ಶನಿವಾರ, ಫೆಬ್ರವರಿ 27, 2021
28 °C
ಚಾಲನೆ ನೀಡಿದ ಸಾಧಕಿ ಸಿಂಧುಗೆ ಚಪ್ಪಾಳೆ ಸುರಿಮಳೆ; ಕಿಕ್ಕಿರಿದು ತುಂಬಿದ್ದ ಸಂಭಾಗಣ

ಯುವ ದಸರೆಯಲ್ಲಿ ಸಂಭ್ರಮದ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತುಂತುರು ಮಳೆಯಲ್ಲಿ ಬಣ್ಣದ ವಿದ್ಯುತ್‌ ದೀಪಗಳ ವಯ್ಯಾರ, ಗಾನಸುಧೆ, ನೃತ್ಯದ ಸೊಬಗು. ಮತ್ತೊಂದೆಡೆ ಕಿಕ್ಕಿರಿದು ತುಂಬಿದ್ದ ಸಂಭಾಗಣ...

ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಸ್ಫೂರ್ತಿಯ ಅಲೆ ಉಕ್ಕಿತು. ಜೊತೆಗೆ ಸಂಭ್ರಮದ ಅಲೆ ಎದ್ದಿತು. ಅದಕ್ಕೆ ಕಾರಣವಾಗಿದ್ದು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು ಉಪಸ್ಥಿತಿ.

ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಎನಿಸಿರುವ ಯುವ ದಸರೆಗೆ ಈ ಸಾಧಕಿ ಚಾಲನೆ ನೀಡುತ್ತಿದ್ದಂತೆ ಜೋರು ಕರತಾಡನ. ಪ್ರತಿ ಬಾರಿ ಸಿನಿ ತಾರೆಯರು, ಮುಖ್ಯಮಂತ್ರಿಯಿಂದ ಚಾಲನೆ ಸಿಗುತಿತ್ತು. ಆದರೆ, ಈ ಬಾರಿ ಕ್ರೀಡಾ ಸಾಧಕಿ ಉದ್ಘಾಟಿಸಿದ್ದು ವಿಶೇಷ. ವೇದಿಕೆ ಮುಂಭಾಗ ಬಂದ ಸಿಂಧು, ಎಲ್ಲರತ್ತ ಅಭಿಮಾನದಿಂದ ಕೈ ಬೀಸಿ ಧನ್ಯವಾದ ಅರ್ಪಿಸಿದರು.

‘ಯಾವುದೇ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಉತ್ತಮ ಸಾಧನೆ ಮೂಲಕ ದೇಶಕ್ಕೆ ಹೆಮ್ಮೆ ತರಬಹುದು’ ಎಂದು ಕಿವಿಮಾತು ಹೇಳಿದರು.

‘ಚಾಮುಂಡೇಶ್ವರಿ ತಾಯಿ ಮಹಿಷನನ್ನು ಸಂಹರಿಸಿ ವಿಜಯ ಸಾಧಿಸುವ ವಿಚಾರ ಗೊತ್ತಿದೆ. ಹಾಗೆಯೇ, ಕೆಡುಕಿನಿಂದ ದೂರವಿದ್ದು, ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ’ ಎಂದು ಹುರಿದುಂಬಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿದರು. ಸಂಸದ ಪ್ರತಾಪಸಿಂಹ ಸ್ವಾಗತಿಸಿದರು.

ಗಾಯನ, ನೃತ್ಯ: ಇದಕ್ಕೂ ಮೊದಲು ಶಮಿತಾ ಮಲ್ನಾಡ್‌ ಅವರು ‘ಚುಟು ಚುಟು’ ಹಾಡಿನ ಮೂಲಕ ಯುವಕರನ್ನು ರಂಜಿಸಿದರು.

ನಟ ಧೀರನ್‌ ರಾಮಕುಮಾರ್‌, ನಟಿ ಹರ್ಷಿಕಾ ಪೂಣಚ್ಚ ವೇದಿಕೆ ಮೇಲೆ ಬಂದು ಹೋದರು. ಕಲಾವಿದರು ನಡೆಸಿಕೊಟ್ಟ ‘ಎಲಿಮಿನೇಟೆಡ್‌’ ನೃತ್ಯ ಅದ್ಭುತವಾಗಿತ್ತು. ಯುವರಾಜ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯ ಸಾರುವ ನೃತ್ಯ ಪ್ರದರ್ಶಿಸಿದರು.

ನಂಜನಗೂಡಿನ ನೂಪುರ ನೃತ್ಯ ಶಾಲೆಯ ಮಕ್ಕಳು ಕಾರ್ಯಕ್ರಮ ನೀಡಿದರು. ಆದರೆ, ಮುಖ್ಯಮಂತ್ರಿ ಬಂದರೆಂದು ನೃತ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸಿಂಧು ಪೋಷಕರಾದ ಪಿ.ವಿ.ರಮಣಾ, ಪಿ.ವಿಜಯಾ, ಶಾಸಕರಾದ ಎಲ್‌.ನಾಗೇಂದ್ರ, ಕೆ.ಮಹಾದೇವ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಬಿಜೆಪಿ ಮುಖಂಡ ಸಂದೇಶ್‌ ಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಪೊಲೀಸ್‌ ಕಮಿಷನರ್‌ ಕೆ.ಟಿ.ಬಾಲಕೃಷ್ಣ, ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ತೆಲಂಗಾಣ ರಾಜ್ಯ ಐಪಿಎಸ್‌ ಅಧಿಕಾರಿ ದಾಮೋದರ್‌ಮ ಯುವ ದಸರಾ ಉಪಸಮಿತಿ ಕಾರ್ಯಾಧ್ಯಕ್ಷ ಲಿಂಗಣ್ಣಯ್ಯ, ಕಾರ್ಯದರ್ಶಿ ಸೋಮಶೇಖರ್‌
ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು