ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50:50 ನಿವೇಶನ ಹಂಚಿಕೆ ಕಾನೂನುಬದ್ಧ: ಎಚ್‌.ವಿ.ರಾಜೀವ್

ಮುಡಾಕ್ಕೆ ಆಗುವ ನಷ್ಟ ತಪ್ಪಿಸಲು ಕ್ರಮ: ಎಚ್‌.ವಿ.ರಾಜೀವ್ ಸ್ಪಷ್ಟನೆ
Published 9 ಜುಲೈ 2024, 14:05 IST
Last Updated 9 ಜುಲೈ 2024, 14:05 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದಡಿ ನಿವೇಶನ ಹಂಚಿಕೆಯು ಕಾನೂನುಬದ್ಧವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್ ಪ್ರತಿಪಾದಿಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಡಾಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು, ಭೂ ಮಾಲೀಕರಿಗೆ ಕಚೇರಿ ಅಲೆದಾಟ ತಪ್ಪಿಸಲು ಪ್ರಾಧಿಕಾರದ ಸಭೆಯಲ್ಲಿ ಸದಸ್ಯರು ಚರ್ಚಿಸಿ ಸರ್ವಾನುಮತದಿಂದ 50:50 ಅನುಪಾತದಲ್ಲಿ ನಿವೇಶನ ಹಂಚುವ ನಿರ್ಣಯ ಕೈಗೊಳ್ಳಲಾಯಿತು’ ಎಂದರು.

‘2013ರ ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಶ್ರೀರಾಂಪುರದ ಸುಂದರಮ್ಮ ಹಾಗೂ ಮುಡಾ ವಿರುದ್ಧದ ಪ್ರಕರಣ, ಬೆಳ್ಳಿಯಪ್ಪ ಮತ್ತು ಬಿಡಿಎ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ ತೀರ್ಪು ಹಾಗೂ ಇಂದೋರ್‌ ಅಭಿವೃದ್ಧಿ ಪ್ರಾಧಿಕಾರ – ಮನೋಹರಲಾಲ್‌ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಆಧರಿಸಿ ನಿವೇಶನ ಹಂಚುವ ತೀರ್ಮಾನ ಮಾಡಲಾಗಿದೆ’ ಎಂದು ವಿವರಿಸಿದರು.

‘ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳದೇ ಅವರ ಜಮೀನನ್ನು ಬಡಾವಣೆಯಾಗಿ ಅಭಿವೃದ್ಧಿ ಪಡಿಸಿ, ಪರಿಹಾರವನ್ನೂ ಹಂಚಿಕೆ ಮಾಡದ ಹಲವು ಪ್ರಕರಣಗಳು ಮುಡಾದಲ್ಲಿದ್ದವು. ಪರಿಹಾರಕ್ಕಾಗಿ ಭೂ ಮಾಲೀಕರು ಕಚೇರಿಗೆ ಅಲೆಯುವಂತಾಗಿತ್ತು. ಶೇ 100ರಷ್ಟು ಜಮೀನನ್ನು ಮೂಲ ಮಾಲೀಕರಿಗೆ ವಾಪಸು ಮಾಡುವ ತೀರ್ಪನ್ನು ಹೈಕೋರ್ಟ್‌ ನೀಡಿದ್ದರಿಂದ ಮುಡಾಗೆ ಆಗುವ ಭಾರಿ ನಷ್ಟ ತಪ್ಪಿಸಲು ಸಭೆಯು ಈ ನಿರ್ಧಾರ ಮಾಡಿತ್ತು’ ಎಂದು ಹೇಳಿದರು.

ಆರೋಪ ಸತ್ಯಕ್ಕೆ ದೂರ: ‘50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ₹ 4 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆಯೆಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇದು ಸತ್ಯಕ್ಕೆ ದೂರ’ ಎಂದು ರಾಜೀವ ಹೇಳಿದರು.

ಸರ್ಕಾರಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಬರೆದಿದ್ದ ಪತ್ರಗಳಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜೀವ್, ‘ಪ್ರಾಧಿಕಾರದ ಸಭಾ ನಿರ್ಣಯವು ಎಲ್ಲರದ್ದು. ಅಸಮಾಧಾನವಿದ್ದರೆ ಮುಂದಿನ ಸಭೆಯಲ್ಲಿ ಹೇಳುವ ಹಕ್ಕು ಸದಸ್ಯರಿಗೆ ಇರುತ್ತದೆ. ಸಭೆಯ ನಿರ್ಣಯವನ್ನೂ (ಅಜೆಂಡಾ) ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿತ್ತು. ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಸಭಾ ನಿರ್ಣಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿಲ್ಲ. ಯಾಕೆಂದರೆ ಅದು ಕಾನೂನುಬದ್ಧ ತೀರ್ಮಾನ’ ಎಂದರು.

‘ನಾನು ಅಧ್ಯಕ್ಷನಾಗಿದ್ದಾಗ ಎಂಟು ವಿಷಯಗಳು ಸಭೆಯ ಮುಂದೆ ಬಂದಿದ್ದವು. ಅವುಗಳನ್ನು ಕಾನೂನು ಸಲಹೆ ಪಡೆದು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಅಧಿಕಾರಿಗಳು ಅನುಷ್ಠಾನದಲ್ಲಿ ಲೋ‍ಪ ಎಸಗಿರಬಹುದು. ಸರ್ಕಾರ ತನಿಖೆ ನಡೆಸಿ ಕ್ರಮ ವಹಿಸಬಹುದು. ಅದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದರು.

‘ಸಿದ್ದರಾಮಯ್ಯ ಪತ್ನಿಗೆ ನೀಡಿದ ನಿವೇಶನವು ಕಾನೂನುಬದ್ಧವೆ’ ಎಂಬ ಪ್ರಶ್ನೆಗೆ, ‘ನಾನು ಪ್ರತಿ ಪ್ರಕರಣವನ್ನು ವೈಯಕ್ತಿಕವಾಗಿ ಪರಿಶೀಲಿಸಿಲ್ಲ. 10 ದಿನಗಳಿಂದ 50:50 ಅನುಪಾತದಡಿ ನಿವೇಶನ ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. ಅದರ ಬಗ್ಗೆಯಷ್ಟೇ ಉತ್ತರಿಸುವೆ’ ಎಂದರು.

ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗೂ ಕಳುಹಿಸಲಾಗಿತ್ತು ಡಿ.ಸಿ ಅಧ್ಯಕ್ಷರಾಗಿದ್ದಾಗ ಸಭಾ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಲೋಪ ನಡೆದಿದ್ದರೆ ತನಿಖೆಯಿಂದ ಬೆಳಕಿಗೆ ಬರಲಿ

ಭೂಸ್ವಾಧೀನ ಕಾಯ್ದೆ ಕೋರ್ಟ್‌ ತೀರ್ಪು ಆಧರಿಸಿಯೇ ಮುಡಾ ಸಭೆ ನಿರ್ಣಯ ಕೈಗೊಂಡಿದೆ. ಅದರ ಅನುಷ್ಠಾನದಲ್ಲಿ ಅಧಿಕಾರಿಗಳು ತಪ್ಪೆಸಗಿದ್ದರೆ ಅದಕ್ಕೆ ಕಾನೂನುಕ್ರಮ ಇದ್ದೇ ಇದೆ

–ಎಚ್‌.ವಿ.ರಾಜೀವ ಮುಡಾ ಮಾಜಿ ಅಧ್ಯಕ್ಷ

ತನಿಖೆ ಸಿಬಿಐಗೆ ವಹಿಸಿ: ಯದುವೀರ್

‘ಮುಡಾ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಬೇಕು’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಪ್ರಕರಣ ಗಂಭೀರವಾಗಿದ್ದು ಪ್ರಭಾವಿಗಳ ಹೆಸರು ಕೇಳಿಬಂದಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು’ ಎಂದರು. ‘ಜನರ ಒಳಿತಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಥಾಪಿಸಿದ್ದ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯೇ ಈಗ ಪ್ರಾಧಿಕಾರವಾಗಿದೆ. ನಿವೇಶನ ಸೂರು ವಂಚಿತ ಜನರಿಗೆ ಸೌಲಭ್ಯ ಕಲ್ಪಿಸುವುದು ಅದರ ಜವಾಬ್ದಾರಿ. ಮುಡಾ ಸಭೆಯಲ್ಲಿ ಭಾಗವಹಿಸಿದಾಗ ಈ ಬಗ್ಗೆ ಪ್ರಸ್ತಾಪಿಸುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT