ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಾಲೆ ಉಳಿಸದಿದ್ದರೆ ಪ್ರವಾಹಕ್ಕಿಲ್ಲ ತಡೆ!

Published 24 ನವೆಂಬರ್ 2023, 8:17 IST
Last Updated 24 ನವೆಂಬರ್ 2023, 8:17 IST
ಅಕ್ಷರ ಗಾತ್ರ

ಮೈಸೂರು: ಬೋಗಾದಿ– ಗದ್ದಿಗೆ ರಸ್ತೆಗೆ ಸಮೀಪದಲ್ಲಿರುವ ‌ಹುಯಿಲಾಳು ಗ್ರಾಮದ ಕೆರೆಯಿಂದ ಆರಂಭವಾಗುವ ಪೂರ್ಣಯ್ಯ ನಾಲೆಯು ನಗರದ ಕುಕ್ಕರಹಳ್ಳಿ ಕೆರೆವರೆಗೆ 20 ಕಿ.ಮೀ ಉದ್ದವಿದೆ. ಅದನ್ನು ಪುನರುಜ್ಜೀವನಗೊಳಿಸದಿದ್ದರೆ, ನಗರದ ಪಶ್ಚಿಮ ಭಾಗದಲ್ಲಿ ಮಳೆ ಬಂದಾಗ ಪ್ರವಾಹ ಭೀತಿ ಉಂಟಾಗಲಿದೆ.

ಕಳೆದ 3 ದಶಕಗಳಿಂದ ವ್ಯಾಪಕ ನಗರೀಕರಣದಿಂದ ಒತ್ತುವರಿ ಎಗ್ಗಿಲ್ಲದೆ ಮುಂದುವರಿದಿದ್ದು, ಕುಕ್ಕರಹಳ್ಳಿ ಕೆರೆಯ ಜಲಮೂಲವು ಅವಸಾನವಾಗುತ್ತಿದೆ. ನಾಲೆಯ ಬಹುತೇಕ ಭಾಗವು ಒತ್ತುವರಿಯಿಂದ ನಾಶವಾಗಿದೆ. ಕೊನೆಯ 2.5 ಕಿ.ಮೀ. ನಾಲೆಯ ಭಾಗವನ್ನು ಉಳಿಸಿಕೊಂಡರೆ ಕುಕ್ಕರಹಳ್ಳಿ ಕೆರೆಯ ಶುದ್ಧ ನೀರಿನ ಹರಿವನ್ನು ಶೇ 30ರಷ್ಟು ಹೆಚ್ಚಿಸಬಹುದು ಎಂಬುದು ಪರಿಸರವಾದಿಗಳ ಪ್ರತಿಪಾದನೆಯಾಗಿದೆ.

ಕುಕ್ಕರಹಳ್ಳಿ ಕೆರೆಗೆ ಜಯಲಕ್ಷ್ಮೀಪುರಂ, ಒಂಟಿಕೊಪ್ಪಲು ಮತ್ತು ಪಡುವಾರಹಳ್ಳಿ ಕಡೆಯಿಂದ ಬರುವ ಮಳೆ ನೀರು ಕಾಲುವೆಗಳು ಕಲುಷಿತ ನೀರನ್ನೇ ಹೊತ್ತು ತರುತ್ತಿವೆ. ಪೂರ್ಣಯ್ಯ ನಾಲೆ ಪುನರುಜ್ಜೀವನಗೊಳಿಸಿದರೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ.

6 ಕೆರೆಗಳ ನೀರು: ಹುಯಿಲಾಳು ಕೆರೆ, ಮಾದಗಳ್ಳಿ ದೊಡ್ಡಕೆರೆ ಸೇರಿದಂತೆ 6 ಕೆರೆಗೆಳ ಕೋಡಿ ಬಿದ್ದ ನೀರು ಪೂರ್ಣಯ್ಯ ನಾಲೆ ಸೇರುತ್ತಿತ್ತು. ನಾಗವಾಲ, ಹೆಮ್ಮನಗಳ್ಳಿ, ಸಾಹುಕಾರ ಹುಂಡಿ, ಗಾಣಗರಹುಂಡಿ, ಶಂಕರ‍ಪುರ ಹೊಸಹಳ್ಳಿ, ಮರಟಿಕ್ಯಾತನಹಳ್ಳಿ, ದಾಸನಕೊ‍ಪ್ಪಲು, ಬಸವನಹಳ್ಳಿ, ಯಳವರಹುಂಡಿ, ಹಿನಕಲ್‌, ವಿಜಯನಗರ, ಮಾನಸಗಂಗೋತ್ರಿಯಲ್ಲಿ ಬಿದ್ದ ಮಳೆ ನೀರು ಕುಕ್ಕರಹಳ್ಳಿ ಕೆರೆಗೆ ಹರಿಯುತ್ತಿತ್ತು. ಇದೀಗ ಮಾನಸಗಂಗೋತ್ರಿಯಲ್ಲಿ ಬಿದ್ದ ಮಳೆ ನೀರು ಕೆರೆಯ ಒಡಲು ಸೇರುತ್ತಿದೆ. ಉಳಿದ ನೀರು ಬೋಗಾದಿ ಕೆರೆ ಪಾಲಾಗುತ್ತಿದ್ದು, ಮಳೆ ಬಂದಾಗ ಪ್ರವಾಹ ಉಂಟಾಗುತ್ತಿದೆ.

ಕಾಡುವ ಪ್ರವಾಹ: 2022ರ ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ನಗರದ ಬೋಗಾದಿ, ಆನಂದನಗರ, ಆಶ್ರಯ ಬಡಾವಣೆ, ಸಿಎಫ್‌ಟಿಆರ್‌ಐ ಬಡಾವಣೆಗಳ ‍ಪ್ರವಾಹ ಉಂಟಾಗಿತ್ತು. ಪೂರ್ಣಯ್ಯ ನಾಲೆ ಸುಸ್ಥಿತಿಯಲ್ಲಿದ್ದರೆ ಮಳೆ ನೀರು ಸರಾಗವಾಗಿ ಕುಕ್ಕರಹಳ್ಳಿ ಕೆರೆಗೆ ಸಾಗುತ್ತಿತ್ತು. ನಾಲೆ ಅವಸಾನಗೊಂಡಿದ್ದರಿಂದ ಜಲಾನಯನ ಪ್ರದೇಶದಲ್ಲಿ ಬಿದ್ದ ನೀರಿನಿಂದ ಬೋಗಾದಿ ಕೆರೆಗೆ ಹರಿದು, ಅಲ್ಲಿಂದ ಲಿಂಗಾಂಬುಧಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಕೊಚ್ಚಿಕೊಂಡು ಹೋಗಿತ್ತು. ಆನಂದನಗರ ಸೇರಿದಂತೆ ಸುತ್ತಲಿನ ಪ್ರದೇಶ ಜಲಾವೃತಗೊಂಡಿದ್ದವು.

2017ರ ಸೆಪ್ಟೆಂಬರ್‌, 2021ರ ನವೆಂಬರ್‌ನಲ್ಲೂ ಬಿದ್ದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ಬೋಗಾದಿ ಗ್ರಾಮ ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಪ್ರವಾಹ ಪ್ರತಿ ಮಳೆಗಾಲದಲ್ಲೂ ಮುಂದುವರಿದಿದೆ.

‘ಪೂರ್ಣಯ್ಯ ನಾಲೆ ಪುನರುಜ್ಜೀವನಗೊಂಡರೆ ಭಾರಿ ಮಳೆ ಬಂದಾಗ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ಪ್ರವಾಹವನ್ನು ತಪ್ಪಿಸಲಿದೆ’ ಎನ್ನುತ್ತಾರೆ ಪರಿಸರ ತಜ್ಞ ಯು.ಎನ್.ರವಿಕುಮಾರ್.

ಬೋಗಾದಿಯಲ್ಲಿ ನಿಂತ ಮಳೆ ನೀರು (ಸಂಗ್ರಹ ಚಿತ್ರ)
ಬೋಗಾದಿಯಲ್ಲಿ ನಿಂತ ಮಳೆ ನೀರು (ಸಂಗ್ರಹ ಚಿತ್ರ)
ಪೂರ್ಣಯ್ಯ ನಾಲೆಯ ಜಲಾನಯನ ಪ್ರದೇಶದ ನಕ್ಷೆ
ಪೂರ್ಣಯ್ಯ ನಾಲೆಯ ಜಲಾನಯನ ಪ್ರದೇಶದ ನಕ್ಷೆ
ಹುಯಿಲಾಳು ಕೆರೆಯಿಂದ ನಾಲೆ ಆರಂಭ 20 ಕಿ.ಮೀ ಉದ್ದದ ಪೂರ್ಣಯ್ಯ ನಾಲೆ ನಗರಾಭಿವೃದ್ಧಿಯಿಂದ ಒತ್ತುವರಿ
2018ರಲ್ಲಿ ವರದಿ ಸಲ್ಲಿಕೆ
ಎನ್‌ಐಇ ಕಾಲೇಜಿನ ಪ್ರೊ.ಎಂ.ಆರ್‌.ಯದುಪತಿ ಪುಟ್ಟಿ ಅವರು 2018ರ ನವೆಂಬರ್‌ನಲ್ಲಿಯೇ  ‘ಪೂರ್ಣಯ್ಯ ನಾಲೆಯ ಪುನರುಜ್ಜೀಕರಣ’ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ನಾಲೆಯ ಪುನರುಜ್ಜೀವನ ಮಾರ್ಗವನ್ನೂ ತೋರಿದ್ದಾರೆ. l ನಾಲೆಯನ್ನು ನಾಲ್ಕು ಭಾಗಗಳನ್ನು ವಿಂಗಡಿಸಿದ್ದು ನಾಲೆಯ ಕೊನೆಯ ಭಾಗವಾದ ಕುಕ್ಕರಹಳ್ಳಿ ಕೆರೆಯಿಂದ ಆಯಿಷ್‌ವರೆಗಿರುವ ನಾಲೆಯು ಸುಸ್ಥಿತಿಯಲ್ಲಿದ್ದು ಪುನರುಜ್ಜೀವನ ಸುಲಭವಾಗಿದೆ ಎಂದು ಹೇಳಿದ್ದಾರೆ. l ನಾಲೆಯ 2ನೇ ವಿಭಾಗವು ಎಸ್‌ಜೆಸಿಇ ಕಾಲೇಜಿನ ಪಶ್ಚಿಮ ಭಾಗದಿಂದ ಬೋಗಾದಿ ರಸ್ತೆ ಬಿಸಿಲು ಮಾರಮ್ಮನ ದೇವಸ್ಥಾನ ಆಯಿಷ್ ಸಂಸ್ಥೆವರೆಗಿದೆ. 2.5 ಕಿಮೀ ಉದ್ದವಿರುವ ಈ ಭಾಗವನ್ನು ಪುನರುಜ್ಜೀವನಗೊಳಿಸಿದರೆ ಕುಕ್ಕರಹಳ್ಳಿ ಕೆರೆಗೆ ದೊರೆಯುವ ಮಳೆಯ ನೀರಿನ ಪ್ರಮಾಣವು ಶೇ 60ರಷ್ಟು ಹೆಚ್ಚಲಿದೆ. ಕೆಲವು ಭಾಗ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ. l ನಾಲೆಯ 3ನೇ ಭಾಗವು ನಗರಾಭಿವೃದ್ಧಿ ಕಾರಣ ಬಹುಪಾಲು ಒತ್ತುವರಿಯಾಗಿದೆ. ನಾಲೆಯನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. l ನಾಲೆಯ 4ನೇ ಭಾಗದಲ್ಲಿ ನಗರಾಭಿವೃದ್ಧಿ ಇನ್ನೂ ಪೂರ್ಣವಾಗಿ ಆಗಿಲ್ಲ. ಹೀಗಾಗಿ ನಾಲೆಯು ನೆಲದ ಮೇಲೆ ಗೋಚರವಿದ್ದು ತಕ್ಷಣದಲ್ಲಿ ಕಾರ್ಯಪ್ರವೃತ್ತವಾದರೆ ಜಿಲ್ಲಾಡಳಿತ ಉಳಿಸಿಕೊಳ್ಳಬಹುದಾದ ಭಾಗ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT