ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವೇರಿ ವಿವಾದಕ್ಕೆ ಮಾತುಕತೆಯೇ ಪರಿಹಾರ: ನಟರಾಜ್‌

Published 26 ಮೇ 2024, 15:51 IST
Last Updated 26 ಮೇ 2024, 15:51 IST
ಅಕ್ಷರ ಗಾತ್ರ

ಮೈಸೂರು: ‘ಕಾವೇರಿ ವಿವಾದವನ್ನು ಕೇವಲ ಕಾನೂನಿ‌ನ ಚೌಕಟ್ಟಿನಿಂದ ನೋಡಲು ಆಗದು. ಕಾವೇರಿ ಕುಟುಂಬದ ಎರಡೂ ರಾಜ್ಯಗಳ ರೈತರು ಒಗ್ಗೂಡಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು’ ಎಂದು ಮದ್ರಾಸ್‌ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ವಿ.ಕೆ. ನಟರಾಜ್‌ ಸಲಹೆ ನೀಡಿದರು.

ನಗರದ ಎಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಅಭಿರುಚಿ ಪ್ರಕಾಶನವು ಭಾನುವಾರ ಆಯೋಜಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್‌ ಅವರ ‘ಕಾವೇರಿ ವಿವಾದ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದ ಜನರು ಕಾನೂನಿನಲ್ಲೇ ಎಲ್ಲಕ್ಕೂ ಪರಿಹಾರ ಹುಡುಕುವ ಪ್ರವೃತ್ತಿ ಬಿಡಬೇಕು. ಕಾವೇರಿ‌ ವಿವಾದಕ್ಕೆ ಪರಿಹಾರ ಕೇವಲ ನ್ಯಾಯಾಲಯಗಳಿಂದ ಸಾಧ್ಯವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ನೀರಿನ ಬಳಕೆಯಲ್ಲಿ ಎರಡೂ ರಾಜ್ಯಗಳು ಎಡವಿವೆ. ನೀರಿನ ಮಾಲಿನ್ಯವೂ ಹೆಚ್ಚಿದೆ. ನೀರಿನ ಪೋಲು ತಪ್ಪಿಸಿ ಸದ್ಬಳಕೆ ಮಾಡಿಕೊಳ್ಳುವುದೇ ಸೂಕ್ತ ಪರಿಹಾರ ಆಗಬಲ್ಲದು’ ಎಂದು ಹೇಳಿದರು.

‘ಚಂದ್ರಶೇಖರ್ ಅವರ ಅಧ್ಯಯನದ ಶ್ರಮ ಈ ಕೃತಿಯಲ್ಲಿ ಕಾಣುತ್ತದೆ. ಕಾನೂನಿನ‌ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಅದರ ಜೊತೆಗೆ ಕಾವೇರಿ ರಾಜಕೀಯ ಹಿನ್ನೆಲೆಗೂ ಇನ್ನಷ್ಟು ಗಮನ ಕೊಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ‘ಕಾವೇರಿಯ ಎಲ್ಲ ಒಪ್ಪಂದಗಳು ಮದ್ರಾಸಿನ ಪರವಾಗಿಯೇ ಆಗಿವೆ. ಅದು ಈಗಲೂ ಹಾಗೆಯೇ ಇದೆ. ಕೇಂದ್ರ ಸರ್ಕಾರ ತಮಿಳುನಾಡು ಪರವಾಗಿಯೇ ಇದೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಈ ಕೃತಿ ತೆರೆದಿಡುತ್ತದೆ. ಶುದ್ಧ ಶೈಕ್ಷಣಿಕ ನೆಲೆಗಟ್ಟಿನಲ್ಲಿ ಅಧ್ಯಯನ‌ ಮಾಡಿ ಬರೆದ ಕೃತಿ‌ ಇದು’ ಎಂದು ವಿವರಿಸಿದರು.

‘ತಮಿಳುನಾಡಿನಲ್ಲಿ ಕಾವೇರಿ ವಿವಾದವನ್ನು ಜೀವಂತವಾಗಿ ಇಟ್ಟಷ್ಟು ಅಲ್ಲಿನ ಸರ್ಕಾರಕ್ಕೆ ಅನುಕೂಲ. ಸರ್ಕಾರಗಳನ್ನು ಬದಿಗೆ ಇಟ್ಟು ಕಾವೇರಿ ವಿವಾದವನ್ನು ಬಗೆಹರಿಸಲು ನಾವು ಮನಸ್ಸು ಮಾಡಬೇಕಿದೆ. ದೊಡ್ಡ ಅಣೆಕಟ್ಟೆಗಳನ್ನು ಕಟ್ಟುವ ಕಾಲ ಇದಲ್ಲ. ನೀರಿನ ಸದ್ಬಳಕೆ ಆಗಬೇಕಿದೆ. ಕಾವೇರಿ ವಿವಾದದ ವಿಚಾರದಲ್ಲಿ ವಿವೇಕಯುತ ತೀರ್ಮಾನಗಳು ಆಗಬೇಕಿದೆ’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಧ್ಯಾಪಕ ನಂಜರಾಜ ಅರಸು ಮಾತನಾಡಿ, ‘ಕಾವೇರಿ ನದಿ ನೀರಿನ‌ ವಿಚಾರದಲ್ಲಿ ಇಂದಿಗೂ ನಾವು‌ ಗುಲಾಮಿ‌ ಸ್ಥಿತಿಯಲ್ಲೇ ಇದ್ದೇವೆ. ಇಲ್ಲಿನ ಕಾಂಗ್ರೆಸ್ ಸರ್ಕಾರ ಇಂಡಿಯಾ ಒಕ್ಕೂಟದಲ್ಲಿ‌ ಭಿನ್ನಾಭಿಪ್ರಾಯ ಬರಬಾರದು ಎನ್ನುವ ಕಾರಣಕ್ಕೆ ತಮಿಳುನಾಡಿಗೆ ನೀರು ಹರಿಸುತ್ತಿದೆ’ ಎಂದು ದೂರಿದರು.

ಕೃತಿಯ ಲೇಖಕ ಸಿ.ಚಂದ್ರಶೇಖರ್, ಪ್ರಕಾಶಕ ಅಭಿರುಚಿ ಗಣೇಶ್, ರಂಗಸ್ವಾಮಿ ಪಾಲ್ಗೊಂಡರು.

ಕಾವೇರಿ ಹೋರಾಟವನ್ನು ಕೆಲವರು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅನ್ಯರು ಬಂದು ರೈತ ಚಳವಳಿಯನ್ನು ಹೈಜಾಕ್‌ ಮಾಡುವುದನ್ನು ತಪ್ಪಿಸಬೇಕು
ಪ್ರೊ.ವಿ.ಕೆ. ನಟರಾಜ್‌ ಮಾಜಿ ನಿರ್ದೇಶಕ ಮದ್ರಾಸ್‌ ಅಭಿವೃದ್ಧಿ ಅಧ್ಯಯನ ಸಂಸ್ಥೆ

ಕೃತಿ ಪರಿಚಯ

ಕೃತಿ: ಕಾವೇರಿ ವಿವಾದ

ಲೇಖಕ: ಸಿ. ಚಂದ್ರಶೇಖರ್

ಪುಟ: 236

ಬೆಲೆ: ₹400

ಪ್ರಕಾಶಕರು: ಅಭಿರುಚಿ ಪ್ರಕಾಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT