ನಾಗರಹೊಳೆಯ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕ್ಯಾಂಪ್‌ನಲ್ಲಿ ಉದ್ಘಾಟನೆಗೆ ಸಜ್ಜಾದ ಅರ್ಜುನ ಸ್ಮಾರಕ –ಪ್ರಜಾವಾಣಿ ಚಿತ್ರ
ಮೈಸೂರು: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ, ದಸರಾ ಅಂಬಾರಿ ಆನೆ ‘ಅರ್ಜುನ’ನ ಸ್ಮಾರಕವನ್ನು ನಾಗರಹೊಳೆ ಅರಣ್ಯದ ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ನಿರ್ಮಿಸಿದ್ದು, ಜೂನ್ 23ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ.
ADVERTISEMENT
ADVERTISEMENT
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ 2023ರ ಡಿಸೆಂಬರ್ 4ರಂದು ಸಾವನ್ನಪ್ಪಿದ ‘ಕ್ಯಾಪ್ಟನ್’ ಅರ್ಜುನನನ್ನು ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಗಿತ್ತು. ಸಮಾಧಿ ಮತ್ತು ಅದು ವಾಸವಾಗಿದ್ದ ಬಳ್ಳೆ ಶಿಬಿರದಲ್ಲಿ ಆನೆಯ ಪ್ರತಿಕೃತಿಯುಳ್ಳ ಸ್ಮಾರಕ ನಿರ್ಮಿಸಿದ್ದು, ಮೊದಲಿಗೆ ಬಳ್ಳೆಯ ಸ್ಮಾರಕ ಅನಾವರಣಗೊಳ್ಳಲಿದೆ.
ದಸರಾ ಆನೆ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರೆವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಎಂಟು ಬಾರಿ ಹೊತ್ತ ಕೀರ್ತಿ ಅರ್ಜುನನದ್ದು.
ಈ ಆನೆಯನ್ನು 1968ರಲ್ಲಿ ‘ಖೆಡ್ಡಾ’ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 22 ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. 2012ರಿಂದ 2019ರವರೆಗೆ, ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ (ವಿಜಯದಶಮಿ ಮೆರವಣಿಗೆ)ಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸಿ ಸೈ ಎನಿಸಿಕೊಂಡಿತ್ತು. ಆನೆ ಪ್ರಿಯರ ಪ್ರೀತಿಗೆ ಪಾತ್ರವಾಗಿತ್ತು.
ADVERTISEMENT
65 ವರ್ಷದ ‘ಅರ್ಜುನ’ ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿತ್ತು. 60 ವರ್ಷ ವಯಸ್ಸು ದಾಟಿದ ನಂತರ, ಚಿನ್ನದ ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿ ನೀಡಲಾಗಿತ್ತು. 5,800 ಕೆ.ಜಿ. ತೂಕದ ಈ ಆನೆಯನ್ನು ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು.