ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಶಾಸಕ ಎಚ್‌.ಡಿ.ರೇವಣ್ಣ ವ್ಯಂಗ್ಯ, ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಪ್ರಚಾರ, ಕಾಂಗ್ರೆಸ್‌ ವಿರುದ್ಧ ಆಕ್ರೋಶ

ಸೋಲಿನ ಭೀತಿ: ಪ್ರಚಾರಕ್ಕೆ ಬಾರದ ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಹುಣಸೂರು, ಕೆ.ಆರ್‌.ಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವ ಭೀತಿಯಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕೆ ಧುಮುಕಿಲ್ಲ ಎಂದು ಶಾಸಕ ಎಚ್‌.ಡಿ.ರೇವಣ್ಣ ವ್ಯಂಗ್ಯವಾಡಿದರು.

ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಈವರೆಗೂ ಮೈಸೂರು ಭಾಗದಲ್ಲಿ ಚುನಾವಣೆ ಪ್ರಚಾರ ಮಾಡಿಲ್ಲ. ಬೆಂಗಳೂರಿನಲ್ಲಿ ಗುತ್ತಿಗೆದಾರರು ನೀಡುವ ಕಮಿಷನ್ ವಸೂಲಿಗೆ ಕುಳಿತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹43 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಲಾಗಿದೆ. ಮೈತ್ರಿ ಸರ್ಕಾರವು ಇನ್ನೂ 6 ತಿಂಗಳು ಇದ್ದಿದ್ದರೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲವನ್ನೂ ಮನ್ನಾ ಮಾಡುತ್ತಿದ್ದೆವು. ಅಷ್ಟರೊಳಗೆ ‘ವಿಶ್ವನಾಥನ ವಿಶ್ವರೂಪ’ ದರ್ಶನವಾಗಿ ಸರ್ಕಾರ ಪತನವಾಯಿತು ಎಂದು ಕಿಡಿಕಾರಿದರು.

ವಿಶ್ವನಾಥ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಸಚಿವ ಸ್ಥಾನಕ್ಕಾಗಿ ಬಿಜೆಪಿ ಸೇರಿದ್ದು, ಈಗ ಹುಣಸೂರಿನಲ್ಲಿ ಸ್ಪರ್ಧಿಸಿದ್ದಾರೆ. ಅವರಿಗೆ ತಕ್ಕಪಾಠ ಕಲಿಸುವ ಕಾಲ ಪಕ್ವವಾಗಿದೆ. ಮತದಾರರು ಮತಪೆಟ್ಟಿಗೆ ಮೂಲಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.

ರಾಜಕೀಯವಾಗಿ ಅತಂತ್ರರಾಗಿದ್ದ ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆ ತಂದು ಶಾಸಕ ಸ್ಥಾನ ನೀಡಿ ರಕ್ಷಣೆ ನೀಡಲಾಯಿತು. ರಕ್ಷಣೆ ನೀಡಿದ ಪಕ್ಷಕ್ಕೆ ಮುಳ್ಳಾಗಿ ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣರಾದರು. ಗುಂಪು ಕಟ್ಟಿ ರಾಜೀನಾಮೆ ನೀಡಿ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದರು ಎಂದು ದೂರಿದರು.

ಕೆ.ಆರ್.ನಗರ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಜೆಡಿಎಸ್ ಸರ್ಕಾರ ಆರಂಭಿಸಿ ರೈತನಿಗೆ ಎಲ್ಲಾ ಶಕ್ತಿ ತುಂಬಿಸಿತ್ತು. ನಂತರ ಬಂದ ಸಿದ್ದರಾಮಯ್ಯ ಸರ್ಕಾರ ಈ ಎರಡೂ ಕಾರ್ಖಾನೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಕಾರ್ಖಾನೆಗಳನ್ನು ಮುಚಿಸಿ ರೈತನಿಗೆ ಅನ್ಯಾಯ ಮಾಡಿತು ಎಂದು ಆರೋಪಿಸಿದರು.

ಪ್ರಚಾರ ಕಾರ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್, ಚಿಕ್ಕಹುಣಸೂರು ಗೋವಿಂದೇಗೌಡ, ಎಚ್.ಬಿ.ಬಸವರಾಜು, ಶ್ರೀಧರ್, ಸ್ವಾಮಿಗೌಡ, ನಂಜೇಗೌಡ, ಪಾಪಣ್ಣ ಸೇರಿದಂತೆ ಇತರರಿದ್ದರು.

ಮಹಾ ಸುಳ್ಳುಗಾರ ಮಂಜುನಾಥ್‌’

‘ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳನ್ನು ನಾನೇ ತಂದು ಮಾಡಿಸಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಹೇಳಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹150 ಕೋಟಿ ಅನುದಾನ ನೀಡಲಾಗಿತ್ತು. ಈಗ ಅದರ ಕಾಮಗಾರಿಗಳು ನಡೆದಿವೆ. ಮಹಾ ಸುಳ್ಳುಗಾರ ಮಂಜುನಾಥ್ ಕಾಂಗ್ರೆಸ್ ಸರ್ಕಾರ ನೀಡಿದ ಅನುದಾನ ಎನ್ನುವುದಾದರೆ, ದಾಖಲೆ ನೀಡಲಿ’ ಎಂದು ಎಚ್‌.ಡಿ.ರೇವಣ್ಣ ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು