ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2ನೇ ದಿನವೂ ಬಾರದ ಸಿಎಂ: ಬೊಕ್ಕಹಳ್ಳಿ ಗ್ರಾಮಸ್ಥರ ಆಕ್ರೋಶ

Published : 3 ಆಗಸ್ಟ್ 2024, 11:37 IST
Last Updated : 3 ಆಗಸ್ಟ್ 2024, 11:37 IST
ಫಾಲೋ ಮಾಡಿ
Comments

ಮೈಸೂರು: ಕಪಿಲಾ ನದಿ ಪ್ರವಾಹದಿಂದ ಹಾನಿ ಅನುಭವಿಸುತ್ತಿರುವ, ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗ್ರಾಮಕ್ಕೆ ಬಂದು ಕುಂದುಕೊರತೆ ಆಲಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯು ಶನಿವಾರ ಬೆಳಿಗ್ಗೆ 9.30ರ ಸುಮಾರಿಗೆ ಗ್ರಾಮಕ್ಕೆ ಭೇಟಿ ನೀಡುತ್ತಾರೆ; ಸಂತ್ರಸ್ತರ ಅಹವಾಲು ಆಲಿಸುತ್ತಾರೆ ಎಂದು ತಿಳಿಸಲಾಗಿತ್ತು. ಇದಕ್ಕಾಗಿ ಅಗತ್ಯ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು, ಮಾಧ್ಯಮ ಪ್ರತಿನಿಧಿಗಳು ಬಂದಿದ್ದರು. ಆದರೆ, ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಗ್ರಾಮಕ್ಕೆ ಬರಲಿಲ್ಲ. ಇದೇ ರೀತಿಯ ಸಿದ್ಧತೆಯನ್ನು ಶುಕ್ರವಾರವೂ ಮಾಡಿಕೊಳ್ಳಲಾಗಿತ್ತು. ಅಂದೂ ಕೊನೆ ಕ್ಷಣದಲ್ಲಿ ಪ್ರವಾಸ ಕಾರ್ಯಕ್ರಮ ರದ್ದಾಗಿತ್ತು.

ಕಾಳಜಿ ಕೇಂದ್ರದಲ್ಲಿ ಗಂಟೆಗಟ್ಟಲೆ ಕುಳಿತು ಕಾಯುತ್ತಿದ್ದ ಸಂತ್ರಸ್ತರು, ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರು 2ನೇ ದಿನವೂ ಬಾರದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಕಪಿಲಾ ನದಿ ಪ್ರವಾಹದಿಂದ ನಾವು ತೊಂದರೆ ಅನುಭವಿಸುತ್ತಲೇ ಬಂದಿದ್ದೇವೆ. ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಿದಾಗಲೆಲ್ಲಾ ನಮಗೆ ನಷ್ಟ ಉಂಟಾಗುತ್ತಲೇ ಇದೆ. ಹೀಗಾಗಿ, ಗ್ರಾಮವನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಮನೆ, ಬೆಳೆ ಹಾನಿಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಲು ಕಾಯುತ್ತಿದ್ದೆವು. ಅವರು ಬಾರದಿದ್ದರಿಂದ ಬಹಳ ಬೇಸರವಾಯಿತು’ ಎಂದು ಕಾಳಜಿ ಕೇಂದ್ರದಲ್ಲಿದ್ದವರು ಹಾಗೂ ರೈತರು ತಿಳಿಸಿದರು. ಕೆಲವು ಮಹಿಳೆಯರು, ‘ನಮ್ಮ ಮನೆ ಹಾಳಾಗಿದೆ; ನಮಗೆ ನೆರವಾಗುವವರಾರು?’ ಎಂದು ಕಣ್ಣೀರಿಟ್ಟರು.

‘ಮುಖ್ಯಮಂತ್ರಿ ಬರುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಪ್ರವಾಹ ಬಂದಾಗಲೆಲ್ಲಾ ಮನೆಗಳು ಮುಳುಗಡೆ ಆಗುವುದರಿಂದ ಜನರು ಕಾಳಜಿ ಕೇಂದ್ರಕ್ಕೆ ಬರುವುದು ವಾರ ಅಥವಾ 15ದಿನಗಳ ನಂತರ ಮನೆಗೆ ಹೋಗುವುದರಿಂದ ನೆಮ್ಮದಿ ಇಲ್ಲದಂತಾಗಿದೆ. ಪ್ರವಾಹದಿಂದ ನಮ್ಮ ಜಮೀನುಗಳು ಹಾಳಾಗುತ್ತಿವೆ. ಶಿಥಿಲಗೊಂಡ ಮನೆಗಳಲ್ಲಿ ಆತಂಕದಲ್ಲೇ ಜೀವನ ನಡೆಸುವಂತಾಗಿದೆ. ಹೀಗಾಗಿ, ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಮನಹರಿಸಬೇಕು’ ಎಂದು ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ ಒತ್ತಾಯಿಸಿದರು.

ಮಧ್ಯಾಹ್ನ ಬಂದ ಸಚಿವ:

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್‌ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಮಧ್ಯಾಹ್ನ ಆಗಮಿಸಿ ಜನರ ಅಹವಾಲುಗಳನ್ನು ಆಲಿಸಿದರು.

ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿನ ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ತರ ಕುಂದುಕೊರತೆಗಳನ್ನು ಆಲಿಸಿದರು. ‘ಗ್ರಾಮಸ್ಥರ ಮನವಿ ಮೇರೆಗೆ ಸರ್ಕಾರಿ ಜಾಗದ ಲಭ್ಯತೆ ಆಧರಿಸಿ ಗ್ರಾಮವನ್ನು ಸ್ಥಳಾಂತರಿಸಲು ಪರಿಶೀಲಿಸಲಾಗುವುದು’ ಎಂದು ಸಚಿವ ಮಹದೇವಪ್ಪ ಭರವಸೆ ನೀಡಿದರು.

ಈ ಗ್ರಾಮದ ನೂರಾರು ಎಕರೆ ಜಮೀನು ಹಾಗೂ 36 ಮನೆಗಳು ಜಲಾವೃತವಾಗಿದೆ. 36 ಕುಟುಂಬಗಳಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT