ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ, ಅಯುರ್ವೇದ ಅಳವಡಿಕೆಗೆ ಸಲಹೆ: ಪೇಜಾವರ ಸ್ವಾಮೀಜಿ

Published 23 ಜುಲೈ 2023, 11:14 IST
Last Updated 23 ಜುಲೈ 2023, 11:14 IST
ಅಕ್ಷರ ಗಾತ್ರ

ಮೈಸೂರು: ‘ನಿತ್ಯವೂ ಯೋಗಾಭ್ಯಾಸ ಮಾಡಬೇಕು ಮತ್ತು ಆರೋಗ್ಯದ ಸಮಸ್ಯೆಗಳು ಎದುರಾದಾಗ ನಮ್ಮದೇ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ತಮ್ಮ 36ನೇ ಚಾತುರ್ಮಾಸ್ಯದ ಭಾಗವಾಗಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜು, ನಾರಾಯಣ ಹೃದಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಾವೇರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿನ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಸಮಸ್ಯೆಗಳನ್ನು ಪತ್ತೆ ಹಚ್ಚಲು ‌ತಪಾಸಣಾ ಶಿಬಿರಗಳು ಸಹಕಾರಿಯಾಗಿದೆ. ಶ್ರೀಕೃಷ್ಣದಾಮದ ಸದಸ್ಯರು ಸಾರ್ವಜನಿಕರ ಅನುಕೂಲಕ್ಕಾಗಿ ಶಿಬಿರದ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಇಂಗ್ಲಿಷ್ ಔಷಧಿಯು 90–100 ವರ್ಷಗಳಿಂದೀಚೆಗೆ ಬಳಕೆಯಾಗುತ್ತಿದೆ. ಆದರೆ, ನಮ್ಮ ನಾಡಿನ ಯೋಗ, ಆಯುರ್ವೇದ ಪದ್ಧತಿಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಹೀಗಾಗಿ, ನಮ್ಮ ದೇಶ ತಪೋವನ ಇದ್ದಂತೆ’ ಎಂದು ತಿಳಿಸಿದರು.

‘ಚಿಂತೆಯ ಕಾರಣದಿಂದಲೇ ನಮ್ಮನ್ನು ಹಲವು ರೋಗಗಳು ಕಾಡುತ್ತವೆ. ಆದ್ದರಿಂದ ಚಿಂತೆಯನ್ನು ಬಿಡಬೇಕು. ನಮ್ಮ   ಪೂರ್ವಜರು ಕಲಿಸಿಕೊಟ್ಟಿರುವ ಯೋಗ, ಧ್ಯಾನ ಮತ್ತು ಆಯುರ್ವೇದ ಪದ್ಧತಿಯನ್ನು ಬಳಸಿಕೊಂಡು ಸಮಾಧಾನ ಚಿತ್ತದಿಂದ ಇರಬೇಕು ಹಾಗೂ ಆರೋಗ್ಯವಂತರಾಗಬೇಕು’ ಎಂದು ಹೇಳಿದರು.

‘ನಮ್ಮ ಯೋಗ ಪದ್ಧತಿಯನ್ನು ವಿದೇಶಗಳಲ್ಲಿ ಕಲಿತು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಾವೂ ಮುಂದುವರಿಸಬೇಕು.  ಆ.6ರಂದು ಬೇಬಿ ಗ್ರಾಮದಲ್ಲಿ ಆಯುರ್ವೇದ ತಪಾಸಣೆ ಶಿಬಿರವನ್ನು ಉಚಿತವಾಗಿ ಹಮ್ಮಿಕೊಂಡಿದ್ದೇವೆ’ ಎಂದು ಶ್ರೀಗಳು ತಿಳಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಮೇಯರ್ ಶಿವಕುಮಾರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್, ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಡಾ.ರಾಧಾಕೃಷ್ಣ ರಾಮ್ ರಾವ್, ಆಯುರ್ವೇದ ತಜ್ಞರಾದ ಡಾ.ಗುರು ಬಸವರಾಜ್, ಡಾ.ಲಕ್ಷ್ಮಿನಾರಾಯಣ ಶೆಣೈ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಎಂ.ಕೃಷ್ಣದಾಸ್ ಪುರಾಣಿಕ್, ಕಾರ್ಯಧ್ಯಕ್ಷ ರವಿ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ತಂತ್ರಿ, ಆರೋಗ್ಯ ಸೇವಾ ಸಮಿತಿಯ ಅಧ್ಯಕ್ಷ ಕೆ.ಎನ್. ಗುರುರಾಜ್, ವೈದ್ಯರಾದ ರೂಪಾ ಪ್ರಕಾಶ್, ಪ್ರಕಾಶ್ ಪ್ರಭು, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT