ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕೆಡಿಪಿ ಪ್ರಗತಿ ಪರಿಶೀಲನೆ ಯಾವಾಗ?

ಹೋದ ವರ್ಷ ಆಗಸ್ಟ್‌ನಲ್ಲಿ ನಡೆದಿತ್ತು; ನಂತರ ಕರೆದಿಲ್ಲ, ಅಭಿವೃದ್ಧಿ ಕಾರ್ಯಕ್ಕೆ ಗ್ರಹಣ!
Published 11 ಜೂನ್ 2024, 7:46 IST
Last Updated 11 ಜೂನ್ 2024, 7:46 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ಪ್ರಗತಿ ಪರಿಶೀಲನಾ ಕಾರ್ಯ ಜಿಲ್ಲೆಯಲ್ಲಿ ನಿಯಮಿತವಾಗಿ ನಡೆದಿಲ್ಲ. ಈ ಪರಿಣಾಮ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

‘ಸಂಬಂಧಿಸಿದ ಅಧಿಕಾರಿಗಳ ನಿಷ್ಕಾಳಜಿ, ಸಚಿವರು ಸೇರಿದಂತೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಚುನಾಯಿತ ಜನಪ್ರತಿನಿಧಿಗಳು ಚುನಾವಣಾ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕಾರಣದಿಂದಾಗಿ ಪ್ರಗತಿ ಪರಿಶೀಲನೆ ಕಾರ್ಯ ಕಡೆಗಣನೆಗೆ ಒಳಗಾಗಿದೆ’ ಎಂದು ಹೇಳಲಾಗುತ್ತಿದೆ.

ಕೆಡಿಪಿ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು, ಇಲಾಖಾವಾರು ಪ್ರಗತಿ ಪರಿಶೀಲನೆ ಆಗಬೇಕು ಎನ್ನುವುದು ನಿಯಮ. ಸರ್ಕಾರಿ ಇಲಾಖೆಗಳ ಜಿಲ್ಲಾ ಮಟ್ಟದ ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು, ಅಭಿವೃದ್ಧಿ ಕಾರ್ಯಕ್ರಮಗಳ ಸ್ಥಿತಿಗತಿ ಏನಾಗಿದೆ, ಅನುದಾನ ಬಂದಿದೆಯೇ ಇಲ್ಲವೇ, ನೀಡಿದ ಹಣ ಖರ್ಚಾಗಿದೆಯೇ, ಬಳಕೆ ಆಗದಿರಲು ಕಾರಣವೇನು, ಯೋಜನೆಗಳ ಅನುಷ್ಠಾನಕ್ಕೆ ಎದುರಾಗಿರುವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಭೆಯನ್ನು ನಡೆಸಲಾಗುತ್ತದೆ. ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮೊದಲಾದ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯೂ ಹೌದು. ಇದಕ್ಕೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.

ಸೂಚಿಸಿದ್ದ ಮಹದೇವಪ್ಪ ಅವರೂ ಕ್ರಮ ವಹಿಸಿಲ್ಲ!: ‘ನಿಯಮಿತವಾಗಿ ಕೆಡಿಪಿ ಸಭೆ ಕರೆಯದಿರುವುದಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಾಯಕರ ಗಮನಕ್ಕೆ ತಂದಿದ್ದಾರೆ’ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಸರ್ಕಾರ ರಚನೆಯಾದ ನಂತರ, ಹೋದ ವರ್ಷದ ಜೂನ್‌ 12ರಂದು ಸರ್ಕಾರಿ ಅತಿಥಿ ಗೃಹದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು, ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸದೇ ಇದ್ದಿದ್ದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

‘ಮೂರು ತಿಂಗಳಲ್ಲಿ ಒಮ್ಮೆ ಸಭೆ ನಡೆಸಬೇಕಿತ್ತು. ಬಿಜೆಪಿ ಸರ್ಕಾರವಿದ್ದಾಗ ವರ್ಷದಲ್ಲಿ ಒಮ್ಮೆಯಷ್ಟೇ ನಡೆದಿದೆ. ಇದು ಸರಿಯಲ್ಲ. ಮುಂದೆ ಹೀಗಾಗಬಾರದು. ಮಾರ್ಗಸೂಚಿಗಳ ಪ್ರಕಾರ ನಿಯಮಿತವಾಗಿ ನಡೆಸಬೇಕು’ ಎಂದು ಸೂಚಿಸಿದ್ದರು. ಇದನ್ನು ಸಚಿವರು ಹಾಗೂ ಅಧಿಕಾರಿಗಳೂ ಮರೆತಂತಿದೆ! 

ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಕಾರಣದಿಂದಲೂ, ಸಚಿವರು ಸಭೆ ನಡೆಸಲಾಗಲಿಲ್ಲ. ಇಡೀ ಆಡಳಿತ ವ್ಯವಸ್ಥೆ ಚುನಾವಣಾ ಕಾರ್ಯಕ್ಕೇ ಹೆಚ್ಚಿನ ಆದ್ಯತೆ ನೀಡಿತ್ತು. ಜೂನ್‌ 6ರಂದು ಮಾದರಿ ನೀತಿಸಂಹಿತೆ ತೆರವಾಗಿದೆ. ‘ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಆದ್ಯತೆ ನೀಡಬೇಕು. ಆಡಳಿತಕ್ಕೆ ಚುರುಕು ಮುಟ್ಟಿಸಬೇಕು’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ಹೋದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ್ದ ಕೆಡಿಪಿ ಸಭೆಯಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೆ. ಆ ಪೈಕಿ ಲಲಿತಾದ್ರಿಪುರ ಆಶ್ರಯ ಯೋಜನೆಯ ಸಮಸ್ಯೆ ಬಗೆಹರಿಯಿತು. ಮೂರು ತಿಂಗಳಿಗೊಮ್ಮೆ ಸಭೆ ನಡೆದರೆ ನಮ್ಮ ಸಮಸ್ಯೆಗಳು ಬಹಗೆಹರಿಯುತ್ತವೆ. ಇಲ್ಲದಿದ್ದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಅನೇಕ ಸಮಸ್ಯೆಗಳು ಹಾಗೆಯೇ ಉಳಿದಿವೆ’ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಪ್ರತಿಕ್ರಿಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸಿದರೆ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು.
– ಟಿ.ಎಸ್. ಶ್ರೀವತ್ಸ, ಶಾಸಕ
ರಾಜ್ಯ ಸರ್ಕಾರದಿಂದ ಅನುದಾನವನ್ನೇ ಕೊಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಕ್ರಮಗಳೇ ಆಗುತ್ತಿಲ್ಲ. ಅನುದಾನವನ್ನೂ ಒದಗಿಸಬೇಕು. ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸಬೇಕು.
–ಜಿ.ಟಿ. ದೇವೇಗೌಡ, ಚಾಮುಂಡೇಶ್ವರಿ ಶಾಸಕ

6 ತಿಂಗಳ ನಂತರ ನಡೆಸುವೆ ಎಂದಿದ್ದ ಸಿಎಂ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅಧ್ಯಕ್ಷತೆಯಲ್ಲಿ ಜುಲೈ 1ರಂದು ಅಧಿಕಾರಿಗಳ ಜತೆಗಷ್ಟೆ ಕೆಡಿ‍ಪಿ ಸಭೆ ನಡೆಸಿದ್ದರು. ಆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆದಿತ್ತು. ತವರು ಜಿಲ್ಲೆಯಲ್ಲಿ ಸತತ ಏಳುತಾಸಿಗೂ ಹೆಚ್ಚು ಕಾಲ ಪ್ರಗತಿ ಪರಿಶೀಲನೆ ನಡೆಸಿದ್ದ ಅವರು ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದರು. ಆಗ ಶಾಸಕರು ಸಂಸದರು ವಿಧಾನಪರಿಷತ್‌ ಸದಸ್ಯರು ಕೂಡ ಭಾಗವಹಿಸಿ ಹಲವು ಸಮಸ್ಯೆಗಳನ್ನು ಮಂಡಿಸಿದ್ದರು. ಆಗ ಮಾತನಾಡಿದ್ದ ಮುಖ್ಯಮಂತ್ರಿ ‘ಆರು ತಿಂಗಳ ನಂತರ ನಾನೇ ಬಂದು ಸಭೆ ನಡೆಸುತ್ತೇನೆ.

ನಿಮ್ಮ ನಡವಳಿಕೆಯಲ್ಲಿ ಸುಧಾರಣೆ ಕಾಣದಿದ್ದರೆ ನೀವ್ಯಾರೂ ಇಲ್ಲಿರುವುದಿಲ್ಲ. ವರ್ಗಾವಣೆ ಮಾಡಿದರೆ ಕೆಎಟಿಗೆ ಹೋಗುತ್ತೇವೆ ಎಂದರೆ ಅಂಥವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದೂ ನನಗೆ ಗೊತ್ತಿದೆ. ಕನಿಷ್ಠ ಮೂರು ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಬೇಕು’ ಎಂದು ತಾಕೀತು ಮಾಡಿದ್ದರು. ಇದು ಕೂಡ ಅನುಷ್ಠಾನಕ್ಕೆ ಬಂದಿಲ್ಲ.

ಸಾರ್ವಜನಿಕರ ಅಸಮಾಧಾನ

ಅದಾಗಿ 10 ತಿಂಗಳಾದರೂ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನೂ ಕರೆದು ಪ್ರಗತಿ ಪರಿಶೀಲಿಸುವ ಕೆಲಸವೇ ಆಗಿಲ್ಲ! ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚುರುಕು ಮುಟ್ಟಿಸುವ ಹಾಗೂ ಸಮಸ್ಯೆಗಳಿದ್ದರೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಆಗಿಲ್ಲ. ಕೆಡಿಪಿ ಸಭೆ ನಿಯಮಿತವಾಗಿ ನಡೆಯದೇ ಅಭಿವೃದ್ಧಿಯ ಮೇಲೆ ಗ್ರಹಣ ಬಡಿದಂತಾಗಿದೆ ಎಂಬುದು ಸಾರ್ವಜನಿಕರ ಅಸಮಾಧಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT