ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳ ವಿಚಾರಗಳಲ್ಲಿ ರಾಜ್ಯಪಾಲರನ್ನು ಹೊರಗಿಡಿ: ಬಿ.ಕೆ.ಚಂದ್ರಶೇಖರ್‌

ಕಾಂಗ್ರೆಸ್ ಮುಖಂಡ
Last Updated 6 ಜನವರಿ 2023, 11:09 IST
ಅಕ್ಷರ ಗಾತ್ರ

ಮೈಸೂರು: ‘ಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಪಾಲರನ್ನು ಹೊರಗಿಡಬೇಕು’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ರಾಜ್ಯಪಾಲರು ಕೆಲವು ರಾಜ್ಯ ಸರ್ಕಾರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ಬಿಜೆಪಿಯೇತರ ಸರ್ಕಾರವಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ವಿಪರೀತಕ್ಕೆ ಹೋಗಿದೆ. ವಿಶ್ವವಿದ್ಯಾಲಯಗಳ ಮೇಲೆ ಅನಗತ್ಯ ಹಿಡಿತ ಸಾಧಿಸುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಹೇಳಿದರು.

‘ಕುಲಪತಿಗಳ ನೇಮಕದ ಅಧಿಕಾರವನ್ನು ರಾಜ್ಯಪಾಲರಿಗೆ ನೀಡುವುದು ಸರಿಯಲ್ಲ. ಸಚಿವರನ್ನು ತೆಗೆದು ಹಾಕಿ ಎಂದು ಕುಲಪತಿಗಳು ಹೇಳುವುದೂ ದೊಡ್ಡ ತಪ್ಪು. ಅದಕ್ಕೆ ಅವಕಾಶ ಇರಬಾರದು. ಸರ್ಕಾರ ಯಾವುದೇ ಇದ್ದರೂ ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳ ವಿಷಯದಲ್ಲಿ ಮೂಗು ತೂರಿಸಬಾರದು’ ಎಂದು ತಿಳಿಸಿದರು.

ಹಿಂದೆಂದೂ ಕಂಡಿಲ್ಲ: ‘ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ಅಲ್ಲಿನ ರಾಜ್ಯಪಾಲರು ಪ್ರತಿ ವಿಷಯದಲ್ಲೂ ಕೊಕ್ಕೆ ಹಾಕುತ್ತಿದ್ದಾರೆ. ಇದೆಲ್ಲವೂ ಸಂಪ್ರದಾಯಕ್ಕೆ ವಿರುದ್ಧವಾದುದು. ಕೇರಳದಲ್ಲಿ ಕುಲಪತಿಗಳ ನೇಮಕಕ್ಕೆ ಅಲ್ಲಿನ ಸರ್ಕಾರ ಶಿಫಾರಸು ಮಾಡಿದರೆ ರಾಜ್ಯಪಾಲರು ಕ್ರಮ ವಹಿಸಲಿಲ್ಲ. ಕುಲಪತಿಗಳ ನೇಮಕಾತಿ ಸರಿಯಾಗಿ ನಡೆದೇ ಇಲ್ಲ ಎಂದೂ ಹೇಳಿದ್ದರು. ಇದೆಲ್ಲವೂ ಕೆಟ್ಟ ಸಂಪ್ರದಾಯವಾಗಿದೆ. ಇಂಥ ಬೆಳವಣಿಗೆಯನ್ನು ಹಿಂದೆಂದೂ ನೋಡಿಲ್ಲ’ ಎಂದು ಹೇಳಿದರು.

‘ಕುಲಪತಿಯಾಗಲು ₹ 5 ಕೋಟಿ, ₹ 6 ಕೋಟಿ ದುಡ್ಡು ತೆಗೆದುಕೊಂಡರೆ ಆತ ಏನಾಗುತ್ತಾನೆ? ಬೇರೆ ವ್ಯವಹಾರ ಮಾಡಲೇಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಗೆ ರಚಿಸುವ ಶೋಧನಾ ಸಮಿತಿಯಲ್ಲಿ ಹೆಸರು ತರುವುದಕ್ಕೂ ಲಾಬಿ ನಡೆಯುತ್ತಿದೆ’ ಎಂಬ ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ನನ್ನ ಸಹಮತವಿದೆ’ ಎಂದು ತಿಳಿಸಿದರು.

‘ಕುಲಪತಿಗಳ ನೇಮಕಕ್ಕೆ ಶೋಧನಾ ಸಮಿತಿಯಲ್ಲಿ ಐಐಟಿ, ಐಐಎಸ್‌ಸಿಯಂತಹ ಸಂಸ್ಥೆಗಳವರು ಇರಬೇಕು. ಆಗ, ಸರ್ಕಾರದ ಹಾಗೂ ರಾಜ್ಯಪಾಲರ ಹಿಡಿತ ಹೋಗುತ್ತದೆ’ ಎಂದರು.

‘ಸದ್ಯ ಕುಲಪತಿಗಳ ವಿಷಯದಲ್ಲಿ ಜಾತಿ, ಮತ, ಹಣದ ಪ್ರಭಾವ ಬಳಸಲಾಗುತ್ತಿದೆ. ಇದು ವಿಷಾದದ ಸಂಗತಿಯಾಗಿದೆ’ ಎಂದು ಹೇಳಿದರು.

‘ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಸುಪ್ರೀಂ ಕೋರ್ಟ್‌ ಹೇಗೆ ಕೆಲಸ ಮಾಡಬೇಕು ಎಂದು ಬುದ್ಧಿವಾದ ಹೇಳಿರುವುದು, ಸಾರ್ವಜನಿಕವಾಗಿ ಮಾತನಾಡುವುದು ಖಂಡನೀಯ’ ಎಂದರು.

‘ಈ ಸರ್ಕಾರದಲ್ಲಿ ವೈಚಾರಿಕವಾಗಿ ದಾಳಿ ನಡೆಸಲಾಗುತ್ತಿದೆ. ಸಿಬಿಐ ನಪುಸಂಕ ಸಂಸ್ಥೆಯಾಗಿದೆ‌. ಜಾರಿ‌ ನಿರ್ದೇಶನಾಲಯವನ್ನು ತಮ್ಮ ಉದ್ದೇಶ ಈಡೇರಿಕೆಗಾಗಿ ದಾಳಿಗೆ ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗವೂ ಸರಿಯಾದ ದಿಕ್ಕಿನಲ್ಲಿ ‌ಹೋಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ವಕ್ತಾರ ಮಹೇಶ್ ಇದ್ದರು.

ಆತಂಕಕಾರಿ ಬೆಳವಣಿಗೆ
ತಮಗೆ ನಿರ್ಬಂಧವೇ ಇಲ್ಲ ಎನ್ನುವಂತೆ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.
–ಪ್ರೊ.ಬಿ.ಕೆ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT