ಬುಧವಾರ, ಜೂನ್ 29, 2022
24 °C
260 ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ರಂಗಾಯಣದ ನಿರ್ದೇಶಕ

ರಂಗಾಯಣ: ಮತ್ತಷ್ಟು ಹಸಿರೀಕರಣ

ಎನ್‌.ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಂಗಚಟುವಟಿಕೆಗಳ ಜೀವಸೆಲೆ ಹಾಗೂ ನೆಲೆಯಾದ ‘ರಂಗಾಯಣ’ದ ಆವರಣವನ್ನು ಮತ್ತಷ್ಟು ಹಸಿರೀಕರಣಗೊಳಿಸಲು ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮುಂದಾಗಿದ್ದಾರೆ. ಈಗಾಗಲೇ 260 ಗಿಡಗಳನ್ನು ರಂಗಾಯಣದ ಆವರಣದಲ್ಲಿ ನೆಡಲಾಗಿದೆ.

ರಂಗಾಯಣದ ಕಚೇರಿ ಎದುರಿನ ಜಾಗ, ರಂಗಸಜ್ಜಿಕೆ ಸಿದ್ಧಪಡಿಸುವ ಕಟ್ಟಡದ ಎದುರಿನ ಜಾಗ, ವನರಂಗದಲ್ಲಿ ಹಣ್ಣು, ಹೂವು ಹಾಗೂ ಆಲಂಕಾರಿಕ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ರಂಗಾಯಣದ ಚಿತ್ರಣವನ್ನೇ ಬದಲಾಯಿಸುವುದು ನಿರ್ದೇಶಕರ ಉದ್ದೇಶವಾಗಿದೆ.

‘ಮೈಸೂರು ನಗರ ಹಸಿರು ವಲಯಕ್ಕೆ ಸೇರುತ್ತದೆ. ಇಲ್ಲಿ ನಮ್ಮ ಕೊಡುಗೆಯೂ ಇರಲಿ ಎಂಬ ಉದ್ದೇಶದಿಂದ 500ಕ್ಕೂ ಹೆಚ್ಚಿನ ಗಿಡಗಳನ್ನು ತರಿಸಲಾಯಿತು. ಕೊಡಗಿನಿಂದ ಬೆಣ್ಣೆ ಹಣ್ಣು (ಬಟರ್‌ ಫ್ರೂಟ್‌), ಹಲಸು ಸೇರಿದಂತೆ ಕೆಲ ಹಣ್ಣಿನ ಗಿಡಗಳನ್ನು ತರಿಸಿದ್ದೇನೆ. ನೇರಳೆ, ಮಾವಿನ ಗಿಡಗಳನ್ನು ನೆಡಲಾಗಿದೆ. ಹೂವಿನ ಗಿಡಗಳ ಪೈಕಿ ಸಂಪಿಗೆ ಗಿಡಗಳು ಹೆಚ್ಚಾಗಿವೆ. ಇದರ ಜತೆಗೆ, ಎತ್ತರಕ್ಕೆ ಬೆಳೆಯುವ ಆಲಂಕಾರಿಕ ಗಿಡಗಳನ್ನೂ ನೆಡಲಾಗಿದೆ’ ಎಂದು ಅಡ್ಡಂಡ ಕಾರ್ಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘500 ಗಿಡಗಳ ಪೈಕಿ 240 ಗಿಡಗಳನ್ನು ಕಲಾಮಂದಿರ ಆವರಣದಲ್ಲಿ ನೆಡಲು ಕೊಟ್ಟಿದ್ದು, ಅಲ್ಲಿ ನಿರ್ವಹಣೆ ಸಮರ್ಪಕವಾಗಿಲ್ಲ. ರಂಗಾಯಣದಲ್ಲಿ ಒಂದು ಗಿಡವೂ ನಾಶವಾಗದಂತೆ ಜತನದಿಂದ ಕಾಪಿಟ್ಟುಕೊಳ್ಳಲಾಗಿದೆ. ರಂಗಾಯಣದ ಸಿಬ್ಬಂದಿ ಬ್ರಹ್ಮಲಿಂಗಪ್ಪ ಈ ಗಿಡಗಳ ಆರೈಕೆ ಮಾಡುತ್ತಾರೆ. ಅವರು ಅಂಗವಿಕಲರಾದರೂ, ಗಿಡಗಳನ್ನು ತಮ್ಮ ಮಕ್ಕಳಂತೆ ಪೋಷಿಸುತ್ತಿದ್ದಾರೆ. ಬೇಸಿಗೆಯಲ್ಲಿ ನೀರು ಹಾಕುವುದರಿಂದ ಹಿಡಿದು ಎಲ್ಲ ಕೆಲಸವನ್ನೂ ಅವರೇ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ವನರಂಗ’ ಎಂಬುದು ಬಿ.ವಿ.ಕಾರಂತರ ರಂಗ ವೇದಿಕೆಯ ಪರಿಕಲ್ಪನೆ. ಆದರೆ, ಇಡೀ ರಂಗಾಯಣವನ್ನೇ ‘ವನರಂಗ’ವಾಗಿ ಪರಿವರ್ತಿಸಬೇಕು ಎನ್ನುವುದು ನನ್ನ ಬಯಕೆ. ಹೀಗಾಗಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಗಿಡಗಳನ್ನು ನೆಡಲಾಗಿದೆ. ವನರಂಗದಲ್ಲಿ ಈ ಹಿಂದೆ ಒಂದೆರಡು ಗಿಡಗಳಿದ್ದವು. ಈಗ 20ಕ್ಕೂ ಹೆಚ್ಚಿನ ಗಿಡಗಳನ್ನು ನೆಡಲಾಗಿದೆ. ಅವು 10 ಅಡಿಗೂ ಎತ್ತರಕ್ಕೆ ಬೆಳೆದಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಸಯ್ಯಾಜಿರಾವ್‌ ರಸ್ತೆಯಲ್ಲಿರುವ ರಘುಲಾಲ್‌ ಅಂಡ್‌ ಕಂಪನಿಯ ಮಾಲೀಕರು ಈ ಗಿಡಗಳ ರಕ್ಷಣೆಗಾಗಿ ತಂತಿಬೇಲಿಗಳನ್ನು ನೀಡಿದ್ದಾರೆ ಎಂದರು.

ಈ ಕೋವಿಡ್‌ ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆ ಇದೆ. ಆದ್ದರಿಂದ, ಈಗಲಾದರೂ ಎಚ್ಚೆತ್ತು ನಮ್ಮ ಸುತ್ತಲಿನ ಪರಿಸರದಲ್ಲಿ ಪ್ರತಿಯೊಬ್ಬರೂ ಒಂದೆರಡು ಗಿಡಗಳನ್ನು ನೆಟ್ಟು ಪೋಷಿಸಬೇಕು ಎನ್ನುತ್ತಾರೆ ಅವರು.

ಇಂದು ಪರಿಸರ ದಿನ: ಆಚರಣೆ 7ಕ್ಕೆ
‘ಜೂನ್‌ 5ರಂದು ವಿಶ್ವ ಪರಿಸರ ದಿನ. ಆದರೆ, ಅಂದು ಲಾಕ್‌ಡೌನ್‌ ಇರುವುದರಿಂದ, 7ರಂದು ಬೆಳಿಗ್ಗೆ 9.30ಕ್ಕೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ರಂಗಾಯಣದ ಆವರಣದಲ್ಲಿ   ಆಯೋಜಿಸಲಾಗಿದೆ. ಇದರಲ್ಲಿ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಹಾಗೂ ರಘುಲಾಲ್‌ ಪಾಲ್ಗೊಳ್ಳಲಿದ್ದಾರೆ. ಕೋವಿಡ್‌ ನಿಯಮ ಅನುಸರಿಸಿ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮವನ್ನು ಮುಗಿಸುತ್ತೇವೆ’ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು