ಮೈಸೂರು: ಅಕ್ಷಯ ತೃತೀಯ ದಿನವಾದ ಬುಧವಾರ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರ ದಂಡೇ ನೆರೆದಿದ್ದು, ಬೆಲೆ ಏರಿಕೆ ನಡುವೆಯೂ ಖರೀದಿ ಜೋರಾಗಿಯೇ ಇತ್ತು.

ಬಸವ ಜಯಂತಿಯ ದಿನವೇ ಅಕ್ಷಯ ತೃತೀಯ ದಿನವೂ ಇದ್ದು, ಇಂದು ಬಂಗಾರ ಖರೀದಿಸಿದರೆ ಬಾಳೂ ಬಂಗಾರ ಆಗಲಿದೆ ಎಂಬುದು ಹಲವರ ನಂಬಿಕೆ. ಹೀಗಾಗಿ ಜನ ಬೆಳಿಗ್ಗೆಯಿಂದಲೇ ಆಭರಣ ಮಳಿಗೆಗಳತ್ತ ಹೆಜ್ಜೆ ಹಾಕಿದರು. ಹೊತ್ತು ಕಳೆದಂತೆಲ್ಲ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತ ಹೋಯಿತು. ಸಂಜೆ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯಿತು.

ಹಾರ್ಡಿಂಜ್ ವೃತ್ತದಿಂದ ಫೈವ್ಲೈಟ್ ವೃತ್ತದವರೆಗೆ ಬೆಂಗಳೂರು–ನೀಲಗಿರಿ ರಸ್ತೆಯ ಅಕ್ಕಪಕ್ಕ ನಾಲ್ಕಾರು ಪ್ರಸಿದ್ಧ ಬ್ರಾಂಡ್ಗಳ ಆವರಣ ಮಳಿಗೆಗಳು ಇದ್ದು, ಪ್ರತಿ ಅಂಗಡಿಯಲ್ಲೂ ಜನರು ಸಾಲುಗಟ್ಟಿದ್ದರು. ಅಶೋಕ ರಸ್ತೆಯಲ್ಲಿನ ವಿವಿಧ ಅಂಗಡಿಗಳಲ್ಲೂ ಜನರ ಸಂಖ್ಯೆ ತಕ್ಕಮಟ್ಟಿಗೆ ಇತ್ತು. ದೇವರಾಜ ಅರಸು ರಸ್ತೆಯಲ್ಲೂ ಸಂಜೆ ಜನಸಂದಣಿ ಕಂಡುಬಂದಿತು. ಪ್ರತಿ ಅಂಗಡಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ವಿವಿಧ ಅಂಗಡಿಗಳು ಕೆಲವು ವಿಶೇಷ ರಿಯಾಯಿತಿಗಳನ್ನು ಘೋಷಿಸಿದ್ದವು. ಚಿನ್ನದ ದರದ ಮೇಲೆ ಪ್ರತಿ ಗ್ರಾಂಗೆ ₹200ರಿಂದ ₹500ರವರೆಗೂ ರಿಯಾಯಿತಿ, ತಯಾರಿಕೆ ಶುಲ್ಕದಲ್ಲಿ ಶೇ 5ರವರೆಗೆ ರಿಯಾಯಿತಿ, ವೇಸ್ಟೇಜ್ನಲ್ಲಿ ರಿಯಾಯಿತಿ... ಹೀಗೆ ಹತ್ತು ಹಲವು ರಿಯಾಯಿತಿಗಳು ಲಭ್ಯವಿದ್ದವು. ಕೆಲವು ಅಂಗಡಿಗಳ ಮಾಲೀಕರು ಗ್ರಾಹಕರು ಖರೀದಿಸಿದ ಚಿನ್ನಕ್ಕೆ ಅಷ್ಟೇ ತೂಕದ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದರು. ಜೊತೆಗೆ ಲಕ್ಕಿ ಡಿಪ್ ಮೂಲಕ ಉಡುಗೊರೆ ಯೋಜನೆಗಳೂ ಜಾರಿಯಲ್ಲಿದ್ದವು.

ಅಕ್ಷಯ ತೃತೀಯದ ಅಂಗವಾಗಿ ಬೆಳಿಗ್ಗೆ 9ಕ್ಕೆ ಮುಂಚೆಯೇ ಅಂಗಡಿಗಳ ಬಾಗಿಲು ತೆರೆಯಲಾಗಿತ್ತು. ಬರುವ ಗ್ರಾಹಕರಿಗೆ ಪಾನೀಯದ ವ್ಯವಸ್ಥೆಯೂ ಇತ್ತು. ಸಾಕಷ್ಟು ಮಂದಿ ಮುಂಚೆಯೇ ಮುಂಗಡ ಹಣ ಕೊಟ್ಟು ಆಭರಣ ಕಾಯ್ದಿರಿಸಿದ್ದು, ಬುಧವಾರ ಬಂದು ಚಿನ್ನ ಒಯ್ದರು.

ಚಿನ್ನ ಖರೀದಿ ಹಿನ್ನೆಲೆಯಲ್ಲಿ ಪೊಲೀಸರು ನಗರದ ಪ್ರಮುಖ ಆಭರಣ ಮಳಿಗೆಗಳ ಸುತ್ತ ಗಸ್ತು ಹೆಚ್ಚಿಸಿದ್ದು, ಅಲ್ಲಲ್ಲಿ ಬಂದೋಬಸ್ತ್ ಒದಗಿಸಿದ್ದರು.

ಈ ಬಾರಿ ಚಿನ್ನದ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೀಗಾಗಿ ಕೂಡಿದ್ದ ಹಣದಲ್ಲಿ ಸಣ್ಣದೊಂದು ಓಲೆ ಖರೀದಿಸಿ ಸಂಭ್ರಮ ಸೀಮಿತಗೊಳಿಸಿಕೊಂಡಿದ್ದೇನೆ
ರೇಖಾ ಸರಸ್ವತಿಪುರಂ

ಬೆಳಿಗ್ಗೆಯಿಂದಲೇ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಸಾಕಷ್ಟು ಮಂದಿ ಮುಂಚೆಯೇ ತಮ್ಮಿಷ್ಟದ ವಿನ್ಯಾಸದ ಆಭರಣ ಕಾಯ್ದಿರಿಸಿದ್ದು ಇಂದು ಕೊಂಡೊಯ್ದಿದ್ದಾರೆ
ಹರೀಶ್ ಆಭರಣ ಮಳಿಗೆಯೊಂದರ ಸಿಬ್ಬಂದಿ

ಎಷ್ಟಿತ್ತು ದರ?

ಆಭರಣ ಚಿನ್ನದ (22 ಕ್ಯಾರಟ್) ದರವು ಮಂಗಳವಾರ ಪ್ರತಿ ಗ್ರಾಂಗೆ ₹8980 ಇದ್ದು ಬುಧವಾರ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ ₹5 ಇಳಿಕೆ ಕಂಡು ₹8975ರ ಸರಾಸರಿಯಲ್ಲಿ ಮಾರಾಟವಾಯಿತು. ಕಳೆದ ವರ್ಷ ಇದೇ ದಿನ ಪ್ರತಿ ಗ್ರಾಂಗೆ ₹7256 ದರ ಇದ್ದು ಗ್ರಾಂಗೆ ಸರಾಸರಿ ₹1719ರಷ್ಟು ಏರಿಕೆ ಆಗಿದೆ. ಏಪ್ರಿಲ್ 22ರಂದು ಆಭರಣ ಚಿನ್ನವು ಪ್ರತಿ ಗ್ರಾಂಗೆ ₹9280ರ ದರದಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಕಳೆದೊಂದು ವಾರದಲ್ಲಿ ಗ್ರಾಂಗೆ ₹300ರಷ್ಟು ಇಳಿಕೆ ಆಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. 24 ಕ್ಯಾರಟ್ನ ಪರಿಶುದ್ಧ ಚಿನ್ನ ಬುಧವಾರ ಗ್ರಾಂಗೆ ₹9791ರ ದರ ಹೊಂದಿತ್ತು. ಬೆಳ್ಳಿ ಪ್ರತಿ ಕೆ.ಜಿಗೆ ₹98800ರಂತೆ ವ್ಯಾಪಾರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.