ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಜಾಗ್ರತೆ ವಹಿಸಿ, ತಪ್ಪು ಕಲ್ಪನೆ ಬೇಡ -ಡಾ.ಅವಿನಾಶ್

‘ಪ್ರಜಾವಾಣಿ’– ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗ
Last Updated 4 ಫೆಬ್ರುವರಿ 2023, 13:39 IST
ಅಕ್ಷರ ಗಾತ್ರ

ಮೈಸೂರು: ‘ಕ್ಯಾನ್ಸರ್‌ ರೋಗದ ಕುರಿತು ಜಾಗ್ರತೆ ವಹಿಸಬೇಕು. ಅದರ ಮಾಹಿತಿ ಹೊಂದಬೇಕು. ಆದರೆ, ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳಬಾರದು’ ಎಂದು ವಿಜಯನಗರದ ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸೀನಿಯರ್ ಕನ್ಸಲ್ಟಂಟ್ ಮೆಡಿಕಲ್ ಆಂಕಾಲಜಿಸ್ಟ್ ಡಾ.ಅವಿನಾಶ್ ಸಿ.ಬಿ. ತಿಳಿಸಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಓಟದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಯಾನ್ಸರ್‌ ತಡೆಗಟ್ಟಬಹುದು ಎನ್ನುವ ಸಂದೇಶವನ್ನು ಎಲ್ಲೆಡೆಯೂ ಪಸರಿಸಬೇಕು’ ಎಂದರು.

‘ತಂಬಾಕು ಮತ್ತು ಮದ್ಯಪಾನದಿಂದ ದೂರವಿರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಹಣ್ಣು–ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್‌ನಿಂದ ದೂರವಿರಬಹುದು. ನೋವು ಅನುಭವಿಸುವುದು, ಚಿಕಿತ್ಸೆಗೆ ಒಳಗಾಗುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಮಹತ್ವದ್ದಾಗುತ್ತದೆ. ತಪಾಸಣೆಗೆ ಅತ್ಯಾಧುನಿಕ ವಿಧಾನಗಳು ಬಂದಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಗ್ಗಿಸಲು ಪಣ ತೊಡೋಣ:

‘ದೇಶದಲ್ಲಿ ಪ್ರತಿ ವರ್ಷ 14 ಲಕ್ಷ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ.‌ ಅದನ್ನು ತಗ್ಗಿಸಲು ನಾವೆಲ್ಲರೂ ಪಣ ತೊಡಬೇಕು. ಬೇಗ ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖವಾಗಲು ಸಾಧ್ಯವಾಗುತ್ತದೆ. ಕಿಮೊಥೆರಫಿ, ರೇಡಿಯೇಷನ್‌ನಿಂದ ನೋವಾಗುತ್ತದೆ ಎಂಬುದು ತಪ್ಪು ಕಲ್ಪನೆ. ಅಂತೆಯೇ ಕ್ಯಾನ್ಸರ್‌ ಅಂಟು ರೋಗವೇನಲ್ಲ. ಆ ರೋಗ ಬಂದವರನ್ನು ಕೀಳಾಗಿ ಕಾಣಬಾರದು’ ಎಂದರು.

ಇದಕ್ಕೂ ಮುನ್ನ ಸ್ಪರ್ಧೆಗೆ ಚಾಲನೆ ನೀಡಿದ ಮೇಯರ್‌ ಶಿವಕುಮಾರ್ ಮಾತನಾಡಿ, ‘ಕ್ಯಾನ್ಸರ್‌ ರೋಗಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವನ್ನು ‘ಪ್ರಜಾವಾಣಿ’ ಹಾಗೂ ಕ್ಲಿಯರ್‌ಮೆಡಿ ರೇಡಿಯಂಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರು ಮಾಡುತ್ತಿರುವುದು ಅಭಿನಂದನಾರ್ಹ. ಅದರಲ್ಲೂ ನಗರದ ಪ್ರಖ್ಯಾತ ಸ್ಥಳವಾದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಪರ್ಧೆ ನಡೆಸಿದ್ದು ಸಾರ್ವಜನಿಕರ ಗಮನಸೆಳೆಯುವಂತೆ ಮಾಡಿದೆ’ ಎಂದರು.

ದೂರವಿರಲು:

‘ಮಾನವ ಸಂಪನ್ಮೂಲವೇ ದೇಶದ ದೊಡ್ಡ ಆಸ್ತಿ. ಈ ಸಂ‍ಪನ್ಮೂಲ ಆರೋಗ್ಯಕರವಾಗಿರಬೇಕು ಎನ್ನುವುದು ಎಲ್ಲರ ಆಶಯ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವುದು ಯೋಗಾಭ್ಯಾಸದಿಂದ ಸಾಧ್ಯ ಎನ್ನುವುದನ್ನು ಅರಿತು ಯೋಗವನ್ನು ಪ್ರೋತ್ಸಾಹಿಸಲಾಗುತ್ತಿದೆ. ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡುವುದು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್ ಮೊದಲಾದ ರೋಗಗಳಿಂದ ದೂರವಿರಬಹುದು’ ಎಂದು ತಿಳಿಸಿದರು.

ಟಿಪಿಎಂಎಲ್‌ ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್ ಜೋಯಿಸ್, ‘ಪ್ರಜಾವಾಣಿ’ ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ‘ಡೆಕ್ಕನ್ ಹೆರಾಲ್ಡ್‌’ ಬ್ಯೂರೋ ಮುಖ್ಯಸ್ಥ ಟಿ.ಆರ್.ಸತೀಶ್‌ಕುಮಾರ್‌, ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್.ಪ್ರಕಾಶ್, ಜಾಹೀರಾತು ವಿಭಾಗದ ವ್ಯವಸ್ಥಾಪಕ ಸ್ಕಂದನ್ ರಾವ್ ಕೆ.ಎನ್., ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯ ಕನ್ಸಲ್ಟಂಟ್ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ಚೈತ್ರಾ ಕಟಕೋಳ್, ಸರ್ಜಿಕಲ್ ಆಂಕಾಲಜಿಸ್ಟ್ ಡಾ.ನಿಶ್ಚಲ್‌ರಾಜ್, ಫೆಸಿಲಿಟಿ ಡೈರಕ್ಟರ್ ಎ.ಆರ್.ಮಂಜುನಾಥ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಕೆ.ಎನ್.ರಾಕೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ಟಿಪಿಎಂಎಲ್ ಸಿಬ್ಬಂದಿ ಇದ್ದರು.

ಎಂ.ಯೋಗೇಂದ್ರ, ಸಿ.ಕೆ.ಮರುಳೀಧರ್, ಪ್ರಭಾಕರ್ ಸ್ಪರ್ಧೆಯನ್ನು ನಡೆಸಿಕೊಟ್ಟರು. ಗೋಕುಲಂನ ಎಂ.ಸಿ.ರವಿಚಂದ್ರ ಉಪಾಹಾರದ ಪ್ರಾಯೋಜಕತ್ವ ವಹಿಸಿದ್ದರು.

ರೇಡಿಯೊ ಜಾಕಿ ರೋಹಿತ್ ನಿರೂಪಿಸಿದರು.

‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ

ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ಜಾಗೃತಿ ಹೆಚ್ಚಬೇಕು. ಮಹಿಳೆಯರು ಸಮಸ್ಯೆಯನ್ನು ಬೇಗ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ಯು ಜಾಗೃತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ’ ಎಂದು ಹೇಳಿದರು.

‘ಎಲ್ಲ ರೀತಿಯ ಕ್ಯಾನ್ಸರ್‌ಗೂ ಈಗ ಆಧುನಿಕ ಚಿಕಿತ್ಸೆ ಲಭ್ಯವಿದೆ. ಭಯಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸುವುದನ್ನು ಮರೆಯಬಾರದು. 40 ವರ್ಷ ವಯಸ್ಸಿನ ನಂತರ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ತಿಳಿಸಿದರು.

‘ಸ್ತನ ಕ್ಯಾನ್ಸರ್‌ ಬಗ್ಗೆ ನಗರಪಾಲಿಕೆಯಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದ ಯೋಜನೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ’ ಎಂದು ಪಾಲಿಕೆ ಅರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್‌ ತಿಳಿಸಿದರು.

ಹನ್ಸಿಕಾ, ಉಷಾ, ಅಮೋಘ್, ಪುರುಷೋತ್ತಮ ಪ್ರಥಮ

ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರ ವಿವರ ಇಂತಿದೆ.

1ರಿಂದ 5ನೇ ತರಗತಿ ಬಾಲಕಿಯರು: ಪ್ರಗತಿ ಎಲೈಟ್‌ನ ಹನ್ಸಿಕಾ ರಾಕೇಶ್, ಕುರುಬೂರಿನ ವಿದ್ಯಾದರ್ಶಿನಿ ಕಾನ್ವೆಂಟ್‌ನ ಇಂಚರಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿವ್ಯಶ್ರೀ.

6ರಿಂದ 10ನೇ ತರಗತಿ: ಎಸ್‌ಎನ್ಎಸ್‌ನ ಅಂಕಿತಾ, ಪ್ರಕೃತಿ ಹಾಗೂ ಪುಟ್ಟಸ್ವಾಮಿ ಶಾಲೆಯ ವೈಷ್ಣವಿ ಎನ್.

ಕಾಲೇಜು ವಿದ್ಯಾರ್ಥಿನಿಯರು: ಕುರುಬೂರಿನ ವಿದ್ಯಾದರ್ಶಿನಿ ಕಾನ್ವೆಂಟ್‌ ಶಾಲೆಯ ತೇಜಸ್ವಿನಿ ಕೆ.ಆರ್., ಚೈತ್ರಾ ಬಿ. ಮತ್ತು ಮೋನಿಕಾ ಎಲ್.

ಮಹಿಳೆಯರ ವಿಭಾಗ: ಉಷಾ ಆರ್., ತುಳಸಿ ಪಿ. ಮತ್ತು ಚಿಕ್ಕಮ್ಮ ಎಂ‌.ಕೆ.

ಬಾಲಕರ ವಿಭಾಗ

1ರಿಂದ 5ನೇ ತರಗತಿ: ಅಮೋಘ್ ಉಡುಪ, ಪೂರ್ಣಚೇತನ ಪಬ್ಲಿಕ್ ಶಾಲೆಯ ಪ್ರಣವ್ ಆರ್.ಪಟೇಲ್ ಹಾಗೂ ಜೆಎಸ್‌ಎಸ್‌ ಶಾಲೆಯ ವಚನ್ ಪ್ರಸಾದ್.

6ರಿಂದ 10ನೇ ತರಗತಿ: ಜೆಎಸ್‌ಎಸ್‌ ಶಾಲೆಯ ಪುಷ್ಯ, ರೋಟರಿ ಮಿಡ್‌ಟೌನ್‌ ಶಾಲೆಯ ಕವಿರಾಜ್ ಕೆ.ಆರ್. ಹಾಗೂ ಡಿಎಂಎಸ್‌ನ ಕಿಸನ್ ಆರ್.

ಕಾಲೇಜು ವಿಭಾಗ: ಮಹಾರಾಜ ಕಾಲೇಜಿನ ಪುರುಷೋತ್ತಮ, ಮರಿಮಲ್ಲಪ್ಪ ಕಾಲೇಜಿನ ವೇದವರುಣ್ ಹಾಗೂ ಮಂಡ್ಯ ಬಾಲಕರ ಕಾಲೇಜಿನ ಎಚ್.ಎಸ್.ಪ್ರಜ್ವಲ್.

ಪುರುಷರ ವಿಭಾಗ: ಮಣಿಕಂಠ, ರಾಹುಲ್ ಹಾಗೂ ಸುಮಂತ್ ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT