ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಾಧನೆ: ಡಾ.ಎಲ್‌.ಜಿ.ಆನಂದ್‌ ಶ್ಲಾಘನೆ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಎಲ್‌.ಜಿ.ಆನಂದ್‌ ಶ್ಲಾಘನೆ
Last Updated 29 ಮಾರ್ಚ್ 2023, 6:33 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ದಕ್ಷಿಣ ಭಾರತದಲ್ಲೇ ರಾಜ್ಯವು ಮುಂಚೂಣಿಯಲ್ಲಿದ್ದು, ಮೈಸೂರು ಜಿಲ್ಲೆಯಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳ ಪಾಲನೆಯನ್ನು ಉತ್ತಮವಾಗಿ ಮಾಡಲಾಗುತ್ತಿದೆ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಎಲ್‌.ಜಿ.ಆನಂದ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ‘ಮಕ್ಕಳ ಹಕ್ಕುಗಳ ರಕ್ಷಣೆ’ ಕುರಿತ ಪರಿಶೀಲನಾ ಸಭೆಗೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘‌ಆಯೋಗವು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪುದುಚೇರಿ ಹಾಗೂ ತೆಲಂಗಾಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪ್ರಕರಣಗಳ ಮೇಲೆ ನಿಗಾವಹಿಸಿದ್ದು, ಈ ರಾಜ್ಯಗಳ 22 ಮಕ್ಕಳ ನಿಗಾ ಕೇಂದ್ರಗಳಲ್ಲಿ ಮೇಲ್ವಿಚಾರಣೆ ನಡೆಸಿದೆ’ ಎಂದರು.

‘ಮಕ್ಕಳ ಪಾಲನಾ ಸಂಸ್ಥೆಗಳ (ಸಿಸಿಐ) ಮೇಲ್ವಿಚಾರಣೆ ಮಾಡಲು ಮಾನಿಟರಿಂಗ್‌ ಆ್ಯಪ್‌ ಫಾರ್ಟ್‌ ಸೀಮ್‌ಲೆಸ್‌ ಇನ್‌ಸ್ಪೆಕ್ಶನ್ (ಎಂಎಎಸ್‌ಐ) ಅನ್ನು ರೂಪಿಸಿದೆ. ಮಕ್ಕಳ ಕಲ್ಯಾಣ ಸಮಿತಿ, ರಾಜ್ಯ, ಜಿಲ್ಲಾ ತಪಾಸಣಾ ಸಮಿತಿಗಳು, ಬಾಲ ನ್ಯಾಯ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳು ಕೈಗೊಂಡ ತಪಾಸಣೆಗಳ ದತ್ತಾಂಶದ ವರದಿ ಆ್ಯಪ್‌ನಲ್ಲಿ ಇರಲಿದೆ. ಪ್ರಕರಣ ವಿಚಾರಣೆ, ಪರಿಹಾರ ಸೇರಿದಂತೆ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕ ಗಮನಿಸಿ ನ್ಯೂನತೆಯಿದ್ದರೆ ಸಮಿತಿಗಳಿಗೆ ಸೂಚನೆ ನೀಡಲಾಗುತ್ತಿದೆ’ ಎಂದರು.

‘ಬಾಲ್ಯವಿವಾಹ, ಬಾಲಕಾರ್ಮಿಕ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಿಮಾಚಲ ಪ್ರದೇಶ, ರಾಜಸ್ಥಾನದ ಪ್ರಕರಣಕ್ಕೂ ಹಾಗೂ ಕರ್ನಾಟಕದ ಬಾಲ್ಯವಿವಾಹ ಪ್ರಕರಣಕ್ಕೂ ವ್ಯತ್ಯಾಸವಿದೆ. ಸ್ಥಳೀಯವಾಗಿಯೇ ತಡೆಯುವ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ‘ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿವೆ. ಕೆಲವೊಂದು ತಲೆತಗ್ಗಿಸುವ ಘಟನೆಗಳೂ ನಡೆದಿವೆ. ಇಡೀ ರಾಜ್ಯದಾದ್ಯಂತ ಸಭೆಗಳನ್ನು ನಿರಂತರ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮಿತಿಗಳನ್ನು ರಚಿಸಲಾಗುತ್ತಿದೆ. ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ (ಸಿಸಿಐ) ಮೂಲಸೌಕರ್ಯ, ಕಾಳಜಿ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಮಕ್ಕಳ ಪರ ಕೆಲಸ ಮಾಡುವ ಎನ್‌ಜಿಒ ಸೇರಿದಂತೆ 10 ಸದಸ್ಯರು ಇರಲಿದ್ದು, ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ’ ಎಂದು ತಿಳಿಸಿದರು.

ಡಿಸಿಪಿ ಎಂ.ಮುತ್ತುರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT