ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಗಟ್ಟಿ ದನಿಯಾಗಿದ್ದ ಜನಸಂಘದ ಕಾರ್ಯಕರ್ತ 'ಶ್ರೀನಿವಾಸ ಪ್ರಸಾದ್'

Published 30 ಏಪ್ರಿಲ್ 2024, 6:40 IST
Last Updated 30 ಏಪ್ರಿಲ್ 2024, 6:40 IST
ಅಕ್ಷರ ಗಾತ್ರ

ಮೈಸೂರು: ವಿದ್ಯಾರ್ಥಿ ಆಗಿದ್ದಾಗಿನಿಂದಲೂ ವಿ. ಶ್ರೀನಿವಾಸ ಪ್ರಸಾದ್ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ಮೊದಲಿಗೆ ಜನಸಂಘದ ಕಾರ್ಯಕರ್ತರಾಗಿದ್ದ ಅವರು ನಂತರದಲ್ಲಿ ರಾಜಕೀಯದಲ್ಲಿ ದೊಡ್ಡ ನಾಯಕನಾಗಿ ಬೆಳೆದು ತಮ್ಮದೇ ಛಾಪು ಮೂಡಿಸಿದ್ದರು. ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟದಲ್ಲಿ ತೊಡಗಿದ್ದ ಅವರು, ದಲಿತರು–ದಮನಿತರ ಪರವಾದ ದಿಟ್ಟ ದನಿಯಾಗಿದ್ದರು.

‘ನಾನು ಯುವಕನಾಗಿದ್ದಾಗ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಜನ ಸಂಘದ ದೀನದಯಾಳ್ ಉಪಾಧ್ಯಾಯ ಹಾಗೂ ಜಗನ್ನಾಥ ಜೋಶಿ ಅಚ್ಚುಮೆಚ್ಚಿನ ನಾಯಕರಾಗಿದ್ದರು’ ಎಂದು ಹೇಳಿಕೊಳ್ಳುತ್ತಿದ್ದರು. ಮೈಸೂರಿನಲ್ಲಿ ನಡೆಯುತ್ತಿದ್ದ ಜಗನ್ನಾಥರಾವ್ ಜೋಶಿ ಅವರ ಸಭೆ–ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲಿ ಚರ್ಚಿಸಿದ ವಿಚಾರಗಳನ್ನು ಸಮಾಜದಲ್ಲಿ ಪ್ರಚಾರ ಮಾಡುವುದು ಅವರಿಷ್ಟದ ಕೆಲಸವಾಗಿತ್ತು.

ಜನ ಸಂಘದ ಸಭೆ, ಮೆರವಣಿಗೆ ಮತ್ತು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಚುನಾವಣೆಯಲ್ಲಿ ಏಜೆಂಟ್‌ ಆಗಿಯೂ ಕೆಲಸ ಮಾಡುತ್ತಿದ್ದರು. 1972ರವರೆಗೂ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು.

ಚುನಾವಣಾ ರಾಜಕಾರಣ ಪ್ರವೇಶ:

1973ರಲ್ಲಿ ಮೈಸೂರಿನಲ್ಲಿ ನಡೆದ ‘ಬೂಸಾ’ ಚಳವಳಿಯ ನೇತೃತ್ವ ವಹಿಸುವ ಮೂಲಕ ಮುಂಚೂಣಿಯಲ್ಲಿದ್ದರು. ಹೀಗೆ ಹೋರಾಟದ ಮೂಲಕ 1974ರಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣಾ ರಾಜಕಾರಣ ಪ್ರವೇಶಿಸಿದ್ದರು. ಆಕಸ್ಮಿಕವಾಗಿ ಚುನಾವಣೆ ಎದುರಿಸಿ ಸೋಲನುಭವಿಸಿದ್ದರು. ಆ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್‌ ಗೆದ್ದಿತ್ತು.

ಆಗ ಆ ಪಕ್ಷದ ಪ್ರಮುಖ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು ಸಂಪರ್ಕಿಸಿದ್ದರಂತೆ. ‘ಆಮಿಷಗಳಿಗೆ ಬಲಿಯಾಗದೇ ನಮ್ಮ ಜಯಕ್ಕೆ ನೀವೂ ಮುಖ್ಯ ಕಾರಣವಾಗಿದ್ದೀರಿ’ ಎಂದು ತಿಳಿಸಿದ್ದರಂತೆ. ‘ನೀವು ರಾಜಕೀಯದಲ್ಲಿ ಮುಂದುವರಿಯುವುದಾದರೆ ಆಡಳಿತ ಪಕ್ಷಕ್ಕೆ ಸೇರಬೇಡಿ, ವಿರೋಧ ಪಕ್ಷಕ್ಕೆ ಸೇರಿ. ಆಗ ನಿಮ್ಮ ಹೋರಾಟದ ಮನೋಭಾವ, ಸಂಘಟನಾ ಶಕ್ತಿ ಸಾರ್ಥಕವಾಗುತ್ತದೆ. ಸಂಸ್ಥಾ ಕಾಂಗ್ರೆಸ್‌ಗೆ ಬರುವುದಾದರೆ ನಿಮ್ಮ ಭವಿಷ್ಯದ ರಾಜಕೀಯದ ಬಗ್ಗೆ ನಾನೇ ಆಸಕ್ತಿ ವಹಿಸುತ್ತೇನೆ’ ಎಂದು ತಿಳಿಸಿದ್ದರಂತೆ. ಈ ಕಾರಣದಿಂದ ಸಂಸ್ಥಾ ಕಾಂಗ್ರೆಸ್ ಸೇರಿದ ಅವರಿಗೆ ಪಕ್ಷದಲ್ಲಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನ ದೊರೆತಿತ್ತು.

ಕಾರ್ಯಕಾರಿ ಸಮಿತಿಗೆ ಆಯ್ಕೆ:

1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಜಯಪ್ರಕಾಶ್ ನಾರಾಯಣ್ ನಾಯಕತ್ವದಲ್ಲಿ ಇತರ ವಿರೋಧ ಪಕ್ಷಗಳಾಗಿದ್ದ ಭಾರತೀಯ ಜನಸಂಘ, ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸ್ವತಂತ್ರ ಪಕ್ಷ ಹಾಗೂ ಭಾರತೀಯ ಲೋಕದಳ ವಿಲೀನಗೊಂಡು 1977ರಲ್ಲಿ ಜನತಾ ಪಕ್ಷ ಉದಯವಾಯಿತು. ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಯಿತು. ಕರ್ನಾಟಕ ರಾಜ್ಯದ ಜನತಾ ಪಕ್ಷದ ಅಧ್ಯಕ್ಷರಾಗಿ ವೀರೇಂದ್ರ ‍ಪಾಟೀಲ ನೇಮಕಗೊಂಡರು. ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಶ್ರೀನಿವಾಸ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿತ್ತು.

1977ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಮುಂದೆ ಜನತಾ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಯುವ ಜನತಾ ಘಟಕ ರಚನೆಯಾಯಿತು. ಅದರ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಸಾದ್ ನೇಮಕಗೊಂಡರು, ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದರು.

1978ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಿ. ನರಸೀಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಆದರೆ, ಜಯ ದೊರೆತಿರಲಿಲ್ಲ. ಮುಂದೆ ಜನತಾ ಪಕ್ಷ ಆಂತರಿಕ ಕಲಹದಿಂದ ಛಿದ್ರವಾದಾಗ ಪ್ರಸಾದ್ ಬಹಳ ನಿರಾಸೆಗೆ ಒಳಗಾಗಿದ್ದರು. ಬಳಿಕ ಆರ್‌.ಗುಂಡೂರಾವ್ ಅವರ ಸಲಹೆಯಂತೆ ಇಂದಿರಾ ಕಾಂಗ್ರೆಸ್‌ ಸೇರಿದರು.

ಮೊದಲ ಗೆಲುವು...

1980ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಗೆದ್ದರು. ಅಲ್ಲಿಂದ ಅವರ ರಾಜಕೀಯದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದದ್ದು ಇತಿಹಾಸ.

ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್– ಭಾಗ್ಯಲಕ್ಷ್ಮಿ ದಂಪತಿಯನ್ನು ಶಾಸಕ ಜಿ.ಟಿ. ದೇವೇಗೌಡ ಅಭಿನಂದಿಸಿದರು. ಸಾಹಿತಿ ಪ್ರಧಾನ ಗುರುದತ್ತ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಲೇಖಕ ಪ್ರೊ.ಸಿ.ನಾಗಣ್ಣ ಭಾರತ್‌ ಸ್ಕೌಟ್ಸ್‌ ಅಂಡ್ ಗೈಡ್ಸ್‌ ಆಯುಕ್ತ ಪಿಜಿಆರ್‌ ಸಿಂಧ್ಯಾ ಹಾಜರಿದ್ದರು (ಸಂಗ್ರಹ ಚಿತ್ರ)
ಮೈಸೂರಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್– ಭಾಗ್ಯಲಕ್ಷ್ಮಿ ದಂಪತಿಯನ್ನು ಶಾಸಕ ಜಿ.ಟಿ. ದೇವೇಗೌಡ ಅಭಿನಂದಿಸಿದರು. ಸಾಹಿತಿ ಪ್ರಧಾನ ಗುರುದತ್ತ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಲೇಖಕ ಪ್ರೊ.ಸಿ.ನಾಗಣ್ಣ ಭಾರತ್‌ ಸ್ಕೌಟ್ಸ್‌ ಅಂಡ್ ಗೈಡ್ಸ್‌ ಆಯುಕ್ತ ಪಿಜಿಆರ್‌ ಸಿಂಧ್ಯಾ ಹಾಜರಿದ್ದರು (ಸಂಗ್ರಹ ಚಿತ್ರ)
ವಿ. ಶ್ರೀನಿವಾಸ ಪ್ರಸಾದ್ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ (ಸಂಗ್ರಹ ಚಿತ್ರ)
ವಿ. ಶ್ರೀನಿವಾಸ ಪ್ರಸಾದ್ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ (ಸಂಗ್ರಹ ಚಿತ್ರ)
ಪದವಿಯಲ್ಲಿದ್ದಾಗ... ಶಾರದಾವಿಲಾಸ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುವಾಗ ವಿದ್ಯಾರ್ಥಿ ಪರಿಷತ್ತಿನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಆ ಪರಿಷತ್ತಿನಿಂದ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ವಿವಿಧ ಕ್ಷೇತ್ರದ ಪ್ರಮುಖರನ್ನು ಆಹ್ವಾನಿಸಲಾಗಿತ್ತು. ‘ನನ್ನ ವೃತ್ತಿ ಶ್ರೇಷ್ಠ’ ಎಂಬುದು ಅಂದಿನ ಚರ್ಚೆಯ ವಿಷಯವಾಗಿತ್ತು. ಅಲ್ಲಿ ಮಾತನಾಡಿದವರು ಅವರವರ ವೃತ್ತಿಯ ಶ್ರೇಷ್ಠತೆ ಬಗ್ಗೆ ವಾದ ಮಂಡಿಸಿದ್ದರು. ಅದು ಪ್ರಸಾದ್ ಅವರ ಮೇಲೆ ಪರಿಣಾಮ ಬೀರಿತ್ತು. ಯಾವುದೇ ಕ್ಷೇತ್ರದಲ್ಲಿದ್ದರೂ ವೃತ್ತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕು ಎಂದು ನಿರ್ಧರಿಸಿದ್ದರು. ಈ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದ ಅವರು ‘ನನಗೆ ರಾಜಕೀಯವು ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯ ಕ್ಷೇತ್ರವಾಗಿದೆ’ ಎಂದು ಹೇಳಿಕೊಳ್ಳುತ್ತಿದ್ದರು.
ಅನಾರೋಗ್ಯದ ಕಾರಣದಿಂದ...
ಚಾಮರಾಜನಗರ ಕ್ಷೇತ್ರದ ಹಾಲಿ ಸಂಸದರಾಗಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ನಡುವೆ ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ವನ್ನು ಮಾರ್ಚ್‌ನಲ್ಲಿ ಆಚರಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದರು. ಅದಾದ ನಂತರ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಮೈಸೂರಿನ ಜಯಲಕ್ಷ್ಮಿಪುರಂನ ತಮ್ಮ ನಿವಾಸ ‘ಭೀಮಸದನ’ದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯರಾಗಿರಲಿಲ್ಲ. ಆದರೆ ಅವರನ್ನು ರಾಜಕೀಯ ಪಕ್ಷದವರು ಭೇಟಿಯಾಗಿ ಬೆಂಬಲ ಕೋರುವುದನ್ನು ನಿಲ್ಲಿಸಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುನಿಸು ಮರೆತು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಕಾಂಗ್ರೆಸ್‌ಗೆ ಬೆಂಬಲವನ್ನೂ ಕೋರಿದ್ದರು. ಬಳಿಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕೂಡ ಭೇಟಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದರು. ಅದನ್ನು ನಯವಾಗಿ ತಿರಸ್ಕರಿಸಿದ್ದ ಪ್ರಸಾದ್ ತಮ್ಮ ಆರೋಗ್ಯ ಹದಗೆಟ್ಟಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT