶಗಳು ಹೇಳುತ್ತವೆ.

ಆದರೆ, ಆನೆಗಳು ಜನವಸತಿ ಪ್ರದೇಶಗಳತ್ತ ಹಾಗೂ ರೈತರ ಹೊಲಗಳತ್ತ ನುಗ್ಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿಲ್ಲ.

‘ಕಳೆದ ಸಾಲಿನಲ್ಲಿ ಇಂತಹ 1,173 ಪ್ರಕರಣಗಳು ನಾಗರಹೊಳೆ ಅರಣ್ಯದಂಚಿನಲ್ಲಿ ನಡೆದಿದ್ದವು. ಆನೆಗಳಿಂದ ಉಂಟಾದ ಬೆಳೆ ಹಾನಿಗೆ ₹ 73.86 ಲಕ್ಷ ಪರಿಹಾರ ನೀಡಲಾಯಿತು’ ಎಂದು ನಾಗರಹೊಳೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಗರಹೊಳೆ ವ್ಯಾಪ್ತಿಯಲ್ಲಿ ಒಟ್ಟು 250 ಕಿ.ಮೀನಷ್ಟು ಅರಣ್ಯಕ್ಕೆ ಹಲವು ಗ್ರಾಮಗಳು ಹೊಂದಿಕೊಂಡಂತಿವೆ. ಎಲ್ಲ ಕಡೆ ಆನೆ ಕಂದಕ ತೋಡಲಾಗಿದೆ. ಆದರೆ, ಕಂದಕ ದಾಟಿ ಆನೆ ಬರುವ ಪ್ರಕರಣಗಳು ಹೆಚ್ಚಾಗಿ ಸಂಭವಿಸಿದ 55 ಕಿ.ಮೀ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಲಾಗಿದೆ. 70 ಕಿ.ಮೀವರೆಗೆ ಸೋಲಾರ್ ಹ್ಯಾಂಗಿಂಗ್ ಫೆನ್ಸ್‌ಗಳನ್ನು ಹಾಕಲಾಗಿದೆ.

ಇಷ್ಟೆಲ್ಲ ಕ್ರಮಗಳ ಹೊರತಾಗಿಯೂ ಆನೆಗಳು ಇವುಗಳನ್ನೆಲ್ಲ ದಾಟಿ ಗ್ರಾಮಗಳತ್ತ ನುಗ್ಗುತ್ತಿರುವ ಉದಾಹರಣೆಗಳೂ ಇವೆ.

ಈಚೆಗೆ ನಡೆದ ಆನೆ ದಾಳಿ ಪ್ರಕರಣಗಳು: ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ, ಸರಗೂರು ತಾಲ್ಲೂಕಿನ ದೇವಲಾಪುರದ ಗ್ರಾಮಗಳ ಜಮೀನಿನ ಮೇಲೆ ತೀರಾ ಇತ್ತೀಚೆಗೆ ಆನೆಗಳು ದಾಳಿ ನಡೆಸಿದ್ದವು.

ಜುಲೈ ತಿಂಗಳಿನಲ್ಲಿ ಹುಣಸೂರು ತಾಲ್ಲೂಕಿನ ಹೊಸಪೆಂಜಹಳ್ಳಿ ಭಾಗದಲ್ಲಿ ರೈಲ್ವೆ ಹಳಿ ತಡೆಗೋಡೆ ದಾಟಿ ಆನೆಗಳು ರೈತರ ಫಸಲನ್ನು ನಾಶಗೊಳಿಸಿದ್ದವು.

ಜೂನ್‌ನಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಎಂ.ಹಳ್ಳಿ ಗ್ರಾಮದಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

ಮೇ ತಿಂಗಳಿನಲ್ಲಿ ಹುಣಸೂರು ತಾಲ್ಲೂಕಿನ ನೇರಳಕುಪ್ಪೆ ಗ್ರಾಮ, ಸರಗೂರು ತಾಲ್ಲೂಕಿನ ಕಲ್ಲಹಳ್ಳ ಗ್ರಾಮಗಳಲ್ಲಿ ಆನೆಗಳು ಬೆಳೆನಾಶ ಮಾಡಿದ್ದವು.ಮಾರ್ಚ್ ತಿಂಗಳಿನಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಬೆಮ್ಮತ್ತಿಕೊಪ್ಪಲು ಹಾಗೂ ತಿಮ್ಮನಹಳ್ಳಿ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು