ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ ಯೋಜನೆ; ಸದ್ಯದಲ್ಲೇ 30 ಎಂಎಲ್‌ಡಿ ನೀರು

42 ಟ್ಯಾಂಕರ್‌ಗಳಲ್ಲಿ ನಿತ್ಯ ಸರಬರಾಜು, 23 ಟ್ಯಾಂಕರ್‌ಗಳಲ್ಲಿ ಎರಡು ದಿನಗಳಿಗೊಮ್ಮೆ ಪೂರೈಕೆ
Last Updated 27 ಏಪ್ರಿಲ್ 2019, 19:03 IST
ಅಕ್ಷರ ಗಾತ್ರ

ಮೈಸೂರು: ಅಮೃತ್‌ ಯೋಜನೆಯಡಿ ಎರಡು ತಿಂಗಳಲ್ಲಿ ನಗರಕ್ಕೆ ಹೆಚ್ಚುವರಿಯಾಗಿ 30 ಎಲ್‌ಎಲ್‌ಡಿ ನೀರು ಲಭ್ಯವಾಗಲಿದ್ದು, ನಗರದ ಕೆಲವೆಡೆ ತಲೆದೋರಿರುವ ಕುಡಿಯುವ ನೀರಿನ ಅಭಾವ ತಗ್ಗುವ ನಿರೀಕ್ಷೆ ಇದೆ.

ಕೇಂದ್ರ ಪುರಸ್ಕೃತ ಅಮೃತ್‌ (ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆಯಡಿ ಮೇಳಾಪುರ 4ನೇ ಹಂತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ತ್ವರಿತಗೊಳಿಸಲು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಹಾಗೂ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್‌ ಸೂಚನೆ ನೀಡಿದ್ದಾರೆ.

ಸದ್ಯ ಕಾವೇರಿ ಹಾಗೂ ಕಬಿನಿ ನದಿಗಳಿಂದ ನಿತ್ಯ 250 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲಿ 180 ಎಂಎಲ್‌ಡಿ ನೀರು ನಗರಕ್ಕೆ ಲಭ್ಯವಾಗುತ್ತಿದೆ. ಸ್ವಚ್ಛತೆ ಹಾಗೂ ಸೋರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಒಂದಿಷ್ಟು ನೀರು ಪೋಲಾಗುತ್ತಿದೆ. ಸೋರಿಕೆ ಹಾಗೂ ಕಳ್ಳತನ ತಡೆಗಟ್ಟಲು ಸ್ವಯಸೇವಾ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿದೆ.

‘ಮೇಳಾಪುರದಲ್ಲಿ ಅಮೃತ್‌ ಯೋಜನೆ ಮುಗಿಯುವ ಹಂತದಲ್ಲಿದೆ. ಇದು ಪೂರ್ಣಗೊಂಡರೆ ನಗರಕ್ಕೆ ಒಟ್ಟು 210 ಎಂಎಲ್‌ಡಿ ನೀರು ಪೂರೈಕೆ ಆಗಲಿದೆ. ನೀರಿನ ಸಮಸ್ಯೆ ತಗ್ಗಲಿದೆ. ಈಗಾಗಲೇ ಪಂಪ್‌ಸೆಟ್‌ ಬಂದಿದ್ದು, ಟ್ರಾನ್ಸ್‌ಫಾರ್ಮರ್‌ ಖರೀದಿಗೆ ಮುಂದಾಗಿದ್ದೇವೆ. ಕಾಮಗಾರಿ ಪರಿಶೀಲನೆ ಸಂಬಂಧ ಇದೇ 30ರಂದು ಜಿಲ್ಲಾಧಿಕಾರಿ ಸಭೆ ಕರೆದಿದ್ದಾರೆ’ ಎಂದು ಶಿಲ್ಪಾನಾಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಗರ ವ್ಯಾಪ್ತಿಯ ಕೆಲ ವಾರ್ಡ್‌ಗಳು, ಎತ್ತರ ಪ್ರದೇಶ ಹಾಗೂ ಹೊರ ವಲಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರವು 42 ಟ್ಯಾಂಕರ್‌ಗಳ ಮೂಲಕ ನಿತ್ಯ ಸರಬರಾಜು ಮಾಡುತ್ತಿದೆ. ಇದಲ್ಲದೇ, 23 ಟ್ಯಾಂಕರ್‌ಗಳಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.

ನದಿಯಲ್ಲೂ ನೀರು ಕಡಿಮೆ ಆಗಿದೆ. ಹೀಗಾಗಿ, ಮೇಗಳಾಪುರದ ಬಳಿ ಮರಳು ಚೀಲಗಳನ್ನು ಹಾಕಿ ನೀರು ಹೆಚ್ಚು ಸಂಗ್ರಹವಾಗುವಂತೆ ಮಾಡಲಾಗಿದೆ. ಇದರಿಂದ ನೀರು ಮೇಲೆತ್ತಲು ಸುಲಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT