ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಬಳಕೆ, ಸಂಶೋಧನೆಯೇ ದಾರಿ: ಪ್ರೊ.ಹರೀಶ್‌

ಅಂಬೇಡ್ಕರ್‌ ಕೇಂದ್ರ; ಸಮಾಜವಿಜ್ಞಾನ ಕುರಿತ 6 ದಿನಗಳ ಕಾರ್ಯಾಗಾರ ಸಮಾರೋಪ
Published 6 ಏಪ್ರಿಲ್ 2024, 15:23 IST
Last Updated 6 ಏಪ್ರಿಲ್ 2024, 15:23 IST
ಅಕ್ಷರ ಗಾತ್ರ

ಮೈಸೂರು: ‘ಸಮಾಜವಿಜ್ಞಾನ ಸಂಶೋಧನೆಗೆ ಇದು ಸುವರ್ಣ ಕಾಲ, ಇಂದು ಮಾಹಿತಿಯ ಭಂಡಾರವೇ ನಮ್ಮೆದುರಿದ್ದು, ತಂತ್ರಜ್ಞಾನ ಬಳಕೆ, ಸಮಗ್ರ ಅಧ್ಯಯನದಿಂದ ಉತ್ತಮ ಬೆಳವಣಿಗೆ ಸಾಧ್ಯ’ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್‌ ರಾಮಸ್ವಾಮಿ ಹೇಳಿದರು.

ಮಾನಸಗಂಗೋತ್ರಿಯ ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶನಿವಾರ ನಡೆದ ‘ಸಮಾಜ ವಿಜ್ಞಾನದಲ್ಲಿ ಸಂಶೋಧನಾ ವಿಧಾನಗಳು’ ಕುರಿತ 6 ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ‘ಸಂಶೋಧನೆ ಮತ್ತು ಮುಂದಿನ ದಾರಿ’ ಸಂವಾದದಲ್ಲಿ ಮಾತನಾಡಿದರು.

‘ಒಂದು ಸಾಮಾಜಿಕ ಘಟನೆಯನ್ನು ಪೂರ್ವದಲ್ಲಿಯೇ ಅಂದಾಜಿಸುವ ವೈಜ್ಞಾನಿಕ ಪ್ರಯತ್ನವನ್ನು ನಾವು ಮಾಡುತ್ತಿಲ್ಲ. ಸಮಾಜ ವಿಜ್ಞಾನದ ಅಗತ್ಯ ಮತ್ತು ಅಳವಡಿಕೆಯಲ್ಲಿ ಈ ವಿಚಾರ ಬಹು ಮುಖ್ಯ. ಇದು ಹೀಗೆಯೇ ನಡೆಯತ್ತದೆ ಎಂದು ಗಟ್ಟಿಯಾಗಿ ಹೇಳಲು ಸಾಧ್ಯವಾಗುವಂತಹ ಸಂಶೋಧನೆ ನಡೆಯಬೇಕು’ ಎಂದರು.

‘ಪ್ರತಿಯೊಂದರನ್ನು ಏಕೆ ಹೀಗಿದೆ ಎಂಬ ಅರಿವಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಕಾರ್ಯವಿಧಾನದಲ್ಲೂ ವ್ಯಕ್ತಿಯ ನೈಜ ಅರಿವು ಪ್ರಭಾವ ಬೀರುತ್ತಿಲ್ಲ. ಇಂದು ದೇಶದಲ್ಲಿ ಚುನಾವಣೆ ನಡೆಯುತ್ತಿದ್ದರೂ, ಅಭ್ಯರ್ಥಿಗಳ ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೂ ಅಧ್ಯಯನದ ಪ್ರಕಾರ ಶೇ 1ರಷ್ಟು ಜನರು ಕೂಡ ಅದನ್ನು ಓದುವ ಪ್ರಯತ್ನ ಮಾಡುವುದಿಲ್ಲ’ ಎಂದರು.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಮಾತನಾಡಿ, ‘ಸಂಶೋಧನೆಯು ಸತ್ಯದ ಅನ್ವೇಷಣೆ. ತೀವ್ರ ತುಡಿತ, ಪರಿಶ್ರಮವಿಲ್ಲದೇ ಅದು ಘಟಿಸುವುದಿಲ್ಲ. ಪ್ರಯೋಜನ ಉಂಟುಮಾಡುವುದಿಲ್ಲ. ಸೈದ್ಧಾಂತಿಕ ಸದೃಢವಾಗಿ ಸಂಶೋಧನೆ ನಡೆಸದಿದ್ದರೆ ಪ್ರಯೋಜನಕ್ಕೆ ಬಾರದ ಟೊಳ್ಳಿನ ಕೆಲಸವಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರೊ.ಆರ್.ಇಂದಿರಾ ಮಾತನಾಡಿ, ‘ಸಮಾಜ ವಿಜ್ಞಾನ ಅಧ್ಯಯನವು 10 ವರ್ಷಗಳ ಹಿಂದಿನ ಗಟ್ಟಿತನವನ್ನು ಇಂದು ಹೊಂದಿಲ್ಲ. ಸಂಶೋಧನೆಯಲ್ಲಿ ನವೀನತೆ, ಸಮಾಜದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುವಲ್ಲಿ ದುರ್ಬಲವಾಗುತ್ತಿದೆ. ಇದನ್ನು ಸರಿಪಡಿಸುವ ಅಗತ್ಯವೇ ನಮ್ಮ ಸವಾಲು ಮತ್ತು ಸಮಾಜವನ್ನು ಕಟ್ಟಲು ತೊಡಗಿಸುವ ಚಾಲಕ ಶಕ್ತಿ’ ಎಂದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪ ಚೇರ್ಮನ್‌ ಪ್ರೊ.ಎಸ್.ಆರ್.ನಿರಂಜನ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಬೋಧಕ, ಬೋಧಕೇತರ, ಸಂಶೋಧಕರು ಮತ್ತು ವಿದ್ಯಾರ್ಥಿಗಳ ವಿಭಾಗದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT