ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರಜ್‌ ಸಾಹು ಬಂಧನಕ್ಕೆ ಬಿಜೆಪಿ ಆಗ್ರಹ

ಗಾಂಧಿ ವೃತ್ತದಲ್ಲಿ ಪ್ರತಿಭಟನೆ l ಕಾಂಗ್ರೆಸ್‌ನಿಂದ ಭ್ರಷ್ಟಾಚಾರ: ಆರೋಪ
Published 11 ಡಿಸೆಂಬರ್ 2023, 17:12 IST
Last Updated 11 ಡಿಸೆಂಬರ್ 2023, 17:12 IST
ಅಕ್ಷರ ಗಾತ್ರ

ಮೈಸೂರು: ಮನೆಯಲ್ಲಿ ಕೋಟಿಗಟ್ಟಲೆ ಅಕ್ರಮ ಹಣವಿಟ್ಟಿದ್ದ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಧೀರಜ್‌ ‍ಪ್ರಸಾದ್‌ ಸಾಹು ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದರು.

ಮುಖಂಡ ಎಲ್‌.ನಾಗೇಂದ್ರ ಮಾತನಾಡಿ, ‘ಕಾಂಗ್ರೆಸ್‌ನ ಧೀರಜ್ ಸಾಹು ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ₹ 300 ಕೋಟಿ ಪತ್ತೆಯಾಗಿದೆ. ಇಷ್ಟೊಂದು ಹಣ ಸಿಕ್ಕಿರುವುದು ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ತೋರಿಸುತ್ತದೆ. ಈ ಬಗ್ಗೆ ಆ ಪಕ್ಷದ ವರಿಷ್ಠರು ಇದುವರೆಗೂ ಮಾತನಾಡಿಲ್ಲ. ಅದು ಭ್ರಷ್ಟಾಚಾರದ ಬಗ್ಗೆ ಇರುವ ಕಾಳಜಿಯಾಗಿದೆ’ ಎಂದು ವ್ಯಂಗ್ಯವಾಡಿದರು. 

‘ಸ್ವಾತಂತ್ರ್ಯ ನಂತರ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌, ಹಗರಣ ಸರಮಾಲೆಯನ್ನೇ ಹೊದ್ದಿದೆ. ‌ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಬಯಲಾಗುತ್ತಿದೆ’ ಎಂದರು.

ಮುಖಂಡ ಎಸ್‌.ಮಹದೇವಯ್ಯ ಮಾತನಾಡಿ, ‘ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಸಂಸದರ ಮನೆಯಲ್ಲಿ ಸಿಕ್ಕಿಬಿದ್ದಿರುವ ಹಣದ ಮೂಲವನ್ನು ಸಾರ್ವಜನಿಕರಿಗೆ ತಿಳಿಸಲಿ’ ಎಂದು ಆಗ್ರಹಿಸಿದರು. 

ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ‘ಸಂಸದರ ಮನೆಯಲ್ಲಿ ಇಷ್ಟೊಂದು ಹಣ ಸಿಕ್ಕಿದರೆ ಅಂದರೆ ಕಪ್ಪು ಹಣ ಆಗಿದೆ. ಕಾಂಗ್ರೆಸ್ ಕೂಡಲೇ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು. ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಹಣ ಸಂಗ್ರಹದಲ್ಲಿರುವ ಇತರರನ್ನೂ ಪತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು. 

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕೋಟೆ ಎಂ.ಶಿವಣ್ಣ, ಎನ್.ಆರ್.ಕೃಷ್ಣಪ್ಪಗೌಡ, ಯಶಸ್ವಿ ಎಸ್.ಸೋಮಶೇಖರ್, ಎಲ್.ಆರ್.ಮಹದೇವಸ್ವಾಮಿ, ಮಿರ್ಲೆ ಶ್ರೀನಿವಾಸಗೌಡ, ಆರ್.ರವೀಂದ್ರ, ರಂಗಸ್ವಾಮಿ, ಪ್ರಮೀಳಾ ಭರತ್, ಬಿ.ವಿ.ಮಂಜುನಾಥ್, ದೇವನೂರು ಪ್ರತಾಪ್, ಸುರೇಶ್‌ಬಾಬು, ಎಚ್.ಜಿ.ಗಿರಿಧರ್, ವಾಣೀಶ್‌ ಕುಮಾರ್, ವಿ.ಸೋಮಸುಂದರ್, ಎಸ್.ಲಕ್ಷ್ಮೀದೇವಿ, ಮುಖಂಡರಾದ ಜಗದೀಶ್, ಕೆ.ಜೆ.ರಮೇಶ್, ಸು.ಮುರುಳಿ, ಮೈ.ಕಾ.ಪ್ರೇಮಕುಮಾರ್, ಸಪ್ನ ಶೇಖರ್, ಪುಷ್ಪಾವತಿ, ರೇಣುಕಾರಾಜ್ ಪಾಲ್ಗೊಂಡಿದ್ದರು.

Highlights - ಕಾಂಗ್ರೆಸ್‌ ಎಂದರೆ ಹಗರಣ ಮೋದಿಯಿಂದ ಭ್ರಷ್ಟಾಚಾರ ಬೆಳಕಿಗೆ ಪ್ರಕರಣದ ಬಗ್ಗೆ ವರಿಷ್ಠರು ಮಾತನಾಡಲಿ

Cut-off box - ‘ಸುಪ್ರೀಂ’ ತೀರ್ಪಿಗೆ ಸಂಭ್ರಮ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸು‍ಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದಕ್ಕೆ ಸಂಭ್ರಮಾಚರಿಸಿದರು. ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ತೀರ್ಪು ಹೊರಬರುತ್ತಿದ್ದಂತೆ ಪಕ್ಷ ಹಾಗೂ ನಾಯಕರ ಪರ ಘೋಷಣೆ ಕೂಗಿದರು. ಎಲ್‌.ನಾಗೇಂದ್ರ ‘ಕೇಂದ್ರದ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಿದ್ದವರಿಗೆ ಸುಪ್ರೀಂ ಕೋರ್ಟ್‌ ತೀರ್ಪು ನಿರಾಸೆಯಾಗಿದೆ. ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೇಂದ್ರದ ಬದ್ಧತೆಗೆ ನ್ಯಾಯಾಲಯವೂ ಮನ್ನಣೆ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.  ಕೋಟೆ ಎಂ. ಶಿವಣ್ಣ ಮಾತನಾಡಿ ‘ಕಾಶ್ಮೀರದ ಪರಿಸ್ಥಿತಿ ಕೆಟ್ಟದಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಮಿತ್‌ ಶಾ ದೂರದೃಷ್ಟಿಯಿಂದ ಕಾಶ್ಮೀರಿಗರಿಗೆ ಹಾಗೂ ದೇಶಕ್ಕೆ ಒಳ್ಳೆಯದಾಗಿದೆ. ಉಗ್ರಗಾಮಿಗಳ ಚಟುವಟಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ’ ಎಂದರು. 

Cut-off box - ‘ಎಲ್ಲರಿಗೂ ಸಂತಸ’ ಮೈಸೂರು: ‘ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಪುರಸ್ಕರಿಸಿರುವುದು 140 ಕೋಟಿ ಜನರಿಗೆ ಸಂತಸ ತಂದಿದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ‘370ನೇ ವಿಧಿ ಮರು ಜಾರಿಗೊಳಿಸುವುದಾಗಿ ಹೇಳಿದ ಕಾಂಗ್ರೆಸ್‌‍ಗೆ ಮುಖಭಂಗವಾಗಿದೆ. ರದ್ಧತಿಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ. ಕಾರಣರಾದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT