ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಉಳಿವಿಗೆ 2ನೇ ಸ್ವಾತಂತ್ರ್ಯ ಸಂಗ್ರಾಮ ಅಗತ್ಯ: ಸಚಿವ ಮಹದೇವಪ್ಪ

Published 28 ಡಿಸೆಂಬರ್ 2023, 8:52 IST
Last Updated 28 ಡಿಸೆಂಬರ್ 2023, 8:52 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಲು ದೇಶದಲ್ಲಿ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಾದ ಅಗತ್ಯವಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಸೇವಾದಳದಿಂದ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಈಗ ಅಪಾಯದಲ್ಲಿದೆ. ಕೋಮುವಾದ, ಮತೀಯವಾದ ಹಾಗೂ ಧರ್ಮಾಂಧತೆಯ ಮೂಲಕ ಸ್ವಾತಂತ್ರ್ಯದ ಉದ್ದೇಶ ಹಾಗೂ ಕಾಂಗ್ರೆಸ್‌ನ ಹೋರಾಟದ ಆಶಯಗಳ ನಾಶಕ್ಕೆ ಕೋಮುವಾದಿಗಳು ಹೊರಟಿದ್ದಾರೆ’ ಎಂದು ದೂರಿದರು.

‘ಎಲ್ಲರ ಸರ್ವಾಂಗೀಣ ಅಭಿವೃದ್ಧಿ ‌ನಮ್ಮ ಗುರಿ. ಇದಕ್ಕೆ ಭಂಗ ಉಂಟು ಮಾಡಲು ಈ ದೇಶದ ಸರ್ವಾಧಿಕಾರಿ ನಾಯಕತ್ವ ಮುಂದಾಗಿದೆ. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ, ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದೆಲ್ಲಾ ಹೇಳುತ್ತಾ ಚರಿತ್ರೆಯನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದಿಂದ ಹಮ್ಮಿಕೊಂಡಿರುವ ‘ಡೊನೇಟ್ ಫಾರ್‌ ಇಂಡಿಯಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವೈಯಕ್ತಿಕವಾಗಿ ₹ 1.38 ಲಕ್ಷ ವಂತಿಗೆ ಘೋಷಿಸಿದರು. ‘ಪಕ್ಷ ನಡೆಸಲು ಸಂಪನ್ಮೂಲದ ಕ್ರೋಢೀಕರಣಕ್ಕಾಗಿ ಆಂದೋಲನ ನಡೆಸುತ್ತಿರುವುದು ಶ್ಲಾಘನೀಯ. ಕಾರ್ಯಕರ್ತರು ಶಕ್ತಾನುಸಾರ ವಂತಿಗೆ ನೀಡಬೇಕು’ ಎಂದು ಕೋರಿದರು.

ಮಾಜಿ ಸಂಸದ ಎಂ.ಶಿವಣ್ಣ ಮಾತನಾಡಿ, ‘ಸ್ವಾತಂತ್ರ್ಯ ‌ತಂದುಕೊಟ್ಟ ಹಿರಿಯರನ್ನು ಸ್ಮರಿಸಬೇಕು’ ಎಂದರು.

ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಜನಸಂಘದ ಕೊಡುಗೆ ಶೂನ್ಯ’ ಎಂದು ಟೀಕಿಸಿದರು.

ನಗರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿದರು.

ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಈಶ್ವರ್ ಚಕ್ಕಡಿ, ಪುಷ್ಪಲತಾ ಚಿಕ್ಕಣ್ಣ, ಲತಾ ಸಿದ್ದ ಶೆಟ್ಟಿ, ಮೋದಾಮಣಿ, ಸುನೀತಾ ವೀರಪ್ಪಗೌಡ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ರಾಮಸ್ವಾಮಿ ವೃತ್ತದಿಂದ ಮೆರವಣಿಗೆ ನಡೆಸಲಾಯಿತು.

ತಕ್ಕ ಉತ್ತರ ನೀಡಬೇಕು: ಮಹದೇವಪ್ಪ

‘ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂವಿಧಾನವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೋಮುವಾದಿಗಳು ಹಾಗೂ ಸರ್ವಾಧಿಕಾರಿಗೆ ತಕ್ಕಪಾಠ ಕಲಿಸಲೇಬೇಕು. ಕಾಂಗ್ರೆಸ್ ಸೇವಾದಳ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಕೋಮುವಾದಿ ಸಂಘಟನೆಗಳಿಗೆ ತಕ್ಕ ಉತ್ತರ ನೀಡಬಹುದು’ ಎಂದು ಮಹದೇವಪ್ಪ ತಿಳಿಸಿದರು.

‘ಕಾಂಗ್ರೆಸ್ ಎಂದರೆ ಒಗ್ಗೂಡುವಿಕೆ. ವಸಾಹತು ಸಾಮ್ರಾಜ್ಯಶಾಹಿಯ ವಿರುದ್ಧ ಸಂಘಟನಾತ್ಮಕ‌ ಚಳವಳಿಯನ್ನು ನಮ್ಮ ಪಕ್ಷ ಮಾಡಿದೆ. ಸಿದ್ಧಾಂತ ಇಟ್ಟುಕೊಂಡು ಹೋರಾಡಿದೆ. ಎಲ್ಲರಿಗೂ ಅವಕಾಶವನ್ನು ನೀಡಿದೆ. ಆಹಾರ ಸ್ವಾವಲಂಬನೆ ಸೇರಿದಂತೆ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಸೌಹಾರ್ದತೆ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ’ ಎಂದು ಹೇಳಿದರು.

‘ಸಂವಿಧಾನವೇ ಭಾರತದ ಆತ್ಮ. ದೇಶದಲ್ಲಿ ಇರುವವರೆಲ್ಲ ಭಾರತೀಯರೇ. ಎಲ್ಲರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳಿವೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT