ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ನರೇಗಾ ಯೋಜನೆಯಡಿ ಅಭಿವೃದ್ಧಿ, ಜೀವಕಳೆ ಪಡೆದ 200 ಕೆರೆಗಳು

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರಿಗೆ ಕೆಲಸ
Last Updated 12 ಡಿಸೆಂಬರ್ 2021, 4:09 IST
ಅಕ್ಷರ ಗಾತ್ರ

ಹುಣಸೂರು: ಮಳೆಗಾಲಕ್ಕೂ ಮುನ್ನವೇ ಜಲಮೂಲಗಳನ್ನು ಅಭಿವೃದ್ಧಿಪಡಿಸಿದ್ದರ ಫಲವಾಗಿ ತಾಲ್ಲೂಕಿನ 200ಕ್ಕೂ ಹೆಚ್ಚಿನ ಕೆರೆಗಳು ತುಂಬಿದ್ದು, ಜೀವಕಳೆ ಪಡೆದು ನಳನಳಿಸುತ್ತಿವೆ.

ತಾಲ್ಲೂಕು ಪಂಚಾಯಿತಿಯು ನರೇಗಾ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿತ್ತು. ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್‌ ಅವರು ಪಂಚಾಯಿತಿ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಕೆರೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಸಿದ್ಧಪಡಿಸಿದರು.

ಹುಣಸೂರು ಕ್ಷೇತ್ರದಲ್ಲಿ 200 ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಯಲ್ಲಿ ₹9.43 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪೈಕಿ ₹3.75 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಗ್ರಾಮೀಣ ಭಾಗದಲ್ಲಿ 1.28 ಲಕ್ಷ ಮಾನವ ದಿನಗಳು ಸೃಷ್ಟಿಸಿ ಕೂಲಿ ನೀಡುವ ಮೂಲಕ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು.

‘ಎರಡು ವರ್ಷಗಳಿಂದ ಕೋವಿಡ್‌ ಸಂಕಷ್ಟ ತಲೆದೋರಿದ್ದು, ಈ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವ ಮೂಲಕ ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ಆರ್ಥಿಕ ಶಕ್ತಿ ತುಂಬಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೆರೆಗಳು ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ’ ಎಂದು ಕರ್ಣಕುಪ್ಪೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆರೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿತ್ತು. ಲಕ್ಷ್ಮಣತೀರ್ಥ ನದಿಯಿಂದ 40 ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಹಾರಂಗಿ ನಾಲೆಯ ಸರಣಿಯಲ್ಲಿ ಬರುವ ಕೆಲವು ಕೆರೆಗಳಿಗೆ ನೀರು ಪೂರೈಸಲಾಗಿತ್ತು.

ಉಕ್ಕಿದ ಕೊಳವೆಬಾವಿ: ಕೆರೆಗಳು ಭರ್ತಿಯಾಗುತ್ತಿದ್ದಂತೆ ಅಂತರ್ಜಲಮಟ್ಟ ವೃದ್ಧಿಯಾಗಿದ್ದು, ಕೊಳವೆಬಾವಿಗಳಿಗೆ ಮರುಜೀವ ಬಂದಿದೆ. ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಬೋಗಪ್ಪ ಅವರ ಹೊಲದಲ್ಲಿ ಕೊರೆಸಿದ್ದ ಕೊಳವೆಬಾವಿ ಬರಿದಾಗಿ 5 ವರ್ಷಗಳಾಗಿತ್ತು. ಈ ಬಾರಿ ಕೆರೆಗೆ ನೀರು ಬಂದಿದ್ದರಿಂದ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ.

ದಾಖಲೆ ಮಳೆ: ತಾಲ್ಲೂಕಿನಲ್ಲಿ ಪ್ರತಿವರ್ಷ 600 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಆದರೆ, ಈ ಬಾರಿ 859 ಮಿ.ಮೀ ಮಳೆಯಾಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ. ಅಕ್ಟೋಬರ್‌ನಲ್ಲಿ 397 ಮಿ.ಮೀ ಮತ್ತು ನವೆಂಬರ್‌ನಲ್ಲಿ 212 ಮಿ.ಮೀ ಮಳೆಯಾಗಿದ್ದು, 60 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ.

‘ಮೊದಲ ಸ್ಥಾನದಲ್ಲಿ ಕರ್ಣಕುಪ್ಪೆ ಗ್ರಾ.ಪಂ’
ನರೇಗಾ ಯೋಜನೆಯಡಿ ಕರ್ಣಕುಪ್ಪೆ ಗ್ರಾಮ ಪಂಚಾಯಿತಿಯ 13 ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದು, ಮೊದಲ ಸ್ಥಾನದಲ್ಲಿದೆ. ಬಿಳಿಗೆರೆ 11, ನೇರಳಕುಪ್ಪೆ 10, ಕಿರಂಗೂರು 9, ಕರಿಮುದ್ದನಹಳ್ಳಿ 8, ಹಿರಿಕ್ಯಾತನಹಳ್ಳಿ ಮತ್ತು ಗಾವಡಗೆರೆ ತಲಾ 6 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

***
2 ವರ್ಷಗಳಿಂದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಕೃಷಿ ಚಟುವಟಿಕೆಗೂ ಅನುಕೂಲವಾಗಿದೆ.
-ಗಿರೀಶ್, ಕಾರ್ಯ ನಿರ್ವಾಹಕ ಅಧಿಕಾರಿ, ತಾ.ಪಂ, ಹುಣಸೂರು

***

ಕಲ್ಲಹಳ್ಳಿ ಕೆರೆ ಬರಿದಾಗಿ ದಶಕಗಳೇ ಕಳೆದಿದ್ದವು. ಕೆರೆ ಅಭಿವೃದ್ಧಿ ಹಾಗೂ ಉತ್ತಮ ಮಳೆಯಿಂದಾಗಿ ಕೆರೆಯಲ್ಲಿ ಹೆಚ್ಚಿನ ನೀರು ಶೇಖರಣೆಗೊಂಡು ಅಂತರ್ಜಲಮಟ್ಟ ವೃದ್ಧಿಯಾಗಿದೆ.‌
-ಬೋಗಪ್ಪ, ರೈತ, ಕಲ್ಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT