ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ–ಜೆಡಿಎಸ್‌ ‘ಮೈಸೂರು ಚಲೋ’ಗೆ ಪ್ರತಿಯಾಗಿ ಗಟ್ಟಿ ಹೋರಾಟ: ಸಿಎಂ ಸೂಚನೆ

Published 3 ಆಗಸ್ಟ್ 2024, 13:21 IST
Last Updated 3 ಆಗಸ್ಟ್ 2024, 13:21 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ತಮ್ಮ ಮನೆಯಲ್ಲಿ ಕೆಲ ಸಚಿವರು ಹಾಗೂ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಹಾಗೂ ಮುಖಂಡರೊಂದಿಗೆ ಶನಿವಾರ ಉಪಾಹಾರ ಸಭೆ ನಡೆಸಿದ್ದು, ‘ಬಿಜೆಪಿ–ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ನಮ್ಮ ಪಕ್ಷದಿಂದಲೂ ಹೋರಾಟವನ್ನು ಗಟ್ಟಿಯಾಗಿ ಸಂಘಟಿಸಬೇಕು’ ಎಂದು ಸೂಚಿಸಿದ್ದಾರೆ.

‘ವಿರೋಧ ಪಕ್ಷದವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ದುರುದ್ದೇಶದಿಂದ ರಾಜ್ಯಪಾಲರನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ. ಬಹುಮತ ಪಡೆದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಇದನ್ನು ಖಂಡಿಸಿ ನಮ್ಮ ಕಡೆಯಿಂದಲೂ ಪ್ರತಿರೋಧ ವ್ಯಕ್ತವಾಗಬೇಕು. ಪ್ರತಿಪಕ್ಷದವರ ಕುತಂತ್ರದ ವಸ್ತುಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿಗೆ ತೊಂದರೆ ಕೊಟ್ಟರೆ ಸರ್ಕಾರವನ್ನು ಕೆಡವಬಹುದು ಎಂಬ ಕಾರಣದಿಂದ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರೇ ಸೃಷ್ಟಿಸಿರುವ ಬ್ಲಾಕ್‌ಮೇಲರ್‌ ಅನ್ನು ದೂರು ನೀಡಲು ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು’ ಎಂದು ತಿಳಿದುಬಂದಿದೆ.

‘136 ಮಂದಿ ಶಾಸಕರನ್ನೂ ಇಲ್ಲಿಗೆ ಕರೆಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂಬ ಸಲಹೆಯೂ ವ್ಯಕ್ತವಾಯಿತು’ ಎಂದು ಮೂಲಗಳು ತಿಳಿಸಿವೆ.

‘ಆ.9ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್‌ ಜನಾಂದೋಲನದಲ್ಲಿ ಕನಿಷ್ಠ 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಬೇಕು. ನಮ್ಮ ಸರ್ಕಾರವನ್ನು ಬೀಳಿಸಲು ಬಿಜೆಪಿ–ಜೆಡಿಎಸ್‌ನವರು ನಡೆಸುತ್ತಿರುವ ಹುನ್ನಾರವನ್ನು ಜನರಿಗೆ ತಿಳಿಸಬೇಕು. ಪ್ರಗತಿಪರರು, ರೈತ ಸಂಘಟನೆಯವರು ಮೊದಲಾದವರು ಭಾಗವಹಿಸಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಹಗರಣಗಳನ್ನು ಮನೆ ಮನೆಗೂ ಮುಟ್ಟಿಸಲು ಕಾರ್ಯಕರ್ತರು ಸಜ್ಜಾಗಬೇಕು. ಪ್ರತಿ ತಾಲ್ಲೂಕಿನಲ್ಲೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಶಾಸಕರು, ವಿಧಾನಪರಿಷತ್‌ ಸದಸ್ಯರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಮನೆಯಲ್ಲಿ ನಡೆದ ದಿಢೀರ್ ಸಭೆಯ ಕುರಿತು ಬೊಕ್ಕಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ‘ಮುಖ್ಯಮಂತ್ರಿ ಹಾಗೂ ಈ ಭಾಗದ ಪಕ್ಷದ ನಾಯಕರು ಸಭೆ ನಡೆಸಿ ಬಹಳ ದಿನಗಳಾಗಿದ್ದವು. ನೆರೆ ಹಾಗೂ ಅತಿವೃಷ್ಟಿ ಉಂಟಾಗಿರುವುದರಿಂದ ಜನರ ನೆರವಿಗೆ ದಾವಿಸಿ ಅವರ ಸಂಕಷ್ಟದಲ್ಲಿ ಭಾಗಿಯಾಗಬೇಕು ನಮಗೆಲ್ಲ ಸೂಚಿಸಿದರು’ ಎಂದು ತಿಳಿಸಿದರು.

‘ನಾಯಕರ ಸಭೆ ಎಂದ ಮೇಲೆ ರಾಜಕೀಯ ಚರ್ಚೆ ಆಗಿಯೇ ಆಗುತ್ತದೆ. ನೆರೆ, ಅಭಿವೃದ್ಧಿ, ವಿರೋಧಪಕ್ಷದವರ ಬೇಜವಾಬ್ದಾರಿತನದ ರಾಜಕೀಯ, ವ್ಯಕ್ತಿಗತ ಚಾರಿತ್ರ್ಯ ಹರಣಕ್ಕೆ ನಡೆದಿರುವ ಯತ್ನ ಮೊದಲಾದ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಬಿಜೆಪಿ–ಜೆಡಿಎಸ್‌ನವರಿಗೆ ಪ್ರತ್ಯುತ್ತರ ನೀಡುವುದಕ್ಕೆ ನಾವೂ ಸಿದ್ಧವಾಗಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT