ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪ್ರಸಾರಾಂಗಕ್ಕೆ ‘ಅಕ್ರಮ’ ನೇಮಕಾತಿ, ಮಾಹಿತಿ ಹಕ್ಕಿನಡಿ ಬಹಿರಂಗ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
Published 28 ಫೆಬ್ರುವರಿ 2024, 5:54 IST
Last Updated 28 ಫೆಬ್ರುವರಿ 2024, 5:54 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸಾರ್ವಜನಿಕ ಪ್ರಕಟಣೆಯನ್ನೇ ನೀಡದೆ ಪ್ರಸಾರಾಂಗ ಸಹಾಯಕ ನಿರ್ದೇಶಕರ ಹುದ್ದೆ ಭರ್ತಿ ಮಾಡಿದೆ. ಕೇವಲ ಇಪ್ಪತ್ತು ದಿನಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೇವಲ 6 ದಿನಗಳ ಅವಕಾಶ ನೀಡಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ 51 ವರ್ಷದ ಮುನಿಸ್ವಾಮಿ ಎಂಬುವರನ್ನು ನೇರ ನೇಮಕ
ಮಾಡಿದೆ.

ಅಧಿಸೂಚನೆಯಲ್ಲಿ ಏನಿತ್ತು: ₹ 43,100– ₹ 83,900 ವೇತನ ಶ್ರೇಣಿಯ ಹುದ್ದೆಗೆ 2023ರ ಜ.12ರಂದು ಅಧಿಸೂಚನೆ ಹೊರಡಿಸಿತ್ತು. ಮಾನ್ಯತೆಯಿರುವ ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡ ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು ಹಾಗೂ ಕೆಎಸ್‌ಒಯುನಲ್ಲಿ ಕಾಯಂ ಆಗಿರುವ ಅಧ್ಯಾಪಕೇತರ ಸಿಬ್ಬಂದಿಯೂ ಅರ್ಜಿ ಸಲ್ಲಿಸಬಹುದೆಂದು ತಿಳಿಸಲಾಗಿತ್ತು. ಕರಡಚ್ಚು ಪರಿಶೀಲನೆ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ದಾಖಲೆ ನೀಡಬೇಕೆಂದು ತಿಳಿಸಿತ್ತು.

ಕರ್ನಾಟಕ ಲೋಕಸೇವಾ ಆಯೋಗದ ನಿಯಮಾವಳಿ ಪ್ರಕಾರ ಅಧಿಸೂಚನೆ ಹೊರಡಿಸಿದ ನಂತರ 1 ತಿಂಗಳ ಕಾಲಮಿತಿಯನ್ನು ಅರ್ಜಿ ಸಲ್ಲಿಸುವವರಿಗೆ ನೀಡಬೇಕು. ವಯೋಮಿತಿ 2 ಎ, ಬಿ, 3 ಎ, ಬಿ ವರ್ಗದವರಿಗೆ 38 ವರ್ಷ, ಪರಿಶಿಷ್ಟ ಹಾಗೂ ಪ್ರವರ್ಗ 1ಕ್ಕೆ 40 ವರ್ಷವಿದೆ. ಆದರೆ, ಈ ನಿಯಮಾವಳಿ ಉಲ್ಲಂಘಿಸಿರುವ ಕೆಎಸ್‌ಒಯು, 2023ರ ಜ.18ರೊಳಗೆ (6 ದಿನದ ಒಳಗೆ) ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ. ಅಲ್ಲದೇ 3 ‘ಎ’ ಮೀಸಲಾತಿಯಲ್ಲಿ 51 ವರ್ಷದ ಮುನಿಸ್ವಾಮಿ ಅವರಿಗೆ ಹುದ್ದೆ ನೀಡಿದೆ.

ಕಾಯಂ ಆಗಿ 6 ತಿಂಗಳ ಒಳಗೇ ಹುದ್ದೆ: 2003ರ ಫೆ.15ರಂದು ಮುನಿಸ್ವಾಮಿ ಅವರಿಗೆ ಲಿಪಿಕ ಸಹಾಯಕ ತಾತ್ಕಾಲಿಕ ಹುದ್ದೆ ನೀಡಲಾಗಿತ್ತು. 10 ವರ್ಷ ಸೇವೆ ಪೂರೈಸಿದ ನೌಕರರಿಗೆ ಕಾಯಂ ಪಟ್ಟಿಯನ್ನು ಅನುಮೋದಿಸಿರುವ ಬಗ್ಗೆ ಕುಲಪತಿಗಳು 2022ರ ಆ.1ರಂದು ಜ್ಞಾಪನಾ ಪತ್ರ ಹೊರಡಿಸಿದ್ದರು. ಅದರಲ್ಲಿ ಮುನಿಸ್ವಾಮಿ ಅವರ ಹೆಸರೂ ಇತ್ತು. ಅವರು ಕಾಯಂ ಆದ ಆರು ತಿಂಗಳ ಒಳಗೆ ಪ್ರಸಾರಂಗ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ.

ಪೊಲೀಸರಿಗೆ ದೂರು: ನಗರದ ನಿವಾಸಿ ಸತ್ಯನಾರಾಯಣ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿಯಿಂದ ಈ ವಿಷಯಗಳು ಬಹಿರಂಗಗೊಂಡಿವೆ.

‘ಮುನಿಸ್ವಾಮಿಯವರು ಸಲ್ಲಿಸಿರುವ ಸೇವಾಪ್ರಮಾಣ ಪತ್ರ ಹಾಗೂ ಅದನ್ನು ಅವರಿಗೆ ನೀಡಿರುವ ನಗರದ ರಾಜೇಂದ್ರ ಮುದ್ರಣಾಲಯದ ವಿರುದ್ಧ ತನಿಖೆ ನಡೆಸಬೇಕು’ ಎಂದು ಅವರು ನಗರ ಪೊಲೀಸ್‌ ಆಯುಕ್ತರಿಗೆ ಮಂಗಳವಾರ ದೂರನ್ನೂ ಸಲ್ಲಿಸಿದ್ದಾರೆ.

‘ಹುದ್ದೆಯ ಅಧಿಸೂಚನೆ ಹೊರಡಿಸಿದ 10 ದಿನದಲ್ಲಿ ಮುನಿಸ್ವಾಮಿ ಅರ್ಹರೆಂದು 2023ರ ಜ.21ರಂದು ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಹೇಳಲಾಗಿದೆ. ಕುಲಪತಿ ಜ.31ರಂದು ಅನುಮೋದಿಸಿದ್ದಾರೆ. ಫೆ.1ರಂದು ಮುನಿಸ್ವಾಮಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತರಾತುರಿಯಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ಸತ್ಯನಾರಾಯಣ ತಿಳಿಸಿದರು.

‘ಮತ್ತೊಂದು ಹುದ್ದೆಗೆ ನೇಮಕವಾದಾಗ ಮುನಿಸ್ವಾಮಿಯವರು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಆದರೆ, ನೀಡಿಲ್ಲ. ಹೀಗಾಗಿ, ನೇಮಕಾತಿಯನ್ನು ಸರ್ಕಾರ ರದ್ದುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

‘ಅಧಿಸೂಚನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ, ನಂತರ ಕಾಯಂ ಅಧ್ಯಾಪಕೇತರ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಲಾಗಿದೆ. ಹೀಗಾಗಿಯೇ ಕೇವಲ 11 ಅರ್ಜಿಗಳು ಸಲ್ಲಿಕೆಯಾಗಿವೆ. ನೇಮಕಾತಿ ಸಮಿತಿಯನ್ನು ಕಾಟಾಚಾರಕ್ಕೆ ರಚಿಸಲಾಗಿತ್ತು’ ಎಂದು ಆಕ್ಷೇಪಿಸಿದರು.

ಇದು ಆಂತರಿಕ ನೇಮಕಾತಿ: ಕುಲಸಚಿವ

‘ನಿಯಮಾವಳಿಯಂತೆಯೇ ಪಾರದರ್ಶಕವಾಗಿ ಪ್ರಸಾರಾಂಗ ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಯಾವುದೇ ಲೋಪವಾಗಿಲ್ಲ’ ಎಂದು ಕೆಎಸ್‌ಒಯು ಕುಲಸಚಿವ ಪ್ರೊ.ಕೆಎಲ್ಎನ್ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಿಂದಲೇ ಅರ್ಜಿ ಆಹ್ವಾನಿಸಲಾಗಿತ್ತು. ಹೀಗಾಗಿ ಸಾರ್ವಜನಿಕವಾಗಿ ಪ್ರಕಟಣೆ ನೀಡಿಲ್ಲ. ಆಂತರಿಕ ನೇಮಕಾತಿ ಇದು. ವಿಶ್ವವಿದ್ಯಾಲಯದ ಸಿಬ್ಬಂದಿಯಲ್ಲಿಯೇ ಅರ್ಹರನ್ನು ಆಯ್ಕೆ ಮಾಡಲಾಗಿದೆ’ ಎಂದು ಪ್ರತಿಪಾದಿಸಿದರು

‘ನೇಮಕಾತಿ ಪ‍್ರಕ್ರಿಯೆ ತರಾತುರಿಯಲ್ಲಿ ನಡೆದಿದೆಯಲ್ಲ’ ಎಂಬ ಪ್ರಶ್ನೆಗೆ ‘ಹಾಗೇನಿಲ್ಲ’ ಎಂದಷ್ಟೇ ಹೇಳಿದರು.

3 ವರ್ಷ ಕರಡಚ್ಚು ತಿದ್ದಿದ ಅನುಭವ ಪ್ರಮಾಣ ಪತ್ರ ಸಲ್ಲಿಸಿ ರುವ ಮುನಿಸ್ವಾಮಿಯವರ ನೇಮಕ ಪ್ರಕರಣದ ತನಿಖೆ ನಡೆಸಬೇಕು.
–ಸತ್ಯನಾರಾಯಣ, ಮಾಹಿತಿ ಹಕ್ಕು ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT